ಮಂಗಳವಾರ, ಮಾರ್ಚ್ 21, 2023
23 °C

ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ಕಾಂಗ್ರೆಸ್ ಧ್ವನಿ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ಪಂಚರತ್ನ ರಥಯಾತ್ರೆ’ ಬಗ್ಗೆ ಸಿದ್ದರಾಮಯ್ಯ ಮಾಡಿದ್ದಾರೆ ಎನ್ನಲಾದ ಟೀಕೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ‘ಹಾಗಿದ್ದರೆ ಕಾಂಗ್ರೆಸ್ ನಡೆಸುತ್ತಿರುವುದು ಏನು? ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ’ ಎಂದು ತಿರುಗೇಟು ನೀಡಿದರು.

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ‘ಪಂಚರತ್ನ ರಥಯಾತ್ರೆ’ ನಿಮಿತ್ತ ಶನಿವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ್ದ ಅವರು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಜಯಪ್ರಕಾಶ ನಾರಾಯಣ್ ಅವರ ಸಿದ್ಧಾಂತವನ್ನು ಗಾಳಿಗೆ ತೂರಿದ ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ’ ಎಂದು ಟೀಕಿಸಿದರು.

‘ಲೋಕನಾಯಕ ಜೆಪಿ ಅವರು ಕಟ್ಟಿದ ಪಕ್ಷ ಉಳಿಸಿಕೊಂಡು ಹೊರಟಿದ್ದು ನಾವು. ಅಂಥ ಪಕ್ಷವನ್ನು, ಅವರ ಸಿದ್ಧಾಂತವನ್ನು ಗಾಳಿಗೆ ತೂರಿ ಸಿ.ಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ. ಸುಮ್ಮನೆ ಜೆಡಿಎಸ್ ಪಕ್ಷದ ಬಗ್ಗೆ ಏನೇನು ಮಾತನಾಡಬೇಡಿ. ಮುಖ್ಯಮಂತ್ರಿ ಆಸೆಗಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪಿದೆಯಾ ನಿಮಗೆ? ಜಾತ್ಯತೀತ ತತ್ವ ತಮ್ಮ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದೀರಿ. ಜೆಪಿ ಅವರ ಸಿದ್ಧಾಂತಕ್ಕೆ ನೀವು ಬದ್ಧರಾಗಿ ಇದ್ದಿದ್ದರೆ ನೀವು ಅಧಿಕಾರಕ್ಕಾಗಿ ಮಾತೃಪಕ್ಷವನ್ನು ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ. ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ’ ಎಂದು ಗುಡುಗಿದರು.

‘ನನ್ನ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಲು ಧರ್ಮಸ್ಥಳದ ಸಿದ್ಧವನದಲ್ಲಿ ನೀವು ನಡೆಸಿದ
ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು