ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುರಸ್ಕಾರಗಳನ್ನು ಬಯಸದ ತಿರುಮಲೇಶ್’

ಅಗಲಿದ ಕವಿಯನ್ನು ಸ್ಮರಿಸಿದ ಆಪ್ತರು, ಒಡನಾಡಿಗಳು
Last Updated 5 ಫೆಬ್ರುವರಿ 2023, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆ.ವಿ. ತಿರುಮಲೇಶ್ ಅವರು ಪ್ರಶಸ್ತಿ, ಪುರಸ್ಕಾರಗಳನ್ನು ಬಯಸಿದವರಲ್ಲ. ಆದರೆ, ತಾನು ಮಾಡುತ್ತಿರುವ ಕನ್ನಡದ ಕೆಲಸಗಳಿಗೆ ಅಷ್ಟಾಗಿ ಪ್ರತಿಕ್ರಿಯೆಗಳು ಬರುತ್ತಿಲ್ಲ ಎಂಬ ಬೇಸರ ಅವರಿಗಿತ್ತು’ ಎಂದು ಅವರ ಒಡನಾಡಿಗಳು ಹಾಗೂ ಆಪ್ತರು ಸ್ಮರಿಸಿಕೊಂಡರು.

ಬಹುವಚನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ತಿರುಮಲೇಶ್ ನೆನಪು’ ಕಾರ್ಯಕ್ರಮದಲ್ಲಿ ಎಂ.ಎಸ್. ಶ್ರೀರಾಮ್, ಜಯಂತ ಕಾಯ್ಕಿಣಿ, ಪ್ರತಿಭಾ ನಂದಕುಮಾರ್, ವಿವೇಕ ಶಾನಭಾಗ, ಮಮತಾ ಸಾಗರ್, ಅಭಿನವ ರವಿಕುಮಾರ್ ಹಾಗೂ ಮಂಜುನಾಥ ಕಲ್ಲೇದೇವರ್ ಅವರು ತಿರುಮಲೇಶ್ ಅವರ ಸಾಹಿತ್ಯಿಕ ಮತ್ತು ವಿದ್ವತ್‍ಪೂರ್ಣ ಪ್ರತಿಭೆಯನ್ನು ಕೊಂಡಾಡಿದರು. ಅವರ ಕವಿತೆಗಳನ್ನೂ ವಾಚಿಸಲಾಯಿತು.

‘ಕಾವ್ಯ, ಕತೆ, ಕಾದಂಬರಿಗಳಲ್ಲದೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಿರುಮಲೇಶ್ ಅವರು ಕೆಲಸ ಮಾಡಿದ್ದಾರೆ. ಹೊಸ ತಲೆಮಾರಿನವರು ಅವರನ್ನು ಓದಬೇಕು. ಹೀಗಾಗಿ, ಅವರ ಕಾವ್ಯವನ್ನು ಯುವಸಮೂಹಕ್ಕೆ ತಲುಪಿಸುವ ಕೆಲಸ ಮಾಡಬೇಕು. ತಿರುಮಲೇಶ ಅವರಿಗೆ ಎಲ್ಲದರಲ್ಲಿಯೂ ಅತೀವ ಆಸಕ್ತಿಯಿತ್ತು. ತಾವು ಬರೆದ ಕವಿತೆಗಳನ್ನು ದಶಕಗಳವರೆಗೂ ಹಾಗೆಯೇ ಇಟ್ಟುಕೊಳ್ಳುತ್ತಿದ್ದರು. ಅತೀವ ತಾಳ್ಮೆಯೂ ಅವರಿಗಿತ್ತು. ಅವರ ಕವಿತೆಗಳ ಓದು ಅಗತ್ಯ’ ಎಂದು ಜಯಂತ ಕಾಯ್ಕಿಣಿ ಹೇಳಿದರು.

ಮೋಟಾರ್ ಸೈಕಲ್‌ ಭಯ: ಎಂ.ಎಸ್. ಶ್ರೀರಾಮ್, ‘ತಿರುಮಲೇಶ್ ಅವರು ಎಲ್ಲರಿಗೂ ಲಭ್ಯರಾಗುತ್ತಿದ್ದರು. ಅವರ ಮಾಲೀಕತ್ವ ಎಲ್ಲರಿಗೂ ಇದೆ. ಅವರು 30 ವರ್ಷದ ಹಿಂದೆ ಮೋಟಾರ್ ಸೈಕಲ್‌ನಿಂದ ಬಿದ್ದಿದ್ದರು. ಇದರಿಂದಾಗಿ ಅವರು ಕೊನೆಯವರೆಗೂ ಮೋಟಾರ್ ಸೈಕಲ್‌ನಿಂದ ಅಂತರ ಕಾಯ್ದುಕೊಂಡರು. ವೈದ್ಯರ ಬಗ್ಗೆ ಅವರಿಗೆ ಕಿರಿಕಿರಿ ಭಾವವಿತ್ತು. ಪ್ರಶಸ್ತಿ, ಸನ್ಮಾನದ ಬಗ್ಗೆ ಅವರು ಚಿಂತಿಸಿರಲಿಲ್ಲ’ ಎಂದರು.

ವಿವೇಕ ಶಾನಭಾಗ, ‘ತಿರುಮಲೇಶ್ ಅವರು ಹೈದರಾಬಾದ್‌ನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಅಕ್ಷಯ ಕಾವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಸೇರಿ ಹಲವು ಕವನ ಸಂಕಲನ ಹೊರತಂದಿದ್ದಾರೆ. ನವ್ಯೋತ್ತರ ಕಾಲದಲ್ಲಿ ತಿರುಮಲೇಶ್ ಮತ್ತು ಸಿದ್ಧಲಿಂಗಯ್ಯ ಅವರು ಕನ್ನಡದ ನೆಲೆಗಟ್ಟನ್ನು ಬದಲಾಯಿಸಿದರು. ಹೊಸ ಕವಿಗಳು ಅವರನ್ನು ಅಷ್ಟಾಗಿ ಓದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿನವ ರವಿಕುಮಾರ್, ‘ತಿರುಮಲೇಶ್ ಅವರು ಬರೆಯುವ ವೇಗಕ್ಕೆ ಪ್ರಕಟಣೆ ಕಷ್ಟವಾಗುತ್ತಿತ್ತು. ಹಟವಾದಿಯಾದ ಅವರು ಅಂದುಕೊಂಡಿದ್ದನ್ನು ಸಾಧಿಸುತ್ತಿದ್ದರು. ಆದರೆ, ಹಟಮಾರಿ ಆಗಿರಲಿಲ್ಲ. ತನ್ನಿಂದ ತಪ್ಪಾಗಿದ್ದಲ್ಲಿ ಕೂಡಲೇ ಕ್ಷಮೆ ಕೇಳುತ್ತಿದ್ದರು’ ಎಂದು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT