ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಬಳಿಕೆ ಆರೋಪ: ಬೈರತಿ ರಾಜೀನಾಮೆಗೆ ‘ಕೈ’ ಪಟ್ಟು

ಉಭಯ ಸದನಗಳಲ್ಲೂ ಕಾಂಗ್ರೆಸ್ ಧರಣಿ
Last Updated 17 ಡಿಸೆಂಬರ್ 2021, 21:02 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮತ್ತು ವಿಧಾನಪರಿಷತ್‌ನಬಿಜೆಪಿ ಸದಸ್ಯ ಆರ್‌.ಶಂಕರ್‌ ಅವರ ಮೇಲಿರುವ ಭೂಕಬಳಿಕೆಯ ಆರೋಪದ ವಿಷಯವನ್ನು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿವಿಧಾನಮಂಡಲದ ಎರಡೂ ಸದನಗಳಲ್ಲಿ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ಧರಣಿ ನಡೆಸಿದರು.

ಸಚಿವ ಬೈರತಿ ಬಸವರಾಜ ಅವರು ರಾಜೀನಾಮೆಗೆ ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು. ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಸಮರ ನಡೆದು ಕಾವೇರಿದ ವಾತಾವರಣ ನಿರ್ಮಾಣವಾಯಿತು. ಗದ್ದಲದಿಂದ ಕಲಾಪ ನಡೆಸಲು ಸಾಧ್ಯವಾಗದಿದ್ದರಿಂದ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಷಯವನ್ನು ಪ್ರಸ್ತಾಪಿಸಿದರು. ‘ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಇಲ್ಲಿ ಪ್ರಸ್ತಾಪಿಸಲು ಅವಕಾಶ ಇಲ್ಲ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿಯಮಾವಳಿ ಉಲ್ಲೇಖಿಸಿ ಹೇಳಿದರು.

ಇದನ್ನು ಒಪ್ಪದ ಸಿದ್ದರಾಮಯ್ಯ, ‘ಹಿಂದೆ ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ, ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ನಿಲುವಳಿ ಸೂಚನೆ ಅಡಿ ಪ್ರಸ್ತಾಪಿಸಲು ಆಗ್ರಹಿಸಿ ನೀವು ಧರಣಿ ಮಾಡಿದಿರಿ. ಈಗ ಸಚಿವರ ಮೇಲೆ ಎಫ್‌ಐಆರ್‌ ದಾಖಲಾಗಿದೆ, ಸಮನ್ಸ್‌ ನೀಡಲಾಗಿದೆ. ಆದ್ದರಿಂದ ನಮಗೂ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು’ ಎಂದು ಪಟ್ಟು ಹಿಡಿದರು. ಸಿದ್ದರಾಮಯ್ಯ ಅವರ ಆಗ್ರಹಕ್ಕೆ ಧ್ವನಿಗೂಡಿಸಿದಕಾಂಗ್ರೆಸ್‌ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಎರಡೂ ಪ್ರಕರಣಗಳ ಸ್ವರೂಪ ಬೇರೆ ಬೇರೆ. ಬೈರತಿ ಅವರ ಮೇಲಿನ ಪ್ರಕರಣ ಖಾಸಗಿ ಭೂಮಿಯ ವರ್ಗಾವಣೆ ಕುರಿತದ್ದಾಗಿದೆ. ಆದರೆ ಗಣಪತಿ ಪ್ರಕರಣ, ಕೊಲೆ ಶಂಕೆಯದ್ದಾಗಿತ್ತು. ಆದ್ದರಿಂದ ಎರಡೂ ಪ್ರಕರಣಗಳ ಹೋಲಿಕೆ ಸರಿಯಲ್ಲ’ ಎಂದರು.

‘ಬೈರತಿ ಬಸವರಾಜ ಜನಪ್ರತಿನಿಧಿ ಆಗುವುದಕ್ಕೆ ಮೊದಲಿನ ಪ್ರಕರಣವೊಂದನ್ನು ಸದನದಲ್ಲಿ ಪ್ರಸ್ತಾಪಿಸುವುದು ಮತ್ತು ಅದಕ್ಕಾಗಿ ನಿಯಮ 60ರಡಿ ಪ್ರಸ್ತಾಪಕ್ಕೆ ಒತ್ತಾಯಿಸುವುದು ಶೋಭೆ ತರುವುದಿಲ್ಲ. ಎಫ್‌ಐಆರ್‌ ಹಾಕಿದ ತಕ್ಷಣ ಅಪರಾಧಿ ಆಗುವುದಿಲ್ಲ. ಇಲ್ಲಿ ನೈತಿಕತೆಗಿಂತ ಕಾನೂನು, ನಿಯಮಾವಳಿಗಳ ಮೂಲಕ ಸದನ ನಡೆಸುವುದು ಮುಖ್ಯವಾಗುತ್ತದೆ. ರಾಜೀನಾಮೆ ಕೇಳುವುದೂ ಸರಿಯಲ್ಲ. ಭೂವರ್ಗಾವಣೆ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ಮಾಡಲಿ, ನಾವು ಇಲ್ಲಿ ವಿಚಾರಣೆ ನಡೆಸುವುದು ಬೇಡ’ ಎಂದು ಬೊಮ್ಮಾಯಿ ಹೇಳಿದರು.

ನ್ಯಾಯಾಲಯದಲ್ಲಿ ಇರುವ ಪ್ರಕರಣವನ್ನು ನಿಯಮಾವಳಿ ಮೀರಿ ಯಾವುದೇ ಕಾರಣಕ್ಕೂ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬಾರದು ಎಂದು ಸಂಸದೀಯ ವ್ಯವಹಾರಗಳ ಸಚಿವರ ಜೆ.ಸಿ.ಮಾಧುಸ್ವಾಮಿ ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಂತರು.

ಎರಡು ಕಡೆಯ ವಾದ ಮತ್ತು ಪ್ರತಿವಾದ ಆಲಿಸಿದ ಸಭಾಧ್ಯಕ್ಷ ಕಾಗೇರಿ, ‘ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಿಯಮಾವಳಿ 62(7) ಅ ಅನ್ವಯ ಪ್ರಸ್ತಾಪಿಸಲು ಅವಕಾಶ ಇಲ್ಲ’ ಎಂದು ರೂಲಿಂಗ್‌ ನೀಡಿದರು. ಇದನ್ನು ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು. ಗದ್ದಲ ನಿಯಂತ್ರಣಕ್ಕೆ ಬಾರದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಭೋಜನ ವಿರಾಮದ ಬಳಿಕ ವಿಧಾನಪರಿಷತ್‌ನಲ್ಲೂ ಈ ವಿಷಯ ಪ್ರಸ್ತಾಪಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದಾಗ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ಸಿದ್ದರಾಮಯ್ಯ
‘ಸಚಿವ ಬೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯ ಆರ್‌. ಶಂಕರ್ ಮತ್ತು ಇತರ ಮೂವರು ದಾಖಲೆಗಳನ್ನು ಸೃಷ್ಟಿಸಿ ಕೆ.ಆರ್.ಪುರದ ಕಲ್ಕೆರೆಯಲ್ಲಿ ನೂರಾರು ಕೋಟಿ ಮೌಲ್ಯದ ಭೂಮಿ ಕಬಳಿಸಿದ್ದಾರೆ. ಈ ಪ್ರಕರಣವನ್ನು ನಾವು (ಕಾಂಗ್ರೆಸ್‌) ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ನಿರಾಕರಿಸಿದರು. ಆದರೆ, ನಮ್ಮ ಹೋರಾಟ ಮುಂದುವರಿಸುತ್ತೇವೆ’ ಎಂದರು.

‘ಭೂಕಬಳಿಕೆ ಬಗ್ಗೆ ದೂರು ನೀಡಿದ್ದರೂ ಪೋಲಿಸರು ‘ಬಿ’ ರಿಪೋರ್ಟ್ ಹಾಕಿದ್ದರು. ಅದನ್ನು ಭೂ ಮಾಲೀಕರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಐವರು ಆರೋಪಿಗಳ ವಿರುದ್ಧ ಕ್ರಿಮಿನಲ್‌ ಅಪರಾಧಗಳಡಿ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಮಾದಪ್ಪ, ಪಿಳ್ಳ ಮಾದಪ್ಪ, ಬೈರತಿ‌ ಬಸವರಾಜ, ಆರ್‌. ಶಂಕರ್, ಅರುಣ್ ಎಂಬವರು ಆರೋಪಿಗಳು. ಈ ಐವರು ಕ್ರಿಮಿನಲ್ ಷಡ್ಯಂತ್ರ ನಡೆಸಿ, ಅಣ್ಣಯ್ಯಪ್ಪ ಎಂಬವರಿಂದ ಖಾಲಿ ಪತ್ರಕ್ಕೆ ಸಹಿ ಮಾಡಿಸಿಕೊಂಡು 22.43 ಎಕರೆ ಜಮೀನಿಗೆ ಕ್ರಯಪತ್ರ ಮಾಡಿದ್ದಾರೆ’ ಎಂದು ಆರೋಪಿಸಿದರು.

ಸುಧಾಕರ್‌ ಸಂಧಾನ ಯತ್ನಕ್ಕೆ ಟೀಕೆ
‘ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಭೂಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನನ್ನ ಜೊತೆ ಸಂಧಾನಕ್ಕೆ ಮುಂದಾಗಿದ್ದರು’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ ಹೇಳಿದರು.

ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಇಂದು (ಶುಕ್ರವಾರ) ಬೆಳಿಗ್ಗೆ ಸಚಿವರೊಬ್ಬರು ನನ್ನನ್ನು ಭೇಟಿ ಮಾಡಿ ಈ ವಿಷಯದಲ್ಲಿ ಸಂಧಾನ ಮಾಡುವುದಕ್ಕೆ ಪ್ರಯತ್ನಿಸಿದರು. ಸಿದ್ದರಾಮಯ್ಯ ಜೊತೆಗೂ ಮಾತನಾಡಲು ಸುಧಾಕರ್‌ ಯತ್ನಿಸಿದ್ದರು. ಆದರೆ, ಸಿದ್ದರಾಮಯ್ಯ ಮಾತನಾಡಿಲ್ಲ’ ಎಂದರು.

‘ಈ ಬಗ್ಗೆ ಗುರುವಾರ ಬೆಳಿಗ್ಗೆ ಸಭಾಪತಿ ಸಂಧಾನ ಮಾಡಿದ್ದರು. ಬೇರೆ ರೂಪದಲ್ಲಿ ವಿಷಯ ಪ್ರಸ್ತಾಪಿಸಿದರೆ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ಈ ಆರೋಪವನ್ನು ನ್ಯಾಯಾಲಯ ಕೂಡ ಎತ್ತಿ ಹಿಡಿದಿದೆ’ ಎಂದರು.

‘ಬೈರತಿ ಬಸವರಾಜ ವಿರುದ್ಧ ಯಾರೂ ಷಡ್ಯಂತ್ರ ಮಾಡುತ್ತಿಲ್ಲ. ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಡಿ.ಕೆ. ಶಿವಕುಮಾರ್ ಮೇಲೆ ಯಾವ ಕೇಸೂ ಇಲ್ಲ. ಆದರೆ, ಬೈರತಿ ಬಸವರಾಜ್ ಮೇಲೆ ವಂಚನೆ ಕೇಸ್ ದಾಖಲಾಗಿದೆ. ಹೀಗಾಗಿ ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT