ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಳಕ್ಕೆ ಆಗ್ರಹ

ನಿಗಮಗಳ ಖಾಸಗೀಕರಣಕ್ಕೆ ವಿರೋಧ: ಸಾರಿಗೆ ನೌಕರರ ಧರಣಿ
Last Updated 24 ಜನವರಿ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ವೇತನವನ್ನು ಶೇ 25ರಷ್ಟು ಹೆಚ್ಚಿಸಬೇಕು ಮತ್ತು ಸಾರಿಗೆ ನಿಗಮಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಕೈಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನ ಮತ್ತು ರಾಜ್ಯದ ವಿವಿಧೆಡೆ ಇರುವ ನಿಗಮಗಳ 40 ವಿಭಾಗೀಯ ಕಚೇರಿಗಳ ಎದುರು ನೌಕರರ ಮುಖಂಡರು ಧರಣಿ ನಡೆಸಿದರು. ಪ್ರತಿಭಟನೆಯಿಂದಾಗಿ ಬಸ್‌ಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಲಿಲ್ಲ.

‘2020ರ ಜನವರಿ 1ಕ್ಕೆ ವೇತನ ಪರಿಷ್ಕರಣೆ ಆಗಬೇಕಿತ್ತು. ಮೂರು ವರ್ಷಗಳಿಂದ ಸಬೂಬುಗಳನ್ನು ಹೇಳಿಕೊಂಡು ಸರ್ಕಾರ ಕಾಲ ತಳ್ಳುತ್ತಿದೆ. 2021ರ ಸೆಪ್ಟೆಂಬರ್‌ನಲ್ಲಿ ಸಾರಿಗೆ ಸಚಿವರನ್ನು ಭೇಟಿಯಾದಾಗ ಬೇಡಿಕೆ ಈಡೇರಿಕೆ ಭರವಸೆ ನೀಡಿದ್ದರು. 2022ರ ನವೆಂಬರ್‌ನಲ್ಲಿ ಜಂಟಿ ಕ್ರಿಯಾಸಮಿತಿ ನಿಯೋಗ ಭೇಟಿಯಾದಾಗಲೂ 24 ಗಂಟೆಗಳಲ್ಲಿ ಬಗೆಹರಿಸುವುದಾಗಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದರು. ಆದರೆ, ಈವರೆಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯಾಗಿದೆ. ಸ್ಪಂದಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಪ್‌ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್ ತಿಳಿಸಿದರು.

‘ಜಂಟಿ ಕ್ರಿಯಾ ಸಮಿತಿಯಿಂದ 16 ಬೇಡಿಕೆಗಳ ಪ್ರಣಾಳಿಕೆಯನ್ನು ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಬಹುದಿನಗಳ ಹಿಂದೆಯೇ ನೀಡಲಾಗಿದೆ. ಇದುವರೆಗೆ ಆಶ್ವಾಸನೆಗಳು ಸಿಗುತ್ತಿವೆ ಹೊರತು, ಬೇಡಿಕೆ ಈಡೇರುತ್ತಿಲ್ಲ. ಈ ಮಧ್ಯೆ ವೇತನ ಪರಿಷ್ಕರಣೆ ಇಲ್ಲದೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮಹಾ ಪ್ರಧಾನ ಕಾರ್ಯದರ್ಶಿ ಬಿ. ಜಯದೇವರಾಜೇ ಅರಸು ಮಾತನಾಡಿ, ‘ಇದುವರೆಗೆ ಜಂಟಿ ಕ್ರಿಯಾ ಸಮಿತಿಯಲ್ಲಿ ಆರು ಸಂಘಟನೆಗಳಿದ್ದವು. ಈಚೆಗೆ ರಚನೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಕೂಡ ನಮ್ಮೊಂದಿಗೆ ಕೈಜೋಡಿಸಿದೆ. ಈ ಎಲ್ಲ ಸಂಘಟನೆಗಳು ಶೀಘ್ರ ಸಭೆ ಸೇರಿ ಸರ್ಕಾರಕ್ಕೆ ಗಡುವು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT