ಶನಿವಾರ, ಜೂನ್ 19, 2021
21 °C
ಮಲಪ್ರಭಾ, ಘಟಪ್ರಭಾ ನದಿ ಹೊರಹರಿವು ಪ್ರಮಾಣ ಇಳಿಕೆ

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮಳೆ: ಕೃಷ್ಣೆ ನೀರಿನ ಮಟ್ಟ ಏರಿಕೆ, ಜನರ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ದಕ್ಷಿಣ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮಳೆ ಮುಂದು ವರಿದಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದು, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಬೆಳಗಾವಿಯ ರಾಜಾಪೂರ ಜಲಾ ಶಯದಿಂದ 1.63 ಲಕ್ಷ ಕ್ಯುಸೆಕ್‌ ಮತ್ತು ದೂಧ್‌ಗಂಗಾ ನದಿಯಿಂದ 30ಸಾವಿರ ಕ್ಯುಸೆಕ್‌ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.93ಲಕ್ಷ ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ. ಈ ಪ್ರಮಾಣ ಜಾಸ್ತಿಯಾಗುವ ಮುನ್ಸೂಚನೆ ಇದೆ.

ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಮಳಿಬಾಗ, ಮಾಂಜರಿಯ ಡೋಣೆ ತೋಟದ ಜನವಸತಿ ಪ್ರದೇಶದ ಜನರನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಯಿತು.

ಕೆಲವರು ಹರಿಯುವ ನೀರಿನಲ್ಲೇ ನಡೆದುಕೊಂಡು ಬಂದರು. ಯಡೂರ ಬಳಿ ರೈತರು ನದಿ ದಂಡೆಯ ಜಮೀನುಗಳಲ್ಲಿದ್ದ ಪಂಪ್‌
ಸೆಟ್‌ಗಳನ್ನು ಸ್ಥಳಾಂತರಿಸಿದರು.

ಕಾಗವಾಡ ತಾಲ್ಲೂಕಿನ ಕೃಷ್ಣ–ಕಿತ್ತೂರ, ಬಣಿಜವಾಡ, ಕಾತ್ರಾಳ ತೋಟದ ವಸತಿಗೂ ನೀರು ನುಗ್ಗಿದೆ. ಉಗಾರ ಖುರ್ದ-ಉಗಾರ ಬುದ್ರುಕ  ನಡುವಿನ ಸೇತುವೆ ಮುಳುಗಿದೆ. ಮಲಪ್ರಭಾ ನದಿ ಪ್ರವಾಹದಿಂದ ರಾಮದುರ್ಗ–ತೊರಗಲ್‌ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಘಟಪ್ರಭಾ ನದಿ ಪ್ರವಾಹದಿಂದ ನೀರು ನುಗ್ಗಿದ್ದರಿಂದ ಗೋಕಾಕ ತಾಲ್ಲೂಕಿನ ಮೆಳವಂಕಿ ಗ್ರಾಮದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ: ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೀರನೂರು ಗ್ರಾಮದ ಎಂಟು ಕುಟುಂಬ ಗಳು ಪಟ್ಟು ಹಿಡಿದಿವೆ. ಮಲಪ್ರಭಾ ನದಿಯ ಪ್ರವಾಹದ ನೀರಿನಲ್ಲಿಯೇ ಸಂತ್ರಸ್ತರು ವಾಸವಿದ್ದಾರೆ.

‘ಕಳೆದ ವರ್ಷ ನೀರು ನುಗ್ಗಿದಾಗ 22 ಕುಟುಂಬಗಳು ಸಂತ್ರಸ್ತವಾಗಿದ್ದವು. ಅವುಗಳಲ್ಲಿ ಕೆಲವರಿಗೆ ತಗಡಿನ ಶೆಡ್ ವ್ಯವಸ್ಥೆ ಮಾಡಲಾಗಿದೆ. ನಾವು ರಸ್ತೆಯಲ್ಲಿ ಟೆಂಟ್ ಹಾಕಿಕೊಂಡು ವಾಸವಿದ್ದೆವು. ಪ್ರವಾಹ ಇಳಿದ ನಂತರ ನಮ್ಮನ್ನು ಯಾರೂ ಕೇಳಲಿಲ್ಲ. ನಮಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ತಾತ್ಕಾಲಿಕ ನೆಲೆಗಳಿಗೆ ಹೋಗುವುದಿಲ್ಲ’ ಎಂದು ಗ್ರಾಮದ ಈರನಗೌಡ ತಿಮ್ಮನಗೌಡರ ಹೇಳಿದರು.

ಜಲಾವೃತವಾಗಿರುವ ಮನೆಗಳ ಸದಸ್ಯರ ಮನವೊಲಿಸಿ ತಾತ್ಕಾಲಿಕ ಶೆಡ್‌ಗಳಿಗೆ ಸ್ಥಳಾಂತರಿಸುವಂತೆ ಪಿಡಿಒ ಪೀರ‌ಸಾಬ್ ನದಾಫ್ ಅವರಿಗೆ ಸೂಚಿಸಿ ತಹಶೀಲ್ದಾರ್ ಸುಹಾಸ್ ಇಂಗಳೆ ವಾಪಸ್ ತೆರಳಿದರು.

ಸಂಚಾರ ಬಂದ್: ಗದಗ ಜಿಲ್ಲೆ ಕೊಣ್ಣೂರು–ಬಾಗಲಕೋಟೆ ಜಿಲ್ಲೆ ಗೋವನಕೊ‍ಪ್ಪ ನಡುವಿನ ಸಂಪರ್ಕ ಸೇತುವೆ ಬಳಿ ಹೆದ್ದಾರಿಯ ಮೇಲೆ ಮಲಪ್ರಭಾ ನದಿ ಪ್ರವಾಹದ ನೀರು ಹರಿಯುತ್ತಿದೆ. ಹೀಗಾಗಿ ಮಂಗಳ ವಾರದಿಂದ ಹುಬ್ಬಳ್ಳಿ–ಸೊಲ್ಲಾ‍ಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಹಂಪಿ ಪುರಂದರ ಮಂಟಪ ಮುಳುಗಡೆ
ಹೊಸಪೇಟೆ:
ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು ಹರಿಸುತ್ತಿರುವುದರಿಂದ ತಾಲ್ಲೂಕಿನ ಹಂಪಿ ಪುರಂದರ ಮಂಟಪ ಮಂಗಳವಾರ ಸಂಪೂರ್ಣ ಮುಳುಗಡೆಯಾಗಿದೆ.


ಹೊಸಪೇಟೆ ಸಮೀಪದ ಹಂಪಿ ಪುರಂದರ ಮಂಟಪ ತುಂಗಭದ್ರಾ ನದಿ ನೀರಿನಲ್ಲಿ ಮುಳುಗಿರುವುದು

ಹಂಪಿಯ ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕವೂ ಜಲಾವೃತವಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ತೆಗೆದು ನದಿಗೆ 67,000 ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದರಿಂದ ನದಿ ಪಾತ್ರಕ್ಕೆ ಹೊಂದಿಕೊಂಡಂತೆ ಇರುವ ಈ ಎರಡೂ ಸ್ಮಾರಕಗಳು ಮುಳುಗಿವೆ.

ತೆಪ್ಪ ದುರಂತ: ಇನ್ನೂ ಪತ್ತೆಯಾಗದ ನಾಲ್ವರು
ಶಕ್ತಿನಗರ (ರಾಯಚೂರು ಜಿಲ್ಲೆ): ಪೆ
ದ್ದಕುರಂ (ಕುರ್ವಕುಲ) ಗ್ರಾಮ ಸಮೀಪದ ಕೃಷ್ಣಾನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾದ ನಾಲ್ಕು ಜನರ ಶೋಧ ಕಾರ್ಯ ಮಂಗಳವಾರವೂ ಮುಂದುವರೆಯಿತು.

ಆಗಾಗ್ಗೆ ಸುರಿಯುತ್ತಿದ್ದ ಮಳೆ ನಡುವೆಯೇ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ತಂಡ ಪ್ರತ್ಯೇಕ ಬೋಟ್‌ಗಳಲ್ಲಿ ದಿನಪೂರ್ತಿ ಹುಡುಕಾಟ ನಡೆಸಿದರೂ ನಾಲ್ವರು ಪತ್ತೆಯಾಗಲಿಲ್ಲ.

ರಾಯಚೂರು ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್ ಅವರು ಎನ್‌ಡಿಆರ್‌ಎಫ್‌ ತಂಡ ಸಿಬ್ಬಂದಿಯೊಂದಿಗೆ ಬೋಟ್‌ ಮೂಲಕ ನದಿಯೊಳಗೆ 3 ತಾಸು ಹುಡುಕಾಟ ನಡೆಸಿದರು.

‘ತೆಲಂಗಾಣ ಮತ್ತು ಕರ್ನಾಟಕ ಗಡಿಭಾಗ ಜುರಾಲಾದಲ್ಲಿ ಪ್ರಿಯಾದರ್ಶಿನಿ ಅಣೆಕಟ್ಟು ಇದೆ. ಪ್ರವಾಹಕ್ಕೆ ಕೊಚ್ಚಿ ಹೋಗಿ ನಾಲ್ವರು ಅಣೆಕಟ್ಟು ಬಳಿ ಸಿಲುಕಿರುವ ಶಂಕೆ ಇದೆ’ ಎಂದು ಎನ್‌ಡಿಆರ್‌ಎಫ್ ಇನ್ಸ್‌ಪೆಕ್ಟರ್‌ ದಿವಕರ್‌ಸಿಂಗ್ ರವಿ ಮತ್ತು ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್ ತಿಳಿಸಿದರು.

ಕರಾವಳಿ: ಐದು ದಿನ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆ.19ರಿಂದ 23ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇರುವುದರಿಂದ ಐದೂ ದಿನ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮಳೆ-ಎಲ್ಲಿ, ಎಷ್ಟು?: ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 12 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಆಗುಂಬೆ 10, ಸುಬ್ರಹ್ಮಣ್ಯ 8, ಮೂಡುಬಿದರೆ, ಹೊಸನಗರ 7, ಸುಳ್ಯ, ಕೊಪ್ಪ 5, ಭಟ್ಕಳ, ಉಡುಪಿ, ಪುತ್ತೂರು, ಭಾಗಮಂಡಲ, ಚಿಕ್ಕಮಗಳೂರು 4, ಮಂಗಳೂರು 3, ಉಪ್ಪಿನಂಗಡಿ, ಅಂಕೋಲಾ, ಕಾರವಾರ, ಬೆಳಗಾವಿ, ಸೊರಬ, ಸಾಗರ, ಕಂಪ್ಲಿ, ಸೋಮವಾರಪೇಟೆ, ಗುಬ್ಬಿ, ತರೀಕೆರೆ, ಗೌರಿಬಿದನೂರು, ಶಿವಮೊಗ್ಗ 2, ನಿಪ್ಪಾಣಿ, , ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ, ತುಮಕೂರು, ಶಿಡ್ಲಘಟ್ಟ, ದಾವಣಗೆರೆ, ದೇವನಹಳ್ಳಿ ಹಾಗೂ ಚಿಂತಾಮಣಿಯಲ್ಲಿ ತಲಾ 1ಸೆಂ.ಮೀ ಮಳೆಯಾಗಿದೆ.

   ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

   ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

   ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

   ಈ ವಿಭಾಗದಿಂದ ಇನ್ನಷ್ಟು