ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸುಧಾರಣೆ ತಿದ್ದುಪಡಿ: ಸಮರ್ಥಿಸಿಕೊಂಡ ಎಚ್.‌ಡಿ. ಕುಮಾರಸ್ವಾಮಿ

Last Updated 9 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಭೂಸುಧಾರಣೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ಈ ವಿಚಾರದಲ್ಲಿ ರೈತರ ಹಿತ ಕಾಯುವ ಕೆಲಸವನ್ನು ನಾವು ಮಾಡಿದ್ದೇವೆ’ ಎಂದಿದ್ದಾರೆ.

‘ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್‌ ಕಡೆಯೂ ಇರಲಿಲ್ಲ, ಬಿಜೆಪಿ ಕಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್‌ ಮಾಡಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಬಿಜೆಪಿ ಪ್ರಸ್ತಾಪಿಸಿದ ಭೂ ಸುಧಾರಣಾ ತಿದ್ದುಪಡಿ ಮಸೂದೆಯಲ್ಲಿದ್ದ ಕೆಲ ಅಂಶಗಳನ್ನು ಜೆಡಿಎಸ್‌ ಆರಂಭದಲ್ಲಿ ವಿರೋಧಿಸಿತ್ತು. ಅದರಲ್ಲಿ ಏನೇನು ಬದಲಾವಣೆಗಳು ಆಗಬೇಕು ಎಂಬುದನ್ನು ಹೇಳಿತ್ತು. ಕಾಂಗ್ರೆಸ್‌ ಕೂಡ ಮಸೂದೆ ವಿರೋಧಿಸಿತ್ತಾದರೂ ಏನು ಬದಲಾವಣೆ ಆಗಬೇಕು ಎಂಬುದನ್ನು ಹೇಳಿರಲಿಲ್ಲ. ಅದು ವಿರೋಧಕ್ಕೆ ಮಾತ್ರ ಸೀಮಿತವಾಗಿತ್ತು. ಜೆಡಿಎಸ್‌ ಸೂಚಿಸಿದಂತೆ ಕಾಯ್ದೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮೊದಲು ಪ್ರಸ್ತಾಪಿಸಿದ ಮಸೂದೆಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 248 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ, ಈಗ ಅದನ್ನು ತೆಗೆದು ಹಾಕಲಾಗಿದೆ. ಕಲಂ 80ರ ಅಡಿಯ ನೀರಾವರಿ ಜಮೀನನ್ನು ಕೃಷಿ ಉದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ. ರೈತ ಕುಟುಂಬದಿಂದ ಬಂದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT