ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮರು ನೇಮಕ | 4 ವಾರಗಳ ಒಳಗೆ ಕ್ರಮಕ್ಕೆ ಸೂಚನೆ -ರಾಜ್ಯ ಸರ್ಕಾರ

Last Updated 22 ಡಿಸೆಂಬರ್ 2021, 3:48 IST
ಅಕ್ಷರ ಗಾತ್ರ

ಬೆಂಗಳೂರು: ಮುಷ್ಕರದಲ್ಲಿ ಭಾಗಿಯಾಗಿ ವಜಾಗೊಂಡಿದ್ದ ಸಾರಿಗೆ ಸಂಸ್ಥೆಗಳ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ನಾಲ್ಕು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ನಾಲ್ಕೂ ಸಾರಿಗೆ ನಿಗಮಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.

ಆರನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿ 2021ರ ಏಪ್ರಿಲ್ 7ರಿಂದ 21ರವರೆಗೆ ನೌಕರರು ಮುಷ್ಕರ ನಡೆಸಿದ್ದರು. ಕರ್ತವ್ಯಕ್ಕೆ ಗೈರಾಗಿ ಮುಷ್ಕರಲ್ಲಿ ಭಾಗಿಯಾಗಿದ್ದ ನೌಕರರನ್ನು ವಜಾಗೊಳಿಸಲಾಗಿತ್ತು. ಅವರಲ್ಲಿ ‌1,351 ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.

ನೌಕರರ ಕುಟುಂಬಗಳ ಹಿತದೃಷ್ಟಿ ಮತ್ತು ಮಾನವೀಯ ಅಂಶಗಳನ್ನು ಪರಿಗಣಿಸಿ ಮರು ನೇಮಕ ಮಾಡಿಕೊಳ್ಳಬೇಕು. ನಿಗಮಗಳ ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅವಶ್ಯಕ ಷರತ್ತುಗಳನ್ನು ವಿಧಿಸಿ ನಿಯಮಾನುಸಾರ ಲೋಕ ಅದಾಲತ್ ಮೂಲಕ 4 ವಾರಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗಳಿಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.

‘ಸಾರಿಗೆ ಇಲಾಖೆ ನೀಡಿರುವ ನಿರ್ದೇಶನದಲ್ಲಿ ನಿಯಮಾನುಸಾರ ಎಂಬ ಪದ ಬಳಸಲಾಗಿದೆ. ಆದ್ದರಿಂದ ಯಾವುದೇ ಷರತ್ತಿಲ್ಲದೆ ಮರು ನೇಮಕ ಮಾಡಿಕೊಳ್ಳಲು ಸಾಧ್ಯವಾಗಲಾರದು’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆದರೆ, ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳುವಾಗ ಯಾವುದೇ ಷರತ್ತು ವಿಧಿಸಬಾರದು. ವೇತನ ಬಡ್ತಿ ತಡೆಹಿಡಿಯುವುದು, ಪ್ರೊಬೆಷನರಿ ಮತ್ತು ತರಬೇತಿ ಅವಧಿ ಮುಂದೂಡುವುದು ಸೇರಿ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು. ವಜಾಗೊಂಡ ಅವಧಿಯ ವೇತನ ಪಾವತಿಸದಿದ್ದರೂ, ಸೇವಾ ಅವಧಿಯನ್ನು ಪರಿಗಣಿಸಬೇಕು’ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದರು.

‘ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದರೆ, ಮುಂದೆ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಇರುವುದಿಲ್ಲ. ಆದ್ದರಿಂದ ನಾಲ್ಕು ನಿಗಮಗಳ ಅಧಿಕಾರಿಗಳು ಮಾನವೀಯ ಅಂಶಗಳನ್ನು ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT