ಗುರುವಾರ , ಆಗಸ್ಟ್ 18, 2022
23 °C

ಕೆಲಸ ಹೋಗಲಿ, ಪ್ರಾಣ ಉಳಿದರೆ ಸಾಕು...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ‘ಕೋವಿಡ್‌ ರೋಗಿಗಳು ಆಮ್ಲಜನಕ ಸೌಲಭ್ಯವನ್ನೊಳಗೊಂಡ ಹಾಸಿಗೆ ಸಿಗದೆ ನಡುರಸ್ತೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ. ಇದನ್ನೆಲ್ಲಾ ಕಣ್ಣಾರೆ ನೋಡುತ್ತಿದ್ದೇವೆ. ಇಂತಹ ವಿಷಮ ಸ್ಥಿತಿಯಲ್ಲಿ ದುಡಿಮೆ ನೆಚ್ಚಿಕೊಂಡು ಬೆಂಗಳೂರಿನಲ್ಲಿ ಇರುವುದಾದರೂ ಹೇಗೆ? ಕೋವಿಡ್‌ನಿಂದ ಬೀದಿ ಹೆಣವಾಗುವ ಬದಲು ಊರಿಗೆ ಹೋಗಿ ಅಂಬಲಿ ಕುಡಿದಾದರೂ ಜೀವನ ನಡೆಸುತ್ತೇನೆ’...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ಬಳ್ಳಾರಿಯ ಗಣೇಶ್‌ ಅವರನ್ನು ಮಾತಿಗೆಳೆದಾಗ ಅವರು ಹೇಳಿದ್ದು ಹೀಗೆ.

‘ವೈಟ್‌ಫೀಲ್ಡ್‌ನಲ್ಲಿರುವ ಚೈತನ್ಯ ಪ್ರಾಜೆಕ್ಟ್ಸ್‌ ಕಂಪನಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದೆ. ಪ್ರತಿ ನಿತ್ಯ ₹1 ಸಾವಿರ ಕೂಲಿ ನೀಡುತ್ತಿದ್ದರು. ಒಂದೆರಡು ಗಂಟೆ ಹೆಚ್ಚು ದುಡಿದರೆ ₹400 ಅಧಿಕ ಕೂಲಿ ಸಿಗುತ್ತಿತ್ತು. ಹೀಗಾಗಿ ಜೀವನ ಉಲ್ಲಾಸಮಯವಾಗಿತ್ತು. ಆದರೆ ಈ ಕೊರೊನಾ ಬದುಕಿನ ಖುಷಿಯನ್ನೇ ಕಸಿದುಕೊಂಡಿದೆ. ಬೆಂಗಳೂರಿನಲ್ಲಿ ನಿತ್ಯವೂ ನೂರಾರು ಮಂದಿ ಕೋವಿಡ್‌ನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ಟಿ.ವಿ.ಯಲ್ಲಿ ನೋಡಿ ಮನೆಯವರು ಗಾಬರಿಯಾಗಿದ್ದಾರೆ. ನೀನು ದುಡಿದು ನಮ್ಮನ್ನು ಸಾಕದಿದ್ದರೂ ಪರವಾಗಿಲ್ಲ ಬೇಗ ಮನೆಗೆ ಬಂದುಬಿಡು ಎಂದು ಪ್ರತಿನಿತ್ಯ ಕರೆ ಮಾಡುತ್ತಿದ್ದರು. ಹೀಗಾಗಿ ಊರಿಗೆ ಹೊರಟಿದ್ದೇನೆ’ ಎಂದು ತಿಳಿಸಿದರು.

‘ಸದ್ಯಕ್ಕಂತೂ ಬೆಂಗಳೂರಿನ ಕಡೆ ಮುಖ ಮಾಡುವುದಿಲ್ಲ. ಕೊರೊನಾ ಪ್ರಕರಣಗಳು ಕಡಿಮೆಯಾಗಲಿ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ನೋಡೋಣ’ ಎಂದರು.

‘ಲಾಕ್‌ಡೌನ್‌ ಘೋಷಿಸಿರುವ ಕಾರಣ ಕೆಲಸವಿಲ್ಲದಂತಾಗಿದೆ. ಇಂತಹ ಪ‍ರಿಸ್ಥಿತಿಯಲ್ಲಿ ಮೂರು ಹೊತ್ತು ಊಟ ಮಾಡುವುದೇ ಕಷ್ಟ. ಮನೆಯ ಬಾಡಿಗೆ ಕಟ್ಟಲು ಹಣ ಹೇಗೆ ಹೊಂದಿಸಬೇಕು. ಊರಿಗೆ ಹೋದರೆ ಸಣ್ಣ ಪುಟ್ಟ ಕೆಲಸವಾದರೂ ಸಿಗಬಹುದು. ಹೇಗೊ ತುತ್ತಿನ ಚೀಲ ತುಂಬಿಸಿಕೊಳ್ಳಬಹುದು. ಹೀಗಾಗಿ ಬೆಳಿಗ್ಗೆಯೇ ಬಸ್‌ ಹಿಡಿದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದೇವೆ. ಇಲ್ಲಿ ನೋಡಿದರೆ ಟಿಕೆಟ್‌ ಇಲ್ಲ ಎನ್ನುತ್ತಿದ್ದಾರೆ. ಎಲ್ಲಾದರು ಮೂಲೆಯಲ್ಲಿ ಕೂತು ಹೇಗೋ ಊರು ಸೇರಿಕೊಳ್ಳುತ್ತೇವೆ ಎಂದರೂ ಕೇಳುತ್ತಿಲ್ಲ. ನಿಮಗ್ಯಾರಾದರೂ ಪರಿಚಯಸ್ಥರಿದ್ದರೆ ಹೇಳಿ ಎರಡು ಟಿಕೆಟ್‌ ಕೊಡಿಸಿ’ ಎಂದು ಯಾದಗಿರಿಗೆ ಹೋಗಲು ನಿಂತಿದ್ದ ದಂಪತಿ ಅಳಲು ತೋಡಿಕೊಂಡರು.

‘ನಾವು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆವು. ಲಾಕ್‌ಡೌನ್‌ ಕಾರಣ ಕಂಪನಿ ಮುಚ್ಚುವ ಸ್ಥಿತಿಗೆ ಬಂದಿದೆ. ಹೀಗಾಗಿ ಊರ ದಾರಿ ಹಿಡಿದಿದ್ದೇವೆ. ಊರಿನಲ್ಲಿ ಹೊಲ ಇದೆ. ಅದರಲ್ಲೇ ದುಡಿಮೆ ಮಾಡುತ್ತೇವೆ. ಇದನ್ನು ಬಿಟ್ಟರೆ ಈಗ ನಮ್ಮ ಎದುರು ಬೇರೆ ಯಾವ ದಾರಿಯೂ ಇಲ್ಲ’ ಎಂದು ಧಾರವಾಡ ಹಾಗೂ ಬೆಳಗಾವಿಗೆ ಹೊರಟಿದ್ದ ಯುವಕರು ತಿಳಿಸಿದರು.

ರೈಲ್ವೆ ನಿಲ್ದಾಣದ ಎದುರು ಜನದಟ್ಟಣೆ: ಲಾಕ್‌ಡೌನ್‌ ಘೋಷಿಸಿದ ಬೆನ್ನಲ್ಲೇ ವಲಸೆ ಹಾಗೂ ಕೂಲಿ ಕಾರ್ಮಿಕರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಹೀಗಾಗಿ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಎದುರು ಶನಿವಾರ ಜನದಟ್ಟಣೆ ಕಂಡುಬಂತು.

ಬಸ್‌ ಸಂಚಾರ ಸ್ತಬ್ಧವಾಗಿರುವ ಕಾರಣ ಅನೇಕರು ಕ್ಯಾಬ್‌ ಮಾಡಿಕೊಂಡು ತಂಡೋಪತಂಡವಾಗಿ ರೈಲು ನಿಲ್ದಾಣದತ್ತ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಿಕ್ಕ ಮಕ್ಕಳೊಂದಿಗೆ ಬಂದಿದ್ದ ಅನೇಕರು ನಿಲ್ದಾಣದ ಎದುರು ದೈಹಿಕ ಅಂತರ ಮರೆತು ಕುಳಿತಿದ್ದರು. ಕೆಲವರು ಮನೆಯಿಂದ ತಂದಿದ್ದ ಬುತ್ತಿ ಸವಿಯುತ್ತಿದ್ದರೆ, ಮತ್ತೆ ಹಲವರು ಸಾಮಾನು ತುಂಬಿದ್ದ ಮೂಟೆಗೆ ಒರಗಿ ನಿದ್ರೆಗೆ ಜಾರಿದ್ದ ದೃಶ್ಯಗಳೂ ಕಂಡುಬಂದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು