ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಅಕ್ರಮ: ಬೈರತಿ ಬಸವರಾಜ ರಾಜೀನಾಮೆಗೆ ಪಟ್ಟು, ಉಭಯ ಸದನಗಳಲ್ಲಿ ಕೋಲಾಹಲ

ಕಾಂಗ್ರೆಸ್‌ ಸದಸ್ಯರಿಂದ ಧರಣಿ ಸಭಾತ್ಯಾಗ
Last Updated 20 ಡಿಸೆಂಬರ್ 2021, 19:46 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ‘ನೂರಾರು ಕೋಟಿ ಮೊತ್ತದ ಭೂ ಅಕ್ರಮದಲ್ಲಿ ಭಾಗಿಯಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಕಾಂಗ್ರೆಸ್‌ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಪಟ್ಟು ಹಿಡಿದಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು.

ಇತ್ತೀಚೆಗೆ ನಿಧನರಾದ ಆರ್‌.ಎಲ್‌.ಜಾಲಪ್ಪ ಅವರಿಗೆವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಬಳಿಕ ಕಾಂಗ್ರೆಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು.

ಪ್ರಶ್ನೋತ್ತರ ಮುಗಿದ ಬಳಿಕ ಚರ್ಚೆಗೆ ಅವಕಾಶ ಮಾಡಿಕೊಡುವೆ. ಈಗ ಧರಣಿ ಕೈ ಬಿಡಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಭೂ ಅಕ್ರಮ ನಡೆಸಿರುವ ಸಚಿವ ಬೈರತಿ ಬಸವರಾಜ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು‘ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ’ಪ್ರಶ್ನೋತ್ತರ ನಡೆದ ಬಳಿಕ ಉಳಿದ ಕಲಾಪಗಳನ್ನು ನಡೆಸಬೇಕು ಎಂದು ತೀರ್ಮಾನ ಆಗಿದೆ. ಈಗ ಕಾಂಗ್ರೆಸ್‌ನವರು ಧರಣಿ ನಡೆಸುವುದು ಸರಿಯಲ್ಲ‘ ಎಂದರು. ಅದಕ್ಕೆ ಕಾಂಗ್ರೆಸ್‌ ಸದಸ್ಯರು ಒಪ್ಪಲಿಲ್ಲ. ಕಾಂಗ್ರೆಸ್‌ ಸದಸ್ಯರು ಘೋಷಣೆಗಳನ್ನು ಕೂಗಿದರು. ಇದರ ನಡುವೆಯೇ, ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ನಡೆಸಿದರು. ’ಪ್ರವಾಹ ಅತಿವೃಷ್ಟಿಯಿಂದಾಗಿ ಜನರ ಜೇಬು ಖಾಲಿ ಆಗಿದೆ. ಜನರ ಹಣ ಲೂಟಿ ಮಾಡಿ ಬಿಜೆಪಿ ಶಾಸಕರ ಜೇಬು ಭರ್ತಿ ಆಗಿದೆ‘ ಎಂದು ಫಲಕ ಪ್ರದರ್ಶಿಸಿದರು.

ಇದರ ನಡುವೆ, ಎಂಇಎಸ್‌ ದೌರ್ಜನ್ಯ ಹಾಗೂ ಕನ್ನಡ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಸದಸ್ಯರು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು. ಸದನದಲ್ಲಿ ಕೋಲಾಹಲ ಜಾಸ್ತಿಯಾದ ಕಾರಣ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಸಭಾಧ್ಯಕ್ಷರು ಮುಂದೂಡಿದರು. ಮಧ್ಯಾಹ್ನ ಕಲಾಪ ಆರಂಭವಾದ ಬಳಿಕವೂ ಕಾಂಗ್ರೆಸ್‌ ಸದಸ್ಯರು ಧರಣಿ ಮುಂದುವರಿಸಿದರು. ’ಸಚಿವರ ರಾಜೀನಾಮೆ ವಿಚಾರದಲ್ಲಿ ಸರ್ಕಾರ ಭಂಡತನ ತೋರುತ್ತಿದೆ. ಈ ಧೋರಣೆಯನ್ನು ಖಂಡಿಸಿ ಸಭಾತ್ಯಾಗ ನಡೆಸುತ್ತೇವೆ‘ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ಪರಿಷತ್‌ನಲ್ಲೂ ಕೋಲಾಹಲ: ಜಾಲಪ್ಪ ಅವರಿಗೆ ಸಂತಾಪ ಸೂಚಿಸಿದ ಬಳಿಕ, ಬೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್‌ನಲ್ಲೂ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು.

ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಎಸ್.ಆರ್‌. ಪಾಟೀಲ, ಕೆ. ಪ್ರತಾಪಚಂದ್ರ ಶೆಟ್ಟಿ, ಬಿ.ಕೆ. ಹರಿಪ್ರಸಾದ್, ಎಂ. ನಾರಾಯಣ ಸ್ವಾಮಿ ಆಗ್ರಹಿಸಿದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ಪ್ರಕರಣವೊಂದನ್ನು ಬಿಜೆಪಿ ಸದಸ್ಯರು ಪ್ರಸ್ತಾಪಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು.

ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಪತಿ, ಸಂಧಾನಕ್ಕೆ ಯತ್ನಿಸಿದರು. ಆದರೆ, ಪ್ರಯತ್ನ ವಿಫಲವಾಯಿತು. ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣದಿಂದ ಮಧ್ಯಾಹ್ನ 3 ಗಂಟೆಗೆ ಸಭಾಪತಿ ಕಲಾಪ ಮುಂದೂಡಿದರು.

ಮಧ್ಯಾಹ್ನ ಕಲಾಪ ಆರಂಭವಾದಾಗಲೂ ಕಾಂಗ್ರೆಸ್‌ ಸದಸ್ಯರು ಧರಣಿ ಮುಂದುವರಿಸಿದರು. ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಸಚಿವರ ರಾಜೀನಾಮೆ ಪಡೆಯಬೇಕೆಂಬ ಬೇಡಿಕೆಗೆ ಸರ್ಕಾರ ಮಣಿಯಲಿಲ್ಲ. ಆಡಳಿತ ಪಕ್ಷದ ನಿಲುವನ್ನು ಖಂಡಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

‘ಭಂಡತನಕ್ಕೆ ಬಿದ್ದ ಸರ್ಕಾರ’
‘ಸಚಿವ ಬೈರತಿ ಬಸವರಾಜ ರಾಜೀನಾಮೆ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದಿದ್ದೆವು. ನಾಚಿಕೆಗೆಟ್ಟ ಸರ್ಕಾರ ಭಂಡತನಕ್ಕೆ ಬಿದ್ದು ರಾಜೀನಾಮೆ ಪಡೆಯುತ್ತಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕನ್ನಡ ನಾಡು ಎದುರಿಸುತ್ತಿರುವ ಹಲವು ಸಮಸ್ಯೆಗಳು, ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ, ಮತಾಂತರ ಮಸೂದೆ, ಶೇ 40ರಷ್ಟು ಲಂಚ, ಬಿಟ್‌ ಕಾಯಿನ್ ಹಗರಣ ಈ ಎಲ್ಲ ವಿಷಯಗಳನ್ನು ಚರ್ಚಿಸಬೇಕಿದೆ. ಅದಕ್ಕಾಗಿ ಸಭಾತ್ಯಾಗ ಮಾಡಿ ಪ್ರತಿಭಟಿಸಿದ್ದೇವೆ’ ಎಂದರು.

‘ಬೈರತಿ ಬಸವರಾಜ, ಆರ್. ಶಂಕರ್‌ ಅವರ ವಿರುದ್ಧದ ಹೋರಾಟವನ್ನು ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಅದನ್ನು ಪಕ್ಷ ನಿರ್ಧರಿಸಲಿದೆ’ ಎಂದು ಹೇಳಿದರು.

‘ಮತಾಂತರ ನಿಷೇಧ ಮಸೂದೆ ಮಂಡನೆ ಮಾಡುವಾಗಲೇ ವಿರೋಧ ಮಾಡುತ್ತೇವೆ. ಆ ಕಾರಣಕ್ಕಾಗಿಯೂ ಬೈರತಿ ರಾಜೀನಾಮೆ ವಿಚಾರದ ಬೇಡಿಕೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT