ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನುಹುಳುಗಳಂತೆ ಬಂದ ಕುರುಬರು

ಸಂಚಾರ ದಟ್ಟಣೆಗೆ ಜನ ಹೈರಾಣ– ಜನಸಾಗರ ನಿಯಂತ್ರಿಸಲು ಪೊಲೀಸರ ಹರಸಾಹಸ
Last Updated 7 ಫೆಬ್ರುವರಿ 2021, 17:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣ ಭಾನುವಾರ ಕುರುಬರ ಶಕ್ತಿ ಪ್ರದರ್ಶನ ಕೇಂದ್ರದಂತೆ ಕಾಣುತ್ತಿತ್ತು. ರಾಜ್ಯದ ಮೂಲೆ–ಮೂಲೆಯಿಂದ ಜನಸಾಗರ ಸಮಾವೇಶಕ್ಕೆ ಹರಿದು ಬಂದಿತ್ತು.

ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜ.15ರಂದು ಕಾಗಿನೆಲೆಯಿಂದ ಪಾದಯಾತ್ರೆ ಪ್ರಾರಂಭವಾದಾಗ ಮಾರ್ಗದಲ್ಲಿ ಜೇನುಹುಳುಗಳು ಗೂಡು ಕಟ್ಟಿದ್ದವು. ಈ ಬಗ್ಗೆ ವಿಚಾರಿಸಿದಾಗ ಸಮಾವೇಶಕ್ಕೆ ಜನರು ಜೇನುಹುಳುಗಳಂತೆಯೇ ಬಂದು ಸೇರುತ್ತಾರೆ ಎಂಬ ಸೂಚನೆ ಸಿಕ್ಕಿತ್ತು ಎಂದು ಸ್ವಾಮೀಜಿ ಹೇಳಿದರು. ಕುರುಬರುಭಾನುವಾರದಂದು ಜೇನುಹುಳುಗಳಂತೆಯೇ ಹರಿದು ಬಂದರು. ನಗರದ ತುಮಕೂರು ರಸ್ತೆ, ನೈಸ್‌ ರಸ್ತೆಗಳಲ್ಲಿ ಬಸ್ಸುಗಳು, ಕಾರು, ಜೀಪು, ಆಟೊ, ಬೈಕ್‌ಗಳ ‘ಮೆರವಣಿಗೆಯೇ’ ಸಾಗಿತ್ತು. ಕಾಲಿಡಲೂ ಆಗದಷ್ಟು ಜನ ಜಮಾಯಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ, ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್‌ಗಳನ್ನೆಲ್ಲ ಹಾರಿಕೊಂಡು ಜನ ಸಮಾವೇಶದ ವೇದಿಕೆಯತ್ತ ನುಗ್ಗುತ್ತಿದ್ದರು. ನೂಕು ನುಗ್ಗಾಟ ನಡೆಸದಂತೆ, ಪೆಂಡಾಲ್‌ ಕಂಬಗಳನ್ನು ಎಳೆಯದಂತೆ ಹಲವು ಬಾರಿ ಸ್ವಾಮೀಜಿಯವರೇ ಮನವಿ ಮಾಡಿಕೊಳ್ಳಬೇಕಾಯಿತು.

ಕುರಿ ಸತ್ತರೂ ದುಡ್ಡು ಕೊಡಲ್ಲ

ಕೊಪ್ಪಳದಿಂದ ಚಾಮರಾಜನಗರದವರೆಗೆ, ಮೈಸೂರಿನಿಂದ ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜನ ಸಮಾವೇಶಕ್ಕೆ ಬಂದಿದ್ದರು. ವೇದಿಕೆಯ ಬಳಿ ಜಾಗ ಸಿಗದಿದ್ದರೂ, ರಸ್ತೆಯ ಬದಿಯಲ್ಲಿ ಅಲ್ಲಲ್ಲಿಯೇ ಕುಳಿತು ಹೋರಾಟಕ್ಕೆ ಬೆಂಬಲ ನೀಡಿದರು.

‘ಕುರಿ ಸಾಕಾಣಿಕೆ ನಮ್ಮ ಕುಲಕಸಬು. ರೋಗಗಳಿಂದ, ಬೇರೆ ಬೇರೆ ಕಾರಣಗಳಿಂದ ಕುರಿಗಳು ಸಾವಿಗೀಡಾಗುತ್ತಿರುತ್ತವೆ. ಆದರೆ, ಪರಿಹಾರ ನಮಗೆ ಸರಿಯಾಗಿ ಸಿಗುವುದಿಲ್ಲ. ಎಸ್‌ಟಿ ಸಮುದಾಯಕ್ಕೆ ಅನುದಾನ ಬಿಡುಗಡೆ ಆಗಿದೆ. ನಿಮಗೆ
ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುತ್ತಾರೆ. ಮೂಲತಃ ಪರಿಶಿಷ್ಟ ಪಂಗಡದವರೇ ಆಗಿರುವ ನಮಗೆ ಎಸ್‌ಟಿ ಮೀಸಲಾತಿ ಸಿಕ್ಕರೆ ಇಂತಹ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಕೊಪ್ಪಳದ ಮಂಜುನಾಥ್ ಜಗಾಡಿ ಹೇಳಿದರು.

ಉದ್ಯೋಗಾವಕಾಶ

‘ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಹಿಂದೆಯೂ ಹಲವು ಪರೀಕ್ಷೆ ಬರೆದಿದ್ದೇನೆ. ಎಸ್‌ಟಿ ಸಮುದಾಯದ ಸ್ನೇಹಿತರು ನನಗಿಂತ ನಾಲ್ಕೈದು ಅಂಕ ಕಡಿಮೆ ಗಳಿಸಿದ್ದರೂ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಹೆಚ್ಚು ಅಂಕಗಳನ್ನು ಪಡೆದಿದ್ದರೂ ನಾನು ಅವಕಾಶ ವಂಚಿತನಾಗಿದ್ದೇನೆ. ಎಸ್‌ಟಿ ಮೀಸಲಾತಿ ಸಿಕ್ಕರೆ ಸರ್ಕಾರಿ ನೌಕರಿ ಪಡೆ
ಯಲೂ ಅನುಕೂಲವಾಗುತ್ತದೆ’ ಎಂದು ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗದ ಪ್ರಸನ್ನಕುಮಾರ್ ಎನ್. ಮತ್ತೋಡ್ ಹೇಳಿದರು.

ಎಸ್‌ಟಿ ಮೀಸಲಾತಿಯಿಂದ ಲಭಿಸುವ ಸೌಲಭ್ಯಗಳ ಬಗ್ಗೆ ಚರ್ಚೆ, ಕುರುಬ ಸಮುದಾಯ ಇದೇ ಮೊದಲ ಬಾರಿಗೆ ಇಂತಹ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗಿದೆ ಎಂದು ಜನ ಮಾತನಾಡುತ್ತಿದ್ದುದು ಸಾಮಾನ್ಯವಾಗಿತ್ತು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ಕೆಲವು ಬಸ್‌ಗಳು, ಜೀಪು ಮತ್ತು ಟ್ರ್ಯಾಕ್ಟರ್‌ಗಳ ಮೇಲೆ ಹಾಕಿದ್ದ ಬ್ಯಾನರ್‌ನಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಭಾವಚಿತ್ರದ ಜೊತೆಗೆ, ವಿರೋಧಪಕ್ಷದ ನಾಯಕ ಮತ್ತು ಕುರುಬ ಸಮುದಾಯದ ಮುಖಂಡ ಸಿದ್ದರಾಮಯ್ಯ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಪ್ರಾರಂಭದಲ್ಲಿ ಅವರ ಪರ ಜೈಕಾರವೂ ಜೋರಾಗಿತ್ತು. ಆದರೆ ಸಮಾವೇಶಕ್ಕೆ ಸಿದ್ದರಾಮಯ್ಯ ಬಂದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ‘ಇಲ್ಲ, ಇಲ್ಲ ನಮ್ಮ ಪಾಲಿಗೆ ಸಿದ್ದು ಇನ್ನಿಲ್ಲ’ ಎಂದು ಘೋಷಣೆ ಕೂಗಿ ಆಕ್ರೋಶ ಕೂಗಿದರು.

ಶಾಸಕರ ಕ್ಷೇತ್ರದವರಾದರೆ ₹150 !

ಕುರುಬ ಸಮುದಾಯದ ಶಾಸಕರ ಕ್ಷೇತ್ರದಿಂದ ಸಮಾವೇಶಕ್ಕೆ ಬಂದವರಿಗೆ ತಲಾ ₹150, ಊಟ ಮತ್ತು ಪ್ರಯಾಣದ ವೆಚ್ಚವನ್ನು ಭರಿಸಲಾಗಿತ್ತು ಎಂದು ಜನ ಹೇಳಿದರು. ‘ನಮ್ಮದೇ ಶಾಸಕರು ಇರುವ ಕ್ಷೇತ್ರದಲ್ಲಿರುವವರಿಗೆ ತಲಾ ₹150 ಕೊಟ್ಟಿದ್ದಾರೆ. ಆದರೆ, ಬೇರೆ ಸಮುದಾಯದವರು ಪ್ರತಿನಿಧಿಸುತ್ತಿರುವ ಊರಿನವರು ನಾವು. ನಾವೇ ಹಣ ಖರ್ಚು ಮಾಡಿಕೊಂಡು ಸಮಾವೇಶಕ್ಕೆ ಬಂದಿದ್ದೇವೆ’ ಎಂದು ಜಗಳೂರಿನ ವ್ಯಕ್ತಿಯೊಬ್ಬರು ಹೇಳಿದರು.

ಆಟೊಗಳಿಗೆ ಬಂಪರ್

ಖಾಸಗಿ ವಾಹನಗಳಲ್ಲದೆ, ಒಪ್ಪಂದದ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೂ ಮಾಡಿಕೊಂಡು ಬಂದಿದ್ದರು. ಸಮಾವೇಶ ಮುಗಿಯುವವರೆಗೂ, ಸಮಾವೇಶದ ಬಸ್‌ಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ನಾಗಸಂದ್ರ ಮೆಟ್ರೊ ನಿಲ್ದಾಣ ಸೇರಿದಂತೆ ಅಕ್ಕ–ಪಕ್ಕದ ಪ್ರದೇಶಗಳಿಗೆ ತೆರಳಲು ಆಟೊಗಳನ್ನೇ ಅವಲಂಬಿಸಬೇಕಾಗಿತ್ತು. ಮೂರು ಕಿ.ಮೀ. ದೂರದವರೆಗಿನ ಪ್ರಯಾಣಕ್ಕೂ ₹50, ₹60 ತೆಗೆದುಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT