ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ: ಸಿದ್ದರಾಮಯ್ಯ ಮನವೊಲಿಕೆಗೆ ನಿರ್ಧಾರ

ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿಣಿ
Last Updated 3 ಜನವರಿ 2021, 19:30 IST
ಅಕ್ಷರ ಗಾತ್ರ

ತುಮಕೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದಲ್ಲಿಪಾಲ್ಗೊಳ್ಳುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನವೊಲಿಸಲು ಭಾನುವಾರ ಇಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಎಸ್.‌ಟಿ ಮೀಸಲಾತಿ ಹೋರಾಟ ಮತ್ತು ಸಿದ್ದರಾಮಯ್ಯ ಅವರು ಪಾಲ್ಗೊಳ್ಳದ ವಿಚಾರವೇ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಿದೆ.

‘ಸಿದ್ದರಾಮಯ್ಯ ಅವರು ಹೋರಾಟದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸಮಾಜದ ಸ್ವಾಮೀಜಿಗಳು, ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು, ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಸಿದ್ದ
ರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಅವರಲ್ಲಿರುವ ಸಂಶಯಗಳನ್ನು ಪರಿಹರಿಸುತ್ತೇವೆ. ನಮ್ಮ ಹೋರಾಟಕ್ಕೆ ಅವರು ವಿರೋಧವಾಗಿಲ್ಲ’ ಎಂದು ಎಸ್.‌ಟಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಶಾಂತಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಮ್ಮ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ ಎನ್ನುವುದು ಸಿದ್ದರಾಮಯ್ಯ ಅವರ ಸಂಶಯ. ಅದೂ ಸೇರಿದಂತೆ ಕೆಲವು ಭಿನ್ನಾಭಿಪ್ರಾಯ, ಸಮಸ್ಯೆ ಮತ್ತು ಸಂಶಯಗಳು ಅವರಲ್ಲಿವೆ. ಎಸ್‌.ಟಿ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಇದೇ ತಿಂಗಳ 15ರಿಂದ ಕಾಗಿನೆಲೆಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಅವರು ಪಾಲ್ಗೊಳ್ಳುವಂತೆ ಮನವೊಲಿಸುತ್ತೇವೆ’ ಎಂದು ತಿಳಿಸಿದರು.

‘ಕುರುಬರ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಈಗಾಗಲೇ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ಪ್ರಾಧಿಕಾರ ರಚಿಸಿ ₹ 400 ಕೋಟಿ ಮೀಸಲಿಬೇಕು’ ಎಂದುಪ್ರದೇಶ ಕುರುಬರ ಸಂಘದ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ ಒತ್ತಾಯಿಸಿದರು.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರವು ಕುಲಶಾಸ್ತ್ರ ಅಧ್ಯಯನ ಸಮಿತಿ ರಚಿಸಿತ್ತು. ಆರು ತಿಂಗಳ ಒಳಗೆ ವರದಿ ನೀಡಬೇಕು ಎಂದು ಸೂಚಿಸಿತ್ತು. ಆದರೆ ಆ ಸಮಿತಿ ಇಲ್ಲಿಯವರೆಗೂ ಸರ್ಕಾರಕ್ಕೆ ವರದಿ ನೀಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಿತಿ ಅಧ್ಯಕ್ಷರಿಂದ ತಕ್ಷಣ ವರದಿ ತರಿಸಿಕೊಳ್ಳಬೇಕು. ಸಮುದಾಯವನ್ನು ಎಸ್‌.ಟಿಗೆ ಸೇರಿಸಬೇಕು ಎಂದು ರಾಜ್ಯ ಸರ್ಕಾರವು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಬಾರದಿದ್ದರೆ ತಟಸ್ಥ!

ಕುರುಬರ ಸಂಘದ ಶಿವಮೊಗ್ಗ ಜಿಲ್ಲೆಯ ನಿರ್ದೇಶಕ ರಂಗನಾಥ್ ಹಾಗೂ ಬಾಗಲಕೋಟೆ, ಕಲಬುರ್ಗಿ ಸೇರಿದಂತೆ ಕೆಲವು ಜಿಲ್ಲೆಗಳ ನಿರ್ದೇಶಕರು, ‘ಸಿದ್ದರಾಮಯ್ಯ ಅವರು ಈ ಹೋರಾಟದಲ್ಲಿ ಪಾಲ್ಗೊಳ್ಳದ ಕಾರಣ ಸಮಾಜದವರು ಗೊಂದಲಕ್ಕೆ ಒಳಗಾಗಿದ್ದಾರೆ. ಹೋರಾಟದ ವಿಚಾರದಲ್ಲಿ ಎದುರಾಗಿರುವ ಗೊಂದಲಗಳನ್ನು ಸಂಘವು ಪರಿಹರಿಸಬೇಕು’ ಎಂದು ಕಾರ್ಯಕಾರಿಣಿ ಸಭೆಯಲ್ಲಿ ಆಗ್ರಹಿಸಿದ್ದಾರೆ.

‘ಸಿದ್ದರಾಮಯ್ಯ ಅವರು ಈ ಹೋರಾಟ ಬೆಂಬಲಿಸುವವರೆಗೂ ನಾವು ತಟಸ್ಥರಾಗುತ್ತೇವೆ’ ಎಂಬ ನಿಲುವನ್ನು ತಿಳಿಸಿದ್ದಾರೆ.

ಕುರುಬರ ಸಂಘಕ್ಕೆ ಪ್ರಭಾರ ಅಧ್ಯಕ್ಷ

ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಭಾರ ಅಧ್ಯಕ್ಷರಾಗಿ ಮೈಸೂರಿನ ಬಿ.ಸುಬ್ರಹ್ಮಣ್ಯ ಆಯ್ಕೆ ಆಗಿದ್ದಾರೆ. ಸುಬ್ರಹ್ಮಣ್ಯ ಸಂಘದ ಕಾರ್ಯಾಧ್ಯಕ್ಷರಾಗಿದ್ದರು.

ಬಳ್ಳಾರಿಯ ಕೃಷ್ಣ ಅವರ ನಿಧನದಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇಲ್ಲಿ ಭಾನುವಾರ ನಡೆದ ಕುರುಬರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಸುಬ್ರಹ್ಮಣ್ಯ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT