ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಬೃಂದಾವನ ಬಂದ್‌: ನಿಗಮಕ್ಕೆ ₹50 ಲಕ್ಷ ನಷ್ಟ

Last Updated 23 ನವೆಂಬರ್ 2022, 12:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಯಾನ ನ.6ರಿಂದ ಅನಿರ್ಧಿಷ್ಟ ಅವಧಿವರೆಗೆ ಬಂದ್‌ ಆಗಿದ್ದು ಕಾವೇರಿ ನೀರಾವರಿ ನಿಗಮಕ್ಕೆ ₹ 50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.

ಅ.21ರಿಂದ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡ ಕಾರಣ ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂಧ ಹೇರಲಾಗಿದೆ. ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ, ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಜನರು ಭೇಟಿ ನೀಡುತ್ತಾರೆ. ತಲಾ ₹ 50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 16 ದಿನಗಳಿಂದ ಪ್ರವೇಶ ಬಂದ್‌ ಆಗಿರುವ ಕಾರಣ ನಿಗಮಕ್ಕೆ ಆದಾಯ ನಷ್ಟ ಉಂಟಾಗಿದೆ.

‘ಪ್ರವಾಸಿಗರ ಮೇಲೆ ಚಿರತೆ ದಾಳಿ ಆತಂಕ ಇರುವುದರಿಂದ ಅದು ಸೆರೆ ಸಿಗುವವರೆಗೆ ಪ್ರವಾಸಿಗರಿಗೆ ಪ್ರವೇಶ ನೀಡದಿರುವ ನಿರ್ಧಾರ ಕೈಗೊಳ್ಳಲಾಗಿದೆ. ನಿಗಮದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೋವಿಡ್‌ ನಂತರ ಇದೇ ಮೊದಲ ಬಾರಿಗೆ ಹೆಚ್ಚು ದಿನ ಉದ್ಯಾನ ಬಂದ್‌ ಆಗಿದ್ದು ನಿಗಮಕ್ಕೆ ಆದಾಯ ನಷ್ಟವಾಗುತ್ತಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ವ್ಯಾಪಾರಿಗಳಿಗೂ ನಷ್ಟ: ಕೆಆರ್‌ಎಸ್‌ನ ಬೃಂದಾವನದಲ್ಲಿ ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ನೂರಾರು ವ್ಯಾಪಾರಿಗಳು ಈಗ ಅವರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿದಂತೆ ನೂರಾರು ಅಂಗಡಿ ಮುಂಗಟ್ಟುಗಳಿವೆ. ಬೃಂದಾವನದ ಒಳಗಿರುವ ರಾಯಲ್‌ ಆರ್ಕಿಡ್‌, ಮಯೂರ ಹೋಟೆಲ್‌ಗಳು ಕೂಡ ಪ್ರವಾಸಿಗರಿಲ್ಲದೇ ನಷ್ಟ ಅನುಭವಿಸುತ್ತಿವೆ.

‘ಬೃಂದಾವನದಲ್ಲಿ ಚಿರತೆ ಇದೆಯೋ, ಇಲ್ಲವೋ ಎಂಬ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೂ ಪತ್ತೆ ಮಾಡಿಲ್ಲ. ಆದಷ್ಟು ಬೇಗ ಅಧಿಕಾರಿಗಳು ಪತ್ತೆ ಹಚ್ಚಿ ಬೃಂದಾವನ ತೆರೆಯಬೇಕು. ಉದ್ಯಾನ ಬಂದ್‌ ಆಗಿರುವ ಕಾರಣ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಿದೆ’ ಎಂದು ವರ್ತಕ ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT