ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಮಾಫಿಯಾ ಬೆಳೆಯಲು ರಾಷ್ಟ್ರೀಯ ಪಕ್ಷಗಳೇ ಕಾರಣ: ಎಚ್‌.ಡಿ.ಕುಮಾರಸ್ವಾಮಿ

Last Updated 12 ಮಾರ್ಚ್ 2021, 16:25 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಜಮೀನು ನುಂಗುವುದಕ್ಕೆ ಪ್ರೇರಣೆ ನೀಡುವುದು ಮತ್ತು ಭೂ ಕಬಳಿಕೆ ದಂಧೆ ಬೆಳೆಸುವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಪಾಲು ಸಮಾನವಾಗಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ಭೂಕಬಳಿಕೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂಬ ಕಂದಾಯ ಸಚಿವ ಆರ್‌. ಅಶೋಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ‘ವಿರೋಧ ಪಕ್ಷದಲ್ಲಿದ್ದಾಗ ಭೂ ಮಾಫಿಯಾ ವಿರುದ್ಧ ಹೋರಾಟ ಮಾಡಿದ್ದ ನಮಗೇ ಈಗ ಕೈ ಕಟ್ಟಿ ಹಾಕಿದಂತಾಗಿದೆ. ಅದನ್ನು ನಿಯಂತ್ರಿಸಲು ಅಸಾಧ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ. ವ್ಯವಸ್ಥೆ ಹದಗೆಡಲು ಕಾರಣವನ್ನೂ ಸಚಿವರು ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದಿದ್ದಾರೆ.

‘ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅವರು ಮತ್ತೆ ಅದೇ ಸ್ಥಾನದಲ್ಲಿ ಬಂದು ಕೂರುತ್ತಾರೆ’ ಎಂದು ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಈ ಮಟ್ಟಿಗಿನ ಭಂಡತನ ತೋರಲು ರಾಜಕಾರಣಿಗಳು ಹುಟ್ಟುಹಾಕಿದ ವ್ಯವಸ್ಥೆಯೇ ಕಾರಣ. ಸರ್ಕಾರ ಅಸಹಾಯಕತೆ ಪ್ರದರ್ಶಿಸಿ, ದುರ್ವ್ಯವಸ್ಥೆಯನ್ನು ಪ್ರೋತ್ಸಾಹಿಸದೇ ಶುದ್ಧೀಕರಣ ನಡೆಸಬೇಕು. ಕಠಿಣ ನೀತಿ ರೂಪಿಸಿ, ಜಾರಿಗೊಳಿಸಿದರೆ ಯಾವ ಮಾಫಿಯಾ ಆದರೂ ಏನು ಮಾಡಲು ಸಾಧ್ಯ? ಅದಕ್ಕೆ ಇಚ್ಛಾಶಕ್ತಿ ಬೇಕಷ್ಟೆ ಎಂದು ಹೇಳಿದ್ದಾರೆ.

ಭೂ ಮಾಫಿಯಾ ಬೃಹದಾಕಾರವಾಗಿ ಬೆಳೆದು ನಿಲ್ಲಲು ಪಕ್ಷಗಳ ಹಿಂಬಾಲಕರು, ಬಾಲ ಬಡುಕರೇ ಕಾರಣವಲ್ಲವೆ. ಪ್ರೋತ್ಸಾಹ ಕೊಟ್ಟು, ಈಗ ‘ನಿಯಂತ್ರಿಸಲು ಆಗುತ್ತಿಲ್ಲ’ ಎನ್ನುವುದು ಹೊಣೆಗೇಡಿತನ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT