ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸರ್ವನಾಶಕ್ಕೆ ದಾರಿಯಾಗಲಿದೆ ತಿದ್ದುಪಡಿ: ಪ್ರತಿಪಕ್ಷಗಳ ಸದಸ್ಯರ ಆತಂಕ

ವಿಧಾನ ಪರಿಷತ್‌ನಲ್ಲಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಚರ್ಚೆ
Last Updated 8 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಕೃಷಿ ಕ್ಷೇತ್ರದ ಸರ್ವನಾಶಕ್ಕೆ ಕಾರಣವಾಗಲಿದೆ. ರೈತರು ಜಮೀನಿನ ಒಡೆತನ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಕೃಷಿಯೊಂದಿಗೆ ಹೈನುಗಾರಿಕೆ, ಪಶು ಸಂಗೋಪನೆ, ಕುಕ್ಕಟ ಸಾಕಣೆ ಸೇರಿ ರೈತಾಪಿ ಬದುಕೇ ಕೊನೆಯಾಗಲಿದೆ’ ಎಂದು ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳ ಸದಸ್ಯರು ಮಂಗಳವಾರ ಆತಂಕ ವ್ಯಕ್ತಪಡಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಮತ್ತು ಜೆಡಿಎಸ್‌ನ ಕೆಲವು ಸದಸ್ಯರು ತೀವ್ರ ಕಳವಳ ಹೊರಹಾಕಿದರು. ಮಸೂದೆ ಹಿಂಪಡೆಯುವಂತೆ ಆಗ್ರಹಿಸಿದರು.

‘ರೈತರು ದುಡಿದು ದಲ್ಲಾಳಿಗಳ ಹೊಟ್ಟೆ ತುಂಬಿಸುವ ಪರಿಸ್ಥಿತಿ ನಿರ್ಮಿಸಲು ಸರ್ಕಾರ ಹೊರಟಿದೆ. ಕೃಷಿ ಜಮೀನು ಖರೀದಿ ಮೇಲಿನ ನಿರ್ಬಂಧ ತೆಗೆದು ಹಾಕುವುದರಿಂದ ಕಾರ್ಪೋರೇಟ್‌ ಕಂಪನಿಗಳು ಕೃಷಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತವೆ. ಅವರ ಅಡಿಯಾಳಾಗಿ ರೈತರು ಕೆಲಸ ಮಾಡಬೇಕಾದ ದುಸ್ಥಿತಿ ಬರಲಿದೆ‘ ಎಂದು ಕಾಂಗ್ರೆಸ್‌ನ ಬಸವರಾಜ ಪಾಟೀಲ್‌ ಇಟಗಿ ಹೇಳಿದರು.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ‘ಬ್ರಿಟೀಷರ ಕಾಲದಲ್ಲಿ ಜಾರಿಗೆ ತಂದ ಕಾನೂನಿನ ಕಾರಣದಿಂದ ದೇಶದಲ್ಲಿ ಜಮೀನ್ದಾರಿ ಪದ್ಧತಿ ಮತ್ತು ಪಾಳೇಗಾರಿಕೆ ವ್ಯವಸ್ಥೆ ಇತ್ತು. ದೇವರಾಜ ಅರಸು ಅವರು ಜಾರಿಗೊಳಿಸಿದ ಮಹತ್ವದ ಕಾಯ್ದೆಯನ್ನು ದುರ್ಬಲಗೊಳಿಸಿ ರೈತರ ನೆಮ್ಮದಿ ಹಾಳುಮಾಡಲು ಸರ್ಕಾರವೇ ಹೊರಟಿದೆ‘ ಎಂದು ದೂರಿದರು.

ಅರ್ಜಿಗಳ ಸ್ಥಿತಿ ಏನು?: ‘ಭೂ ಸುಧಾರಣಾ ಕಾಯ್ದೆಯ ಸೆಕ್ಷನ್‌ 79ಎ ಮತ್ತು 79 ಬಿ ಉಲ್ಲಂಘನೆಗೆ ಸಂಬಂಧಿಸಿದ 18,000 ಅರ್ಜಿಗಳು ಬಾಕಿ ಇವೆ. ಅವುಗಳ ಸ್ಥಿತಿ ಏನಾಗಲಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು’ ಎಂದು ಕಾಂಗ್ರೆಸ್‌ ಸದಸ್ಯಆರ್‌.ಬಿ. ತಿಮ್ಮಾಪೂರ ಒತ್ತಾಯಿಸಿದರು.

ಭು ಸುಧಾರಣಾ ಕಾಯ್ದೆ ಉಲ್ಲಂಘಿ ಸಿರುವ ಹಣವಂತರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಆರೋಪಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದಿಲ್ಲಿಯ ದೊರೆಗಳ ಒತ್ತಟಕ್ಕೆ ಮಣಿದು ತಿದ್ದುಪಡಿ ಮಸೂದೆ ತಂದಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ಅವರು ಕೆಲಸ ಮಾಡಬಾರದು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಆಗ್ರಹಿಸಿದರು.

ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಭಾಗಶಃ ಬೆಂಬಲ ವ್ಯಕ್ತಪಡಿಸಿದರೆ, ಎಚ್‌.ಎಂ. ರಮೇಶ್‌ ಗೌಡ ಸಂಪೂರ್ಣವಾಗಿ ಮಸೂದೆಯನ್ನು ಬೆಂಬಲಿಸಿದರು.

ಗೋ ಸಂತತಿ ನಾಶಕ್ಕೆ ದಾರಿ

‘ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಜಾರಿಗೊಳಿಸಿದರೆ ಗೋಹತ್ಯೆ ನಿಷೇಧ ಕಾಯ್ದೆಯ ಅಗತ್ಯವೇ ಇರುವುದಿಲ್ಲ. ತಿದ್ದುಪಡಿಯಿಂದಾಗಿ ಇದರಿಂದ ಗೋವುಗಳ ಸಂತತಿ ನಾಶವಾಗಲಿದೆ. ಅಷ್ಟೇ ಅಲ್ಲ, ಕುರಿ, ಕೋಳಿ ಸಾಕಾಣಿಕೆಯೂ ನಿಲ್ಲುತ್ತದೆ’ ಎಂದು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡ ಕುರಿತು ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಮಾಹಿತಿ ಕೇಳಿದೆ. ಅದನ್ನೇ ನೆಪವಾಗಿಟ್ಟುಕೊಂಡು ಕಾಯ್ದೆಯನ್ನೇ ಬದಲಿಸಲಾಗುತ್ತದೆ. ಇದು ಕೃಷಿ ಕ್ಷೇತ್ರದ ಕತ್ತು ಕತ್ತರಿಸುವ ಕೆಲಸ ಎಂದು ಟೀಕಿಸಿದರು.

ಬೆಂಬಲ ಬೆಲೆ ನಿಗದಿಗೆ ಬಗ್ಗೆ ಅತೃಪ್ತಿ: ವಿರೋಧಪಕ್ಷಗಳ ಸಭಾತ್ಯಾಗ

‘ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ರಾಜ್ಯ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸಿದೆ. ರೈತರ ಬಗ್ಗೆ ದಿವ್ಯ ನಿರ್ಲಕ್ಷ್ಯ ಭಾವನೆ ಹೊಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.

ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆಯಡಿ ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಸರ್ಕಾರದ ಉತ್ತರದಿಂದ ಅಸಮಾ ಧಾನಗೊಂಡ ಜೆಡಿಎಸ್‌ ಸದಸ್ಯರು ಕೂಡ ಸಭಾತ್ಯಾಗ ಮಾಡಿದರು.

ವಿಧಾನಸಭೆಯಲ್ಲಿ ಮಂಗಳವಾರ ನಿಯಮ 69 ರಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಷಯ ಪ್ರಸ್ತಾಪಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ, ರಾಗಿ ನಿಗದಿ ಮಾಡಿದ ಗುರಿಯಷ್ಟು ಖರೀದಿ ಆಗುತ್ತಿಲ್ಲ. ರೈತರು ತಂದು ಕೊಡುತ್ತಿಲ್ಲ. ಸರ್ಕಾರ ನಿಗದಿ ಮಾಡಿದ ಗುರಿಯಷ್ಟು ಖರೀದಿ ಆದರೆ, ಇನ್ನೂ ಹೆಚ್ಚು ಖರೀದಿಗೆ ಕೇಂದ್ರ ಸರ್ಕಾರವನ್ನು ಒಪ್ಪಿಸಬಹುದು. ವರ್ಷವಿಡೀ ಎಲ್ಲ ಬೆಳೆಗಳಿಗೂ ಬೆಂಬಲ ಕೊಡಲು ಆಗುವುದಿಲ್ಲ. 90 ದಿನಗಳಲ್ಲಿ ಮಾತ್ರ ಖರೀದಿಗೆ ಅವಕಾಶ ಇದೆ ಎಂದರು.

‘ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಿದರೆ ಅದನ್ನು ನ್ಯಾಯಬೆಲೆ ಅಂಗಡಿ ಮೂಲಕ ಮಾರಬೇಕು. ಆದರೆ ಖರೀ ದಿಸು ವವರು ಇಲ್ಲ. ಇದನ್ನು ಆಹಾರವಾಗಿ ಮನುಷ್ಯರು ತಿನ್ನುವುದಿಲ್ಲ. ಹಾಗಾಗಿ, ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಖರೀದಿಸಲು ಸಾಧ್ಯವಿಲ್ಲ’ ಎಂದರು

ಕಡಿಮೆ ಬೆಲೆಗೆ ಮಾರಬೇಕಾಗಿದೆ: ಸಿದ್ದರಾಮಯ್ಯ

’ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನೇ ಸ್ಥಾಪಿಸಿಲ್ಲ. ಇದರಿಂದಾಗಿ, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರುವ ಸ್ಥಿತಿ ನಿರ್ಮಾಣವಾಗಿದೆ‘ ಎಂದು ಸಿದ್ದರಾಮಯ್ಯ ಹೇಳಿದರು.

’ಪ್ರವಾಹದಿಂದಾಗಿ ರಾಜ್ಯದಲ್ಲಿ ಈ ವರ್ಷ 10 ಲಕ್ಷ ಟನ್‌ ಆಹಾರ ಉತ್ಪಾದನೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. 17 ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಕಳೆದ ವರ್ಷ ಭತ್ತಕ್ಕೆ ಕ್ವಿಂಟಲ್‌ಗೆ ₹1815 ಬೆಂಬಲ ಬೆಲೆ ನೀಡಲಾಗಿತ್ತು. ಈ ವರ್ಷ ₹1818 ನೀಡಲಾಗುವುದು ಎಂದು ಕೇಂದ್ರ ಪ್ರಕಟಿಸಿದೆ. ಆದರೆ, ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ಮಾರುಕಟ್ಟೆಯಲ್ಲಿ ₹1,200 ರಿಂದ ₹1,400ಕ್ಕೆ ಭತ್ತ ಮಾರುತ್ತಿದ್ದಾರೆ‘ ಎಂದರು.

’1.10 ಲಕ್ಷ ಟನ್‌ನಷ್ಟು ಭತ್ತಕ್ಕೆ ಬೆಂಬಲ ಬೆಲೆ ನೀಡುವುದಾಗಿ ಕೇಂದ್ರ ತಿಳಿಸಿದೆ. ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಚ್ಚುವರಿಯಾಗಿ 1 ಲಕ್ಷ ಟನ್ ಖರೀದಿ ಮಾಡುವುದಾಗಿ ತೀರ್ಮಾನ ಕೈಗೊಂಡಿದೆ. ರಾಜ್ಯ ದಲ್ಲಿ ಈ ವರ್ಷ 29 ಲಕ್ಷ ಟನ್‌ ಭತ್ತ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರ ಕನಿಷ್ಠ 21 ಲಕ್ಷ ಟನ್ ಭತ್ತವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಬೇಕು. ಮಹಾರಾಷ್ಟ್ರ ಸರ್ಕಾರ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ₹900 ನೀಡಿ ಭತ್ತ ಖರೀದಿ ಮಾಡು ತ್ತಿದೆ. ರಾಜ್ಯ ಸರ್ಕಾರ ಸಹ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ₹500 ನೀಡಿ ಖರೀದಿ ಮಾಡಿ ರೈತರ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT