ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ: ಬಗೆದಷ್ಟೂ ಆಳಕ್ಕೆ

ಬೆಳಗಾವಿಯ ಎರಡು ತಂಡಗಳು ಸೇರಿ ನಾಲ್ಕು ತಂಡಗಳ ಪತ್ತೆ, ಬೇರುಮಟ್ಟದಿಂದ ಜಾಲಾಡಿದ ತನಿಖಾಧಿಕಾರಿಗಳು
Last Updated 23 ಆಗಸ್ಟ್ 2022, 16:14 IST
ಅಕ್ಷರ ಗಾತ್ರ

ಬೆಳಗಾವಿ: ಕೆ‍ಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದಿನದಿಂದದಿನಕ್ಕೆ ಆಳಕ್ಕೆ ಹೋಗುತ್ತಿದೆ. ಪೊಲೀಸರ ಕರಾರುವಾಕ್‌ ತನಿಖೆಯಿಂದಾಗಿ ಮೂಲಬೇರಿನಿಂದ ಹಿಡಿದು ಈಗಾಗಲೇ 16 ಆರೋಪಿಗಳ ಪಟ್ಟಿ ಸಿದ್ಧವಾಗಿದೆ.

ಮಂಗಳವಾರ ಮತ್ತೆ ಮೂವರನ್ನು ವಶಕ್ಕೆ ಪಡೆದ ಪೊಲೀಸರು ಇಡೀ ದಿನ ವಿಚಾರಣೆ ನಡೆಸಿದರು. ಈ ಮೂವರೂ ಬೆಳಗಾವಿ ನಗರದವರು. ಇವರಿಂದ ಇನ್ನಷ್ಟು ಮಹತ್ವದ ಸುಳಿವು ಸಿಕ್ಕಿದ್ದು ಬುಧವಾರದಿಂದ ಮತ್ತಷ್ಟು ಕಡೆ ಪೊಲೀಸರು ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 9 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇವರಲ್ಲಿ ಮೊದಲು ಬಂಧಿತನಾದ ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬ ಅಭ್ಯರ್ಥಿ ನೀಡಿದ ಸುಳಿವಿನ ಮೇರೆಗೆ ಉಳಿದ ಎಂಟು ಮಂದಿ ಸಿಕ್ಕಿಬಿದ್ದರು. ಈತನೇ ಹೇಳಿದ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ.

ಸೋಮವಾರ ಬಂಧಿಸಲಾದ ಉಪ ಪ್ರಾಂಶುಪಾಲ ಹಾಗೂ ಅವರ ಮಗನಿಂದ ಸಿಕ್ಕ ಮಾಹಿತಿ ಆಧರಿಸಿ ನಗರದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮಂಗಳವಾರ ಇಡೀ ದಿನ ಅವರನ್ನು ವಿಚಾರಣೆ ನಡೆಸಲಾಯಿತು. ಪ್ರಕರಣದಲ್ಲಿ ಇನ್ನೂ ಹಲವರು ಪಾಲ್ಗೊಂಡ ಬಗ್ಗೆ ನಿಖರ ಮಾಹಿತಿ ಇವರಿಂದ ಸಿಕ್ಕಿದೆ ಎಂದು ಮೂಲಗಳು ಖಚಿಯಪಡಿಸಿವೆ.

ಪ್ರಕರಣ ಹೊರಹಾಕಿದ್ದು ಅಭ್ಯರ್ಥಿಯೇ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ವೀರೇಶ ದೊಡ್ಡಮನಿ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸಿದೆ.

ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್‌ ವಾಚ್‌ ಹಾಗೂ ಬ್ಲೂಟೂತ್‌ ಉಪಕರಣ ಬಳಸಿ ಅಕ್ರಮ ಎಸಗಿದ್ದಾನೆ ಎಂದು ಇನ್ನೊಬ್ಬ ಅಭ್ಯರ್ಥಿ ಶ್ರೀಧರ ಕಮತರ ಆ. 8ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಅವಸರ ಮಾಡದೇ, ಮೊದಲು ಮೂಲಗಳು ಹಾಗೂ ಜಾಲದ ಮಾಹಿತಿ ಕಲೆಹಾಕಿದ ಪೊಲೀಸರು ನಂತರ ಕಾರ್ಯಾಚರಣೆ ಶುರು ಮಾಡಿದರು. ಹೀಗಾಗಿ, ಮೂರೇ ದಿನಗಳಲ್ಲಿ ಪ್ರಮುಖ 16 ಆರೋಪಿಗಳ ಪಟ್ಟಿ ಕೈ ಸೇರಿದೆ.

*

ಸಂಜು ಮೂಲ ಆರೋಪಿ

ನಗರದ ನಿವಾಸಿ ಸಂಜು ಭಂಡಾರಿ ಎಂಬ ವ್ಯಕ್ತಿಯೇ ಈ ಪ್ರಕರಣದ ಮೂಲ ಆರೋಪಿ ಎಂದು ಇದುವರೆಗೆ ಖಚಿತವಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಆತ ಸಿಕ್ಕ ನಂತರವೇ ಇದರ ಜಾಲ ಎಲ್ಲೆಲ್ಲಿಗೆ ಹರಡಿದೆ ಎಂಬ ಸತ್ಯಗಳು ಬಿಚ್ಚಿಕೊಳ್ಳಲಿವೆ.

2021 ಅಕ್ಟೋಬರ್‌ನಲ್ಲಿ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯಲ್ಲಿಯೂ ಸಂಜು ಭಂಡಾರಿ ಅಕ್ರಮ ಎಸಗಿದ ಆರೋಪ ಹೊತ್ತಿದ್ದಾನೆ. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ. ಆ ‍ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಮತ್ತೆ ಕೆಪಿಟಿಸಿಎಲ್‌ ಪರೀಕ್ಷೆಯಲ್ಲೂ ವಾಮ ಮಾರ್ಗಕ್ಕೆ ದಾರಿ ಮಾಡಿಕೊಟ್ಟಿದ್ದಾನೆ. ಸದ್ಯ ಬಂಧಿತ ಅಭ್ಯರ್ಥಿಗಳು ಈತನ ಸಂಪರ್ಕ ಹೊಂದಿದ ವಿಷಯವನ್ನು ಪೊಲೀಸರು ಖಚಿತ ಮಾಡಿಕೊಂಡಿದ್ದಾರೆ.

*

ಒಂದು ಹುದ್ದೆಗೆ ₹ 6 ಲಕ್ಷ ನಿಗದಿ

ಮೂಲ ಆರೋಪಿ ಸಂಜು ಭಂಡಾರಿ, ಉಪಪ್ರಾಂಶುಪಾಲ ಮಾರುತಿ ಹಾಗೂ ಅವರ ಮಗ ಸಮಿತ್‌ಕುಮಾರ ಮಧ್ಯೆ ಹೇಗೆ ಸಂಪರ್ಕ ಬೆಳೆದಿದೆ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ, ಅಭ್ಯರ್ಥಿಗಳು ಹಾಗೂ ಡೀಲ್‌ ಮಾಡಿದವರ ಮಧ್ಯೆ ಹಣಕಾಸಿನ ವರ್ಗಾವಣೆ ಆದ ದಾಖಲೆಗಳು ಪೊಲೀಸರಿಗೆ ಲಭ್ಯವಾಗಿವೆ.

ಕೆಪಿಟಿಸಿಎಲ್‌ ಕಿರಿಯ ಸಹಾಯಕರ ಒಂದು ಹುದ್ದೆಗೆ ತಲಾ ₹ 6 ಲಕ್ಷ ಲಂಚವನ್ನು ಇವರು ನಿಗದಿ ಮಾಡಿದ್ದರು. ಅದರಂತೆ ಪರೀಕ್ಷೆ ಬರೆದ ನಂತರ ₹ 4 ಲಕ್ಷ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡ ನಂತರ ಉಳಿದ ₹ 2 ಲಕ್ಷ ಕೊಡಬೇಕು ಎಂದು ಕರಾರು ಮಾಡಿಕೊಂಡಿದ್ದರು.

‘ಡೀಲ್‌’ ಪ್ರಕಾರ ನಾಲ್ವರು ಅಭ್ಯರ್ಥಿಗಳಿಂದ ತಲಾ ₹ 3 ಲಕ್ಷದಿಂದ ₹ 4 ಲಕ್ಷ ಹಣ ಪಡೆದು, ಅದನ್ನು ತಮ್ಮ ಬ್ಯಾಂಕ್‌ ಖಾತೆಗೆ ಜಮೆ ಕೂಡ ಮಾಡಿಕೊಂಡಿದ್ದಾರೆ ಎಂಬುದು ಮೂಲಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT