ಗುರುವಾರ , ಮಾರ್ಚ್ 4, 2021
24 °C
ರಾಜ್ಯ ಸರ್ಕಾರಕ್ಕೆ ತಲೆನೋವು

ಮೀಸಲು ಚಳವಳಿ ಹುಯಿಲು; ಏರುತ್ತಿದೆ ಹೋರಾಟದ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೀಸಲಾತಿ ಪರಿಷ್ಕರಣೆ, ಪ್ರಮಾಣ ಹೆಚ್ಚಳಕ್ಕಾಗಿ ರಾಜ್ಯದಲ್ಲಿ ಶುರುವಾಗಿರುವ ವಿವಿಧ ಸಮುದಾಯಗಳ ಹೋರಾಟ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವತ್ತ ದಾಂಗುಡಿ ಇಡುತ್ತಿದೆ.

ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕುರುಬ ಸಮುದಾಯದವರ ಮೀಸಲಾತಿಗಾಗಿ ನಡೆದ ಪಾದಯಾತ್ರೆ–ಸಮಾವೇಶ ಮುಗಿದ ಬೆನ್ನಲ್ಲೇ, ಲಿಂಗಾಯತ ಪಂಚಮಸಾಲಿ ಸಮುದಾಯದವರು ಈಗ ರಾಜಧಾನಿಗೆ ದೌಡಾಯಿಸಿದ್ದಾರೆ. ಇದೇ 21ಕ್ಕೆ ಮಹಾರ್‍ಯಾಲಿ ನಡೆಯಲಿದೆ.

ಕರ್ನಾಟಕ ಪ್ರದೇಶ ಕುರುಬ ಸಂಘದ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ, ಅಭಿವೃದ್ಧಿ ನಿಗಮದ ಬೇಡಿಕೆ ಮತ್ತೊಮ್ಮೆ ಮೊಳಗಿದೆ. ಅಲಕ್ಷಿತ ಸಮುದಾಯಗಳು ಹೋರಾಟದ ಹಾದಿ ಹಿಡಿದಿದ್ದು, ದಿನೇ ದಿನೇ ಚಳವಳಿ ಬಿರುಸುಗೊಳ್ಳುತ್ತಿದೆ.

ಆಮರಣಾಂತ ಉಪವಾಸ- ಜಯ ಮೃತ್ಯುಂಜಯ ಸ್ವಾಮೀಜಿ: ಇದೇ 21ರ ವೇಳೆಗೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಸೌಲಭ್ಯ ಘೋಷಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಮೀಸಲಾತಿ ಪರಿಷ್ಕರಣೆಗೆ ಒತ್ತಾಯಿಸಿ ಜ.14ರಂದು ಕೂಡಲಸಂಗಮದಿಂದ ಹೊರಟಿದ್ದ ಪಾದಯಾತ್ರೆ ಶುಕ್ರವಾರ ಬೆಂಗಳೂರು ಪ್ರವೇಶಿಸಿತು.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಗರದ ಅರಮನೆ ಮೈದಾನದಲ್ಲಿ  ಭಾನುವಾರ (ಫೆ.21) ಪಂಚಮಸಾಲಿ ಮಹಾರ‍್ಯಾಲಿ ನಡೆಯಲಿದೆ’ ಎಂದರು.

ಅಷ್ಟರೊಳಗೆ ಸರ್ಕಾರ ಮೀಸಲಾತಿ ಘೋಷಿಸಬೇಕು. ತಪ್ಪಿದರೆ, ಮಹಾರ‍್ಯಾಲಿ ಸ್ಥಳದಿಂದ ಅಂದು ಸಂಜೆಯೇ ವಿಧಾನಸೌಧಕ್ಕೆ ತೆರಳಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ’ ಎಂದರು.

‘ಧರಣಿ ನಂತರವೂ ಬೇಡಿಕೆ ಈಡೇರದಿದ್ದರೆ, ಮಾ.4ರಿಂದ ಆರಂಭವಾಗುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದೂ ಅವರು ಎಚ್ಚರಿಸಿದರು.

ರಾಜಕೀಯ ದುರುದ್ದೇಶವಿಲ್ಲ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಗ್ಗೆ ನಮಗೆ ಅಸಮಾಧಾನವಿಲ್ಲ. ಅವರನ್ನು ಅಧಿಕಾರದಿಂದ ಇಳಿಸುವ ಉದ್ದೇಶ ನಮ್ಮದಾಗಿದ್ದರೆ ಪಂಚಮಸಾಲಿ ಸಮುದಾಯದ ಶಾಸಕರೊಂದಿಗೆ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಬಹುದಿತ್ತು. ಪಂಚಮಸಾಲಿ ಮಕ್ಕಳ ಶಿಕ್ಷಣ ಹಾಗೂ ಯುವಜನ ಉದ್ಯೋಗಕ್ಕಾಗಿ ಮಾತ್ರ ಈ ಮೀಸಲಾತಿ ಕೇಳುತ್ತಿದ್ದೇವೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

‘ಪಾದಯಾತ್ರೆ ತುಮಕೂರು ಪ್ರವೇಶಿಸಿದಾಗಿನಿಂದ ಕೆಲವು ಮುಖಂಡರು ಇಂತಹ ಆರೋಪ ಮಾಡುತ್ತಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ಶಾಸಕರಾಗಿ ಈ ಪಾದಯಾತ್ರೆಗೆ ಬೆಂಬಲ ನೀಡುತ್ತಿಲ್ಲ’ ಎಂದೂ ಹೇಳಿದರು.

ಎಲ್ಲರಿಗೂ ಬೆಂಬಲ: ‘ಪಂಚಮಸಾಲಿ ಸಮುದಾಯಕ್ಕೆ ಈ ಸೌಲಭ್ಯ ಸಿಗುವುದರಿಂದ ಈಗಾಗಲೇ ಈ ಪ್ರವರ್ಗದಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂಬ ವಾದ ಸರಿಯಲ್ಲ. ನಮಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯವನ್ನು ಕೇಳುತ್ತಿದ್ದೇವೆ. ಯಾವುದೇ ತಳಸಮುದಾಯವು ನ್ಯಾಯಬದ್ಧವಾಗಿ ಮೀಸಲಾತಿ ಬೇಡಿಕೆ ಇಟ್ಟರೆ, ಬೆಂಬಲ ನೀಡುವಂತೆ ಕೋರಿದರೆ ಅಂತಹ ಸಮುದಾಯಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ’ ಎಂದರು.

ಒಕ್ಕಲಿಗರಿಗೆ ನಿಗಮ: ಬಜೆಟ್‌ನಲ್ಲಿ ಘೋಷಣೆ?
ಮೀಸಲಾತಿಗಾಗಿ ಹೋರಾಟದತ್ತ ಹೆಜ್ಜೆ ಇಟ್ಟಿರುವ ಒಕ್ಕಲಿಗರನ್ನು ಸಮಾಧಾನಪಡಿಸಲು ಮುಂಬರುವ ಬಜೆಟ್‌ನಲ್ಲಿ ಒಕ್ಕಲಿಗ ಅಭಿವೃದ್ಧಿ ನಿಗಮ ರಚಿಸುವ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹500 ಕೋಟಿ ಅನುದಾನ ಘೋಷಣೆ ಮಾಡಿದ ಮಾದರಿಯಲ್ಲೇ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಆ ಸಮುದಾಯ ಮಂಡಿಸಿದೆ. ಅಲ್ಲದೆ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆ ಕೂಡ ಈ ಒತ್ತಾಯ ಮಾಡಿದೆ.

ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ಸಚಿವರು ಮುಖ್ಯಮಂತ್ರಿಯವರ ಜತೆ ಮಾತನಾಡಿ, ವೀರಶೈವ ನಿಗಮದ ಮಾದರಿಯಲ್ಲೇ ಒಕ್ಕಲಿಗರಿಗೂ ನಿಗಮ ಸ್ಥಾಪಿಸಬೇಕು. ಇಲ್ಲವಾದರೆ ಸಮುದಾಯವು ಬಿಜೆಪಿ ಬಗ್ಗೆ ಮುನಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಇದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಬಜೆಟ್‌ ಮಂಡನೆಯ ದಿನಾಂಕ ನಿಗದಿಯಾಗಿದ್ದು, ಅದಕ್ಕೆ ಮೊದಲು ಘೋಷಿಸುವುದು ಸರಿಯಾಗದು. ಬಜೆಟ್‌ನಲ್ಲೇ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಕಿ ಬೀಳಲಿದೆ: ಕುರುಬರ ಸಂಘದ ಎಚ್ಚರಿಕೆ
ಬೆಂಗಳೂರು:
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಪ್ರದೇಶ ಕುರುಬರ ಸಂಘ ಮತ್ತು ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್‌ಮೂರ್ತಿ ನೇತೃತ್ವದಲ್ಲಿ ಮೌರ್ಯ ವೃತ್ತದಲ್ಲಿ ಧರಣಿ ನಡೆಸಿದ ಸಮುದಾಯದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕುರುಬ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ₹400 ಕೋಟಿ ಕಾಯ್ದಿರಿಸಬೇಕು. 2ಎ ಮೀಸಲಾತಿ ಪಟ್ಟಿಗೆ ಮುಂದುವರಿದ ಯಾವುದೇ ಜಾತಿಗಳನ್ನು ಸೇರ್ಪಡೆ ಮಾಡಬಾರದು. ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಅದನ್ನು ಜಾರಿಗೆ ತರಬೇಕು. ಹಿಂದುಳಿದ ವರ್ಗಗಳ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು’ ಎಂದು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಆಗ್ರಹಿಸಿದರು.

ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ‘ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಬೆಂಕಿ ಬೀಳಲಿದೆ’ ಎಂದು ಎಚ್ಚರಿಸಿದರು.

‘ಬೇರೆ ಸಮುದಾಯಗಳ ಮೀಸಲಾತಿ ಪರಿಷ್ಕರಣೆ ಬೇಡಿಕೆ ಬಗ್ಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕುರುಬ ಸಮುದಾಯದ ಬೇಡಿಕೆ ಬಗ್ಗೆ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌‘ಪ್ರದೇಶ ಕುರುಬರ ಸಂಘದಿಂದ ಸಾಂಕೇತಿಕವಾಗಿ ಧರಣಿ ನಡೆಸಿದ್ದೇವೆ. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ‌ಡಿ. ವೆಂಕಟೇಶ್‌ಮೂರ್ತಿ ಹೇಳಿದರು.

ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧದ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರವಾಗಿ ಘೋಷಣೆಗಳು ಮೊಳಗಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು