ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ವೇತನಕ್ಕೆ ಅನುದಾನ

ರಿಯಾಯಿತಿ ಬಸ್‌ ಪಾಸ್‌ಗೆ ಸಹಾಯಧನ ನೀಡಲ್ಲ: ಸರ್ಕಾರ
Last Updated 27 ಮೇ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರಿಗೆ ಏಪ್ರಿಲ್ ತಿಂಗಳ ಶೇ 50ರಷ್ಟು ಮತ್ತು ಮೇ ತಿಂಗಳ ಶೇ 75ರಷ್ಟು ವೇತನ ಪಾವತಿಗೆ ರಾಜ್ಯ ಸರ್ಕಾರ ₹ 325 ಕೋಟಿ ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ರಿಯಾಯಿತಿ ಅಥವಾ ಉಚಿತ ಬಸ್‌ ಪಾಸ್‌ಗಳಿಗೆ ಸಹಾಯಧನ ಒದಗಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.

ವೇತನಕ್ಕೆ ಅನುದಾನ ಹಂಚಿಕೆ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದ್ದು, 8 ಷರತ್ತುಗಳನ್ನು ವಿಧಿಸಿದೆ. ‘ವೇತನ ಹೊರತುಪಡಿಸಿ ಆರ್ಥಿಕ ಸೌಲಭ್ಯ, ಬಾಟಾ ಸೇರಿ ಯಾವುದೇ ಭತ್ಯೆ ಪಾವತಿಸಬಾರದು. ಸಂಸ್ಥೆಯ ಸ್ವಂತ ನಿಧಿಯಡಿ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಹೊಸದಾಗಿ ಬಸ್‌ಗಳ ಖರೀದಿ ಮಾಡ ಬಾರದು’ ಎಂದು ತಿಳಿಸಿದೆ.

‘ಪ್ರಸಕ್ತ ಸಾಲಿನಲ್ಲಿ ಶಾಲಾ–ಕಾಲೇಜು ಆರಂಭವಾಗಿ ಉಚಿತ ಅಥವಾ ರಿಯಾಯಿತಿ ಪಾಸ್‌ಗಳನ್ನು ವಿತರಿಸಿದರೆ ಅದರ ವೆಚ್ಚವನ್ನು ಸಂಸ್ಥೆ ಅಥವಾ ವಿದ್ಯಾರ್ಥಿಗಳಿಂದಲೇ ಭರಿಸಿಕೊಳ್ಳಬೇಕು. ಸರ್ಕಾರದಿಂದ ಯಾವುದೇ ಸಹಾಯಧನ ಒದಗಿಸುವುದಿಲ್ಲ. ಇತರೆ ಯಾವುದೇ ಬಸ್ ಪಾಸ್ರಿಯಾಯಿತಿ ಕೂಡ ಈ ಸಾಲಿನಲ್ಲಿ ಲಭ್ಯವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ರಿಯಾಯಿತಿ ಬಸ್‌ ಪಾಸ್‌ಗೆ ತಲಾ ಶೇ 25ರಷ್ಟನ್ನು ವಿದ್ಯಾರ್ಥಿಗಳು ಮತ್ತು ಸಾರಿಗೆ ಸಂಸ್ಥೆಗಳು ಒದಗಿಸುತ್ತಿದ್ದವು. ಉಳಿದ ಶೇ 50ರಷ್ಟನ್ನು ಸರ್ಕಾರ ಭರಿಸುತ್ತಿತ್ತು. ವೇತನ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ರೀತಿಯ ಷರತ್ತುಗಳನ್ನು ಸರ್ಕಾರ ವಿಧಿಸುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಹೇಳಿದರು.

‘ನೌಕರರ ವೇತನದಲ್ಲೂ ಕಡಿತ ಮಾಡಲಾಗಿದೆ. ಹೀಗೆ ಮಾಡಿದರೆ ಜೀವನ ನಿರ್ವಹಣೆ ಕಷ್ಟವಾಗಲಿದೆ. ನೌಕರರಿಗೆ ಪೂರ್ಣ ಪ್ರಮಾಣದ ವೇತನ ಬಿಡಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT