ಕೆಎಸ್‌ಆರ್‌ಟಿಸಿಗೂ ಬಂತು ಇ.ವಿ ಬಸ್

ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಮೊದಲ ಅಂತರ ನಗರಗಳ ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗಿದ್ದು ‘ಪವರ್ ಪ್ಲಸ್’ಗೆ ಶನಿವಾರ ಚಾಲನೆ ಸಿಕ್ಕಿತು. ಬೆಂಗಳೂರಿನಿಂದ ಮೈಸೂರಿಗೆ ಹೊರಟ ಇ.ವಿ ಬಸ್‌ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಚಾಲನೆ ನೀಡಿದರು.
ಬಸ್‌ನ ವಿಶೇಷತೆ ಏನು?: ಏಲೆಕ್ಟಾ ಕಂಪನಿ ಅಭಿವೃದ್ಧಿಗೊಳಿಸಿರುವ ಈ ಬಸ್, ಆರಾಮದಾಯಕ ಪುಶ್‌ಬ್ಯಾಕ್ ಆಸನಗಳನ್ನು ಹೊಂದಿದೆ. ಗುಡ್ಡಗಾಡು, ಬಯಲು ಪ್ರದೇಶಗಳಲ್ಲಿ ಸುಗಮವಾಗಿ ಸಂಚರಿಸಲಿದೆ. ಪ್ರತಿ ಚಾರ್ಜ್‌ಗೆ 300 ಕಿ.ಮೀ ದೂರ ಪ್ರಯಾಣಿಸಬಹುದಾಗಿದೆ. 3 ಗಂಟೆಯ ಅವಧಿಯಲ್ಲಿ ಬ್ಯಾಟರಿ ಸಂಪೂರ್ಣ ರೀಚಾರ್ಜ್ ಆಗಲಿದೆ. ನಿರ್ವಾಹಕ, ಚಾಲಕ ಸೇರಿ 43 ಆಸನ ಸಾಮರ್ಥ್ಯವಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳು, ತುರ್ತು ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮುಂತಾದ ಸುರಕ್ಷತಾ ಕ್ರಮಗಳಿವೆ. ಪ್ರಯಾಣಿಕರ ಬಳಕೆಗೆ ವೈ–ಫೈ ಮತ್ತು ಪ್ರತಿ ಆಸನಕ್ಕೂ ಯುಎಸ್‌ಬಿ ಚಾರ್ಜರ್ ಅಳವಡಿಸಲಾಗಿದೆ. ಪ್ರಯಾಣಿಕರ ಲಗೇಜ್ ಇಡಲು ಸ್ಥಳಾವಕಾಶವಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದರು.
‘ಪ್ರಾಯೋಗಿಕ ಬಸ್ ಸಂಚಾರ ಯಶಸ್ವಿಯಾದರೆ, ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗದಲ್ಲಿ ಹವಾನಿಯಂತ್ರಿತ 50 ಇ.ವಿ ಬಸ್‌ಗಳು ಸಂಚರಿಸಲಿವೆ. ಬೆಂಗಳೂರು, ಮೈಸೂರಿನಲ್ಲಿ ಚಾರ್ಚಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಚಾರ್ಚಿಂಗ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿವೆ’ ಎಂದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ‘ಕೆಎಸ್‌ಆರ್‌ಟಿಸಿಗೆ 3,500 ಹೊಸದಾಗಿ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಫೆಬ್ರುವರಿಗೆ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.