ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಮಣಿದರೂ ಪಟ್ಟು ಸಡಿಲಿಸದ ‘ಕೈ’

ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಯತ್ನ l ಬಂಧನಕ್ಕೆ ಆಗ್ರಹಿಸಿ ವಿಧಾನಸೌಧ ಪೂರ್ವದ್ವಾರದಲ್ಲಿ ಅಹೋರಾತ್ರಿ ಧರಣಿ
Last Updated 14 ಏಪ್ರಿಲ್ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ನಾಯಕರು, ಮಧ್ಯಾಹ್ನದ ಬಳಿಕ ವಿಧಾನಸೌಧದ ಪೂರ್ವದ್ವಾರದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.

‘ಕೈ’ ನಾಯಕರು ಹೋರಾಟ ತೀವ್ರಗೊಳಿಸುತ್ತಿದ್ದಂತೆ ಅತ್ತ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಈಶ್ವರಪ್ಪ ‌ಘೋಷಿಸಿದರು. ಆದರೂ ಪಟ್ಟು ಸಡಿಲಿಸದ ಕಾಂಗ್ರೆಸ್‌ ನಾಯಕರು, ‘ಪ್ರಕರಣದ ಮೊದಲ ಆರೋಪಿ ಈಶ್ವರಪ್ಪ ಅವರನ್ನು ಬಂಧಿಸುವರೆಗೆ ಮತ್ತು ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಘೋಷಿಸಿದರು.

ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಮುಖ್ಯಮಂತ್ರಿ ನಿವಾಸದ ಕಡೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತಿತರರು ಬ್ಯಾರಿಕೇಡ್ ಹತ್ತಿ ಜಿಗಿಯಲು ಯತ್ನಿಸಿದರು. ಆಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ, ನೂಕಾಟ ಜೋರಾದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಕೆಲವು ಮುಖಂಡರು ಮತ್ತುಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದರು.

ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಸಲೀಂ ಅಹಮ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಟಿ.ಬಿ.ಜಯಚಂದ್ರ, ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಅನೇಕ ನಾಯಕರನ್ನೂ ವಶಕ್ಕೆ ಪಡೆದರು.

ಪ್ರತಿಭಟನೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಕ್ರಮ ಕೈಗೊಳ್ಳಬೇಕಿತ್ತು. ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಕುಮ್ಮಕ್ಕು ನೀಡುತ್ತಿದ್ದಾರೆ. ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಆರೋಗ್ಯ ಸಚಿವ ಸುಧಾಕರ್ ವಿರುದ್ಧವೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಗಂಗೋತ್ರಿಯ ಅಧ್ಯಕ್ಷ ಮುಖ್ಯಮಂತ್ರಿ. ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಅಭಿಯಾನ ಆರಂಭಿಸುತ್ತಿದೆ. ಇದು ರಾಜಕೀಯ ಹೋರಾಟವಲ್ಲ. ಭ್ರಷ್ಟಾಚಾರದ ವಿರುದ್ಧ ಸಂಘರ್ಷ’ ಎಂದರು.

‘ಸಚಿವ ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಾದ ಬಳಿಕವೂ ಅವರು ಸಂಪುಟದಲ್ಲಿ ಮುಂದುವರಿಯುತ್ತಿರುವುದಾದರೂ ಹೇಗೆ’ ಎಂದು ರಣದೀಪ್‍ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದರು.

ತಕ್ಷಣ ಬಂಧಿಸಬೇಕು– ಸಿದ್ದರಾಮಯ್ಯ

ಈಶ್ವರಪ್ಪ ಸಚಿವ ಸ್ಥಾನ ತ್ಯಜಿಸುವುದಾಗಿ ಘೋಷಿಸಿದ ಬೆನ್ನಲ್ಲೆ ಮಾತನಾಡಿದ ಸಿದ್ದರಾಮಯ್ಯ, ‘ಈಶ್ವರಪ್ಪ ರಾಜೀನಾಮೆ ನಮ್ಮ ಹೋರಾಟದ ಮುಖ್ಯ ಉದ್ದೇಶವಲ್ಲ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಈಗ ಅವರ ಮೇಲೆ ಸೆಕ್ಷನ್ 306, ಸೆಕ್ಷನ್ 34ರಡಿ ಕೇಸ್ ದಾಖಲಾಗಿದೆ. ಇದೊಂದು ಅಮಾನವೀಯ ಅಪರಾಧ. ಇಂಥ ಪ್ರಕರಣಗಳಲ್ಲಿ ಅಪರಾಧಿ ಸಿಕ್ಕ ಕೂಡಲೆ ಬಂಧಿಸಬೇಕು ಎಂದು ಕಾನೂನು ಹೇಳುತ್ತದೆ. ಹೀಗಾಗಿ, ಅವರನ್ನು ತಕ್ಷಣ ಬಂಧಿಸಬೇಕು. ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಈ ಆತ್ಮಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆ ಆಗಬೇಕು. ಶೇ 40 ಕಮಿಷನ್ ಆರೋಪದ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಬೇಕು. ನಮ್ಮ ಎಲ್ಲ ಬೇಡಿಕೆಗಳು ಇನ್ನೂ ಈಡೇರಿಲ್ಲ’ ಎಂದರು.

ನುಡಿದಂತೆ ನಡೆದಿಲ್ಲ– ಡಿಕೆಶಿ

‘ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಯಾವತ್ತೂ ನುಡಿದಂತೆ ನಡೆದಿಲ್ಲ. ಸುಳ್ಳಿನ ಸಮಿತಿ ಮುಖ್ಯಸ್ಥ ಈಶ್ವರಪ್ಪ’ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದರು.

‘ ನಾನಾಗಲಿ, ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಲಿ ಈಶ್ವರಪ್ಪನವರ ರಾಜೀನಾಮೆಗೆ ಹೆಚ್ಚಿನ ಒತ್ತು ಕೊಟ್ಟಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ, ಬಂಧಿಸಬೇಕು. ಈ ಪ್ರಕರಣದ ತನಿಖೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಯ ಮೇಲುಸ್ತುವಾರಿಯಲ್ಲಿ ನಡೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

‘ಬಳಸಿ ಬಿಸಾಡುವ ಪಕ್ಷ ಬಿಜೆಪಿ’

ಬೆಳಗಾವಿ: ‘ಬಳಸಿ ಬಿಸಾಡುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಆ ಪಕ್ಷದ ನಾಯಕರು ಹೊಡೆದಾಡಲು, ಬಡಿದಾಡಲು ಮಾತ್ರ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಮಾಧ್ಯಮವರೊಂದಿಗೆ ಗುರುವಾರ ಮಾತನಾಡಿ, ‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಆರೋಪಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಮ್ಮ ಹೋರಾಟ ನಡೆಯಲಿದೆ. ಎಫ್‌ಐಆರ್ ಆಗಿದೆ. ಮೃತರ ಕುಟುಂಬದವರೂ ಆರೋಪಿಸಿದ್ದಾರೆ. ಆರೋಪಿ ಬಂಧಿಸಲು ಇಷ್ಟು ಸಾಕಲ್ಲವೇ’ ಎಂದು ಪ್ರಶ್ನಿಸಿದರು.

‘ಸಚಿವರನ್ನು ಬಂಧಿಸಬೇಕು’

ಬೆಳಗಾವಿ: ‘ಗುತ್ತಿಗೆದಾರ ಸಂತೋಷ್ ‍‍ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯನ್ನು ನಾವು ಕೇಳಿಲ್ಲ. ಎಫ್ಐಆರ್ ದಾಖಲಾಗಿದ್ದು, ಅದರಂತೆ ಆರೋಪಿಗಳನ್ನು ಬಂಧಿಸಬೇಕು’ ಎಂದು ಸಹೋದರ ಸಂಬಂಧಿ ಪ್ರಶಾಂತ್ ಪಾಟೀಲ ಒತ್ತಾಯಿಸಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ.ಎಸ್. ಈಶ್ವರಪ್ಪ ಅವರು ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ತಮ್ಮ ಮಾಡಿದ ಕಾಮಗಾರಿಯ ಬಿಲ್ ₹ 4 ಕೋಟಿ ಪಾವತಿಸಬೇಕು. ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸಬೇಕು. ಪರಿಹಾರ ನೀಡಬೇಕು. ಈಶ್ವರಪ್ಪ ಸೇರಿದಂತೆ ಮೂವರು ಆರೋಪಿಗಳ ಬಂಧನ ಆಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT