ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಯುವ ಕಾಂಗ್ರೆಸ್ ಚುನಾವಣೆ: ಯಾರಿಗೆ ಓಟು ಯಾರಿಗೆ ಒಳ ಏಟು!

Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿ) ಸಾಂಸ್ಥಿಕ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಸದ್ದಿಲ್ಲದೆ ನಡೆಯುತ್ತಿದ್ದ ಕೆಪಿವೈಸಿ ಅಧ್ಯಕ್ಷನ ಆಯ್ಕೆ, ಈ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರ ಪುತ್ರರು ಕಣದಲ್ಲಿರುವುದು ಅದಕ್ಕೆ ಒಂದು ಕಾರಣವಾದರೆ, ಆಕಾಂಕ್ಷಿಗಳು ಬಹಳಷ್ಟು ಬೆವರು ಹರಿಸುತ್ತಿರುವುದು ಇನ್ನೊಂದು ಕಾರಣ. ಯಾರು ಎಷ್ಟೇ ಪ್ರಯತ್ನಪಟ್ಟರೂ ಹಿರಿಯ ನಾಯಕರು ಯಾರ ಪರವಾಗಿ ಇಶಾರೆ ತೋರುವರೋ ಅವರಿಗೆ ಗೆಲುವಿನ ಹಾದಿ ಸುಲಭವಾಗಲಿದೆ ಎನ್ನುತ್ತವೆ ಪಕ್ಷದ ಮೂಲಗಳು. ಆದ್ದರಿಂದ ಯಾರಿಗೆ ಓಟು, ಯಾರಿಗೆ ಒಳ ಏಟು ಎಂಬುದರ ಮೇಲೆ ಸೋಲು ಗೆಲುವು ನಿರ್ಧಾರವಾಗಲಿದೆ.

ಎಂಪಿ, ಎಂಎಲ್‌ಎ ಚುನಾವಣೆ ಅಭ್ಯರ್ಥಿಗಳು: ದಕ್ಷಿಣ ಕನ್ನಡ ಜಿಲ್ಲೆಯ ಮಿಥುನ್ ರೈ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲೊಬ್ಬರು. 2019ರಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಸ್ಪರ್ಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಹ ಅವರು ಕೆಲಸ ಮಾಡಿದ್ದಾರೆ.

ಬೆಂಗಳೂರಿನ ಎಚ್‌.ಎಸ್. ಮಂಜುನಾಥ ಇನ್ನೊಬ್ಬ ಪ್ರಮುಖ ಆಕಾಂಕ್ಷಿ. ಹಾಲಿ ಸಚಿವ ಕೆ. ಗೋಪಾಲಯ್ಯ ಅವರ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ವಿದ್ಯಾರ್ಥಿ ಕಾಂಗ್ರೆಸ್‌ (ಎನ್ಎಸ್‌ಯುಐ) ರಾಜ್ಯ ಘಟಕದ ಅಧ್ಯಕ್ಷ.

ಬೆಂಗಳೂರಿನಲ್ಲಿ ನಡೆದ ಗಲಾಟೆ ಪ್ರಕರಣವೊಂದರಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮೊಹಮ್ಮದ್‌ ಹ್ಯಾರಿಸ್ ನಲಪಾಡ್ ರೇಸ್‌ನಲ್ಲಿರುವ ಮತ್ತೊಬ್ಬ ಪ್ರಮುಖ ಆಕಾಂಕ್ಷಿ. ಅವರ ತಂದೆ ಎನ್‌.ಎ. ಹ್ಯಾರಿಸ್ ಶಾಂತಿನಗರ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ. ಬೆಂಗಳೂರು ಮಹಾನಗರ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಲಪಾಡ್‌ ಈಗಾಗಲೇ ‘ಹವಾ’ ರಾಜಕಾರಣ ಮಾಡುತ್ತಾ ಗೆಲುವಿಗಾಗಿ ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಇನ್ನೊಬ್ಬ ಆಕಾಂಕ್ಷಿ ರಕ್ಷಾ ರಾಮಯ್ಯ ಅವರು ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಮಗ. ಭಾರತೀಯ ಯುವ ಕಾಂಗ್ರೆಸ್ ‌ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖ ಆಕಾಂಕ್ಷಿಗಳಲ್ಲಿ ಮೂವರು ಬೆಂಗಳೂರಿನವರು ಎಂಬುದು ಇನ್ನೊಂದು ವಿಶೇಷ.

ಮಂಜುನಾಥ ಮತ್ತು ಮಿಥುನ್ ರೈ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಇವರ ಪ್ಲಸ್ ಪಾಯಿಂಟ್ ಎನ್ನಲಾಗಿದೆ. ಕೊನೆಯ ಗಳಿಗೆಯಲ್ಲಿ ಇವರಲ್ಲಿ ಒಬ್ಬರು ಕಣದಿಂದ ಹಿಂದೆ ಸರಿದರೆ ಇನ್ನೊಬ್ಬರ ಹಾದಿ ಇನ್ನಷ್ಟು ಸುಲಭವಾಗಲಿದೆ ಎಂಬ ಚರ್ಚೆಯೂ ನಡೆದಿದೆ.

ಆಕಾಂಕ್ಷಿಗಳು ಗೆಲುವಿಗಾಗಿ ತಮ್ಮದೇ ಶೈಲಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಎಲ್ಲರೂ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಮ್ಮ ಬೆಂಬಲಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಸದಸ್ಯರನ್ನಾಗಿ ಮಾಡಿ ಗೆಲುವನ್ನು ಸುಲಭ ಮಾಡಿಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.

ನಲಪಾಡ್ ಅಬ್ಬರ: ನಲಪಾಡ್ ಅವರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಹ ಭೇಟಿ ನೀಡಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅದೇ ನೆಪದಲ್ಲಿ ಸಂವಾದ ಕಾರ್ಯಕ್ರಮಗಳನ್ನು ಸಹ ನಡೆಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರು ಇದ್ದಾರೆ ಎಂದು ಸಹ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದೇ ಸಂಗತಿ ಅವರಿಗೆ ನಕಾರಾತ್ಮಕವಾಗುವ ಸಾಧ್ಯತೆ ಆಗಬಹುದು ಎಂಬ ಅಭಿಪ್ರಾಯ ಸಹ ಕೇಳಿಬಂದಿದೆ.

ಶಕ್ತಿ ಪ್ರದರ್ಶನದ ರೀತಿಯ ನಡವಳಿಕೆ ಕಾಂಗ್ರೆಸ್ ಶೈಲಿ ಅಲ್ಲ. ಹಿರಿಯ ಮುಖಂಡರು ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಕೆಪಿಸಿಸಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣೆ ಎಂಬ ಕಾರಣಕ್ಕೆ ಮಾತ್ರವಲ್ಲ, ಸದಾ ಕಾಲ ಸಕ್ರಿಯರಾಗಿರುವ ಯುವ ನಾಯಕರು ಎಂದು ಮಿಥುನ್ ರೈ ಮತ್ತು ಮಂಜುನಾಥ ಅವರನ್ನು ಗುರುತಿಸಲಾಗುತ್ತದೆ. ರಕ್ಷಾ ರಾಮಯ್ಯ ಅವರು ಸಹ ತಮ್ಮದೇ ಶೈಲಿಯಲ್ಲಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಬಲಪಡಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಹಿರಿಯರ ಆಶೀರ್ವಾದ ಯಾರಿಗೆ ಸಿಗಲಿದೆ, ಯುವ ನಾಯಕನ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ತೆರೆಬೀಳಲಿದೆ. ಗೆದ್ದವರಿಗೆ ಅಧ್ಯಕ್ಷ ಗಾದಿ ಸಿಗಲಿದೆ. ಸೋತರೆ, ಕಾಂಗ್ರೆಸ್‌ನಲ್ಲಿ ಸುದೀರ್ಘ ಕಾಲ ರಾಜಕಾರಣ ಮಾಡುವ ಬಯಸುವ ಯುವಕರಿಗೆ ‘ಏಟು ಒಳ ಏಟಿನ‘ ರಾಜಕಾರಣ ಮೊದಲ ಪಾಠವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT