ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ: ವಿದ್ಯಾರ್ಥಿಗಳ ಪರದಾಟ, ದುಪ್ಪಟ್ಟು ದರಕ್ಕೆ ಕಿಡಿ

ಪರದಾಡಿದ ಪ್ರಯಾಣಿಕರು, ಬಸ್‌ ನಿಲ್ದಾಣದಿಂದಲೇ ಖಾಸಗಿ ಬಸ್‌ಗಳ ಸಂಚಾರ
Last Updated 7 ಏಪ್ರಿಲ್ 2021, 21:03 IST
ಅಕ್ಷರ ಗಾತ್ರ

ಮೈಸೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಪರೀಕ್ಷೆಗಳಿಗೆ ಹಾಜರಾಗಲು ಪದವಿ ವಿಭಾಗದ ವಿದ್ಯಾರ್ಥಿಗಳು ಪರದಾಡಿದರು.

ನಗರದ ವಿವಿಧ ಭಾಗಗಳು ಹಾಗೂ ಗ್ರಾಮಾಂತರ ಭಾಗಗಳ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಬಸ್ ಸಿಗಲಿಲ್ಲ. ಖಾಸಗಿ ಬಸ್‌ಗಳ ನಿರ್ವಾಹಕರು ವಿದ್ಯಾರ್ಥಿ ಬಸ್‌ಪಾಸ್‌ಗಳಿಗೆ ಮಾನ್ಯತೆ ನೀಡಲಿಲ್ಲ. ಅನಿವಾರ್ಯವಾಗಿ ಹಣ ಕೊಟ್ಟೇ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಯಿತು.

ಮುಷ್ಕರ ಇದ್ದಾಗ್ಯೂ ಪರೀಕ್ಷೆಗಳನ್ನು ಮುಂದಕ್ಕೆ ಹಾಕದ ವಿಶ್ವವಿದ್ಯಾನಿಲಯದ ಕ್ರಮಕ್ಕೆ ವಿದ್ಯಾರ್ಥಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಇನ್ನುಳಿದಂತೆ, ಖಾಸಗಿ ವಾಹನಗಳಿಗೆ ಅವಕಾಶ ನೀಡಿದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ.

ಮಂಡ್ಯ ಜಿಲ್ಲೆಯಲ್ಲಿ 455 ಮಾರ್ಗಗಳಲ್ಲಿ ಖಾಸಗಿ ಬಸ್ಸುಗಳು ಸಂಚರಿಸಿದ್ದು, ಪ್ರಯಾಣಿಕರಿಂದ ನಿಗದಿತ ದರವನ್ನಷ್ಟೇ ಪಡೆದಿವೆ.

ಮದ್ದೂರು- ಕೊಪ್ಪ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳು ಸಂಚರಿಸಿದ್ದು, ಮೂವರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಚಾಮರಾಜನಗರ ಜಿಲ್ಲೆಯಲ್ಲಿ 100 ಖಾಸಗಿ ಬಸ್ಸುಗಳು ಸಂಚರಿಸಿದವು. ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗಿಲ್ಲ.

ಕೊಡಗು ಜಿಲ್ಲೆಯ ಒಳಗೆ ಸಂಚರಿಸಲು ಪ್ರಯಾಣಿಕರು ಖಾಸಗಿ ಬಸ್ ಸೇವೆ ನಂಬಿಕೊಂಡಿದ್ದಾರೆ. ದೂರದ ಪ್ರಯಾಣಕ್ಕೆ ಮಾತ್ರ ಕೆಎಸ್ಆರ್‌ಟಿಸಿ ಬಸ್ ಸೇವೆ ಅವಲಂಬಿಸಿದ್ದಾರೆ. ಹೀಗಾಗಿ, ಮಡಿಕೇರಿಯಿಂದ ಮೈಸೂರು, ಬೆಂಗಳೂರು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.

ಹಾಸನ ಜಿಲ್ಲೆಯಲ್ಲಿ, ಖಾಸಗಿ ವಾಹನಗಳ ಟಿಕೆಟ್‌ ದರವನ್ನು ಒಂದೂವರೆಯಿಂದ ಎರಡು ಪಟ್ಟು ಹೆಚ್ಚಿಸಲಾಗಿತ್ತು. ಕೆಲವರು ಚೌಕಾಶಿಗಿಳಿದರೆ, ಮತ್ತೆ ಕೆಲವು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ವಿಧಿ ಇಲ್ಲದೇ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದರು.

*
ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ. ಬಹುತೇಕ ವಿಷಯಗಳ ಪರೀಕ್ಷೆ ಮುಗಿದಿದ್ದು, ಅನುತ್ತೀರ್ಣರಾಗಿದ್ದವರಿಗೆ ಮಾತ್ರವೇ ಈಗ ಪರೀಕ್ಷೆ ನಡೆಯುತ್ತಿದೆ.
–ಪ್ರೊ.ಎ.ಪಿ.ಜ್ಞಾನಪ್ರಕಾಶ್‌, ಕುಲಸಚಿವ, ಪರೀಕ್ಷಾಂಗ ವಿಭಾಗ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT