ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಬಳಕೆ ಬಗೆಗೆ ಎಚ್ಚರ ವಹಿಸುತ್ತಿದ್ದ ಕುವೆಂಪು’

Last Updated 29 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಮೈಸೂರು: ‘ನೀವು ಬರೆದಿದ್ದನ್ನು ಬೇರೆಯವರು ಓದಿ ಬದಲಾಗಬೇಕು ಅಂದುಕೊಂಡಿದ್ದರೆ, ನಿಮ್ಮ ಭಾಷೆ ಬದಲಾಗಬೇಕು. ಇಲ್ಲ ಅಂದರೆ ನಿಮಗೆ ಯಶಸ್ಸು ಸಿಗುವುದಿಲ್ಲ ಎಂದು ಕುವೆಂಪು ಹೇಳುತ್ತಿದ್ದರು’ ಎಂದು ನಿವೃತ್ತ ಪ್ರಾಧ್ಯಾಪಕ, ಕುವೆಂಪು ಒಡನಾಡಿ ಬಿ.ಎನ್‌.ಶ್ರೀರಾಮ್‌ ನೆನಪಿಸಿಕೊಂಡರು.

ಕುವೆಂಪು ಜನ್ಮದಿನದ ಅಂಗವಾಗಿ ಮಂಗಳವಾರ ಪ್ರಜಾವಾಣಿ ‘ಫೇಸ್‌ಬುಕ್‌ ಪ್ರಿಮಿಯರ್‌‘ ನಲ್ಲಿ ಗ್ರೀನ್‌ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಕೃಪಾಕರ (ಕೃಪಾಕರ ಸೇನಾನಿ) ನಡೆಸಿದ ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ, ಮಹತ್ವಪೂರ್ಣ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

‘ತೇಜಸ್ವಿ ಸೇರಿದಂತೆ ನಾವು ಹಲವರು ಉದ್ವೇಗದಲ್ಲಿ ಭಾಷೆ ಬಗ್ಗೆ ನಿಯಂತ್ರಣವಿಲ್ಲದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದೆವು. ಆಗ ಕುವೆಂಪು ಹಾಗೆ ಮಾತನಾಡಬಾರದು. ನಾವು ಹೇಳಿದ್ದನ್ನು ಬೇರೆಯವರು ಓದಬೇಕು ಎಂದರೆ, ಭಾಷೆ ಚೆನ್ನಾಗಿರಬೇಕು. ಅವನು ಓದಿದ ಮೇಲೆ ಬದಲಾವಣೆ, ಇತ್ಯಾದಿಗಳನ್ನು ನಿರೀಕ್ಷಿಸಲು ಸಾಧ್ಯ. ನಿಮ್ಮ ಭಾಷೆಯೇ ಚೆನ್ನಾಗಿಲ್ಲದಿದ್ದರೆ ಓದುಗರು ಅದನ್ನು ಕಡೆಗಣಿಸುತ್ತಾರೆ.’

‘ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್‌.ಡಿ.ಸುಂದರೇಶ್ ರೈತ ಹೋರಾಟದಲ್ಲಿದ್ದರು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ವ್ಯವಸಾಯ ಮಾಡದವರು ರೈತ ನಾಯಕರಾಗಿದ್ದಾರೆ ಎಂದು ಚುಡಾಯಿಸಿದ್ದರು. ಆಗ ನಂಜುಂಡಸ್ವಾಮಿ ‘ಮುಖ್ಯಮಂತ್ರಿಯನ್ನು ರಸ್ತೆ ಪಕ್ಕದ ಮರಕ್ಕೆ ಕಟ್ಟಿ ಬಾಸುಂಡೆ ಬರುವಂತೆ ಹೊಡೆಯುವೆವು’ ಎಂದಿದ್ದರು. ಕುವೆಂಪುಗೆ ತುಂಬಾ ಸಿಟ್ಟು ಬಂದಿತ್ತು. ಈ ರೀತಿ ಮಾತನಾಡಬಾರದು. ಅವರೊಬ್ಬರು ಮುಖ್ಯಮಂತ್ರಿ. ಪ್ರಜಾಪ್ರಭುತ್ವದಲ್ಲಿ ಅವರನ್ನು ಇಷ್ಟಪಡಲಿ, ಬಿಡಲಿ, ಅವರು ಮುಖ್ಯಮಂತ್ರಿ. ಅವರ ಮನವೊಲಿಸಬೇಕೇ ಹೊರತು, ಮರಕ್ಕೆ ಕಟ್ಟಿ ಹೊಡೆಯುತ್ತೇವೆ ಎನ್ನುವಂತಹ ಮಾತನ್ನು ಆಡಿದಾಗ ನಿಮ್ಮ ಚಳವಳಿ ಸಾಯುತ್ತದೆ ಎಂದಿದ್ದರು.’

‘ನನಗೂ, ತೇಜಸ್ವಿಗೂ ಹೀಗೆಯೇ ಹೇಳಿದ್ದರು. ಒಮ್ಮೆ ಜಗದ್ಗುರುಗಳು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದರು. ಆಗ ನಾನು, ತೇಜಸ್ವಿ, ಶಾಮಣ್ಣ ಸೇರಿ ಸ್ವಾಮಿಗಳನ್ನು ಇಲ್ಲಿಗೆ ಬರಲು ಬಿಡಬಾರದು. ಅವರು ಮತ ಮೌಢ್ಯವನ್ನು ಹರಡುವಂಥವರು. ವಿದ್ಯಾಭ್ಯಾಸ, ದಾಸೋಹ, ಇತ್ಯಾದಿ ಮಾಡಿಕೊಂಡು ಇರಲಿ. ಅದನ್ನು ಬಿಟ್ಟು ಜಾತಿಗಳ ಗುಂಪು ಕಟ್ಟಲು ಪ್ರವಾಸ ಮಾಡುತ್ತಿದ್ದಾರೆ. ಆದ್ದರಿಂದ ಅವರ ತೀರ್ಥಕ್ಕೆ ಜಾಪಾಳ ಮಾತ್ರೆಯನ್ನೂ, ಕುಳಿತುಕೊಳ್ಳುವ ಪೀಠಗಳಿಗೆ ನಸಗುನ್ನಿಕಾಯಿ ಪುಡಿಯನ್ನು ಹಾಕತಕ್ಕದ್ದು ಎಂದು ಪತ್ರಿಕೆಗೆ ಬರೆದಿದ್ದೆವು. ಆಗಲೂ ಭಾಷೆ ಬಳಕೆ ಬಗ್ಗೆ ಸಿಟ್ಟಿನಿಂದಲೇ ಹೇಳಿದ್ದರು.’

‘ಕುವೆಂಪು ಮೌಢ್ಯದ ಬಗ್ಗೆ ಮಾತನಾಡುವಾಗ ವಿಜ್ಞಾನ ಬುದ್ಧಿ ವಿಚಾರ ಪ್ರಜ್ಞೆ ಇರಬೇಕು ಎಂದು ಹೇಳುತ್ತಿದ್ದರು. ಕುವೆಂಪುವನ್ನು ಯಾರೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಪಾಠ ಮಾಡಲು ಬಳಸಿದ್ದಾರೆ ಅಷ್ಟೆ. ಏಕೆ ಹೀಗೆ ಬರೆದಿದ್ದಾರೆ, ಏನು ಬರೆದಿದ್ದಾರೆ ಎಂದು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಗಂಭೀರವಾಗಿ ತೆಗೆದುಕೊಂಡಿದ್ದರೆ ಶೇ 25ರಷ್ಟಾದರೂ ಮೌಢ್ಯ ಕಡಿಮೆ ಆಗುತ್ತಿತ್ತು.’

‘1962 ರಲ್ಲಿ ಮಹಾಪ್ರಳಯ ಆಗುತ್ತದೆ ಎಂದು ಎಲ್ಲರೂ ನಂಬಿದ್ದರು. ಆಗ ಎಲ್ಲಾ ಸಂದಿಗುಂದಿಗಳಲ್ಲೂ ಮಹಾರುದ್ರಾಭಿಷೇಕಗಳು ನಡೆಯುತ್ತಲೇ ಇದ್ದವು. ಜಗತ್ತನ್ನು ಉಳಿಸಲು ಅಭಿಷೇಕಗಳು, ಮಹಾಯಾಗಗಳೇ ಆಗಬೇಕು ಎನ್ನುವಂತಹ ವಾತಾವರಣವಿತ್ತು. ಪ್ರಳಯ ಆಗಲೇ ಇಲ್ಲ. ಅದಾದ ಮೇಲೆ ಕುವೆಂಪು ವಿಜ್ಞಾನ ಬುದ್ಧಿ, ವಿಚಾರ ಪ್ರಜ್ಞೆ ಎನ್ನುವ ಲೇಖನ ಬರೆಯುತ್ತಾರೆ.’

‘ಮುಖ್ಯಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರ ಕುಟುಂಬದಲ್ಲಿ ಮದುವೆ ನಡೆಯುತ್ತಿತ್ತು. ಈ ವಿಷಯ ತಿಳಿದ ತೇಜಸ್ವಿ, ಮಂಜಪ್ಪ ಭೂ ಸುಧಾರಣೆ ತಂದವರು. ಅವರು ಮದುವೆಯನ್ನು ಸರಳವಾಗಿ ಮಾಡಬೇಕಿತ್ತು. ಅದನ್ನು ಬಿಟ್ಟು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎನ್‌.ಡಿ.ಪ್ರಭಾಕರ್‌ ಕೊಡೆಯನ್ನೇ ಹರಿದು ಕಪ್ಪು ಬಾವುಟ ಮಾಡಿಕೊಂಡ. ಎಲ್ಲರೂ ಮದುವೆ ಮನೆಗೆ ಹೋದೆವು. ಅವರು ನಮ್ಮನ್ನು ಊಟಕ್ಕೆ ಬಂದಿದ್ದಾರೆ ಎಂದು ತಿಳಿದುಕೊಂಡು ಬನ್ನಿ ಬನ್ನಿ ಎಂದು ಕರೆದರು. ನಮ್ಮ ಮುಖ ನೋಡಿ ಕಡಿದಾಳು ಮಂಜಪ್ಪ ಅವರಿಗೆ ಸ್ವಲ್ಪ ಅನುಮಾನ ಬಂದಿತು. ಮನವಿ ಪತ್ರ ಬರೆದುಕೊಂಡು ಹೋಗಿದ್ದೆವು. ನೀವು ಭೂ ಸುಧಾರಣೆ ಮಾಡಿದವರು, ಮದುವೆಯನ್ನು ಬಹಳ ಸರಳವಾಗಿ ಮಾಡಬೇಕಿತ್ತು. ಸಾಂಪ್ರದಾಯಿಕವಾಗಿ ಜೋರಾಗಿ ಮಾಡುತ್ತಿದ್ದೀರಿ. ಇದಕ್ಕೆ ನಮ್ಮ ಧಿಕ್ಕಾರ ಎಂದು ಮನವಿ ಪತ್ರ ಕೊಟ್ಟು ಬಂದಿದ್ದೆವು.’

ಕುವೆಂಪು ಸೋತುಬಿಟ್ಟರು!
‘ನಾವು ಕುವೆಂಪು ಫೋಟೊ ತೆಗೆಯಲು ಹೋಗುವ ಹೊತ್ತಿಗೆ ಅವರಿಗೆ ಬಹಳ ವಯಸ್ಸಾಗಿತ್ತು. ಅಷ್ಟೊಂದು ಚಟುವಟಿಕೆಯಿಂದ ಇರಲಿಲ್ಲ. ನಾನು, ಸೇನಾನಿ ಏನಾದರೂ ಮಾಡಿ ಅವರ ಎಕ್ಸ್ ಪ್ರೆಷನ್‌ ತೆಗೆಯಬೇಕಲ್ಲ ಅಂಥ ಬಹಳ ಯೋಚನೆ ಮಾಡುತ್ತಾ ಇದ್ವಿ. ಆಗ ಹೆಚ್ಚಿನ ಸಮಯ ಕುವೆಂಪು ನಿದ್ದೆ ಮಾಡ್ತಾ ಇರುತ್ತಿದ್ದರು. ಒಂದು ದಿನ ಬಹಳ ಮೂಡ್‌ನಲ್ಲಿದ್ದರು. ಚಳಿಗಾಲ ಇತ್ತು. ಸ್ವಲ್ಪ ಬಿಸಿಲು ಬರುವಂತೆ ಮಾಡಿ ಪಕ್ಕದಲ್ಲಿ ಕೂರಿಸಿ ಫೋಟೊ ತೆಗೆಯುತ್ತಿದ್ದೆವು. ಬಹುಶಃ ಈ ಥರದ ತಾಳ್ಮೆ ಕಷ್ಟ. ಸ್ವಲ್ಪ ಹೊತ್ತು ನೋಡಿದರು. ಐದು ನಿಮಿಷ ಆಯ್ತು, ಹತ್ತು ನಿಮಿಷ ಆಯ್ತು. ಅಣ್ಣಾ, ನೋಡೇ ಬಿಡೋಣ, ನನ್ನ ತಾಳ್ಮೆ ಮುಗಿಬೇಕು, ಇಲ್ಲ ನಿಮ್ಮ ಫಿಲ್ಮಂ ಮುಗಿಬೇಕು ಎಂದು ನೆಟ್ಟಗೆ ಕುಳಿತರು. ಕೊನೆಗೆ ಅವರು ಸೋತುಬಿಟ್ಟರು! ಏಕೆಂದರೆ ನಿದ್ರೆಗೆ ಜಾರಿಬಿಟ್ಟರು.

ಈ ಸ್ವಾರಸ್ಯಕರ ಘಟನೆಯನ್ನು ಮೆಲುಕು ಹಾಕಿದ್ದು ಕೃಪಾಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT