ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟ ಕುಸಿತ ಸ್ವಯಂಕೃತ ಅನಾಹುತ

Last Updated 6 ಡಿಸೆಂಬರ್ 2021, 4:54 IST
ಅಕ್ಷರ ಗಾತ್ರ

ಕರ್ನಾಟಕದ ಚಾಮುಂಡಿ ಬೆಟ್ಟ, ನಂದಿ ಬೆಟ್ಟ ಮತ್ತು ಆಂಧ್ರದ ತಿರುಪತಿ ಬೆಟ್ಟದ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರು ಯಾರೂ ಇಲ್ಲ. ಚಾಮುಂಡಿ ಮತ್ತು ತಿರುಪತಿ ಬೆಟ್ಟಗಳು ವಿಶೇಷವಾಗಿ ಲಕ್ಷಾಂತರ ಭಕ್ತರ ಅಚ್ಚುಮೆಚ್ಚಿನ ತಾಣಗಳು. ನಂದಿಬೆಟ್ಟ ಪರಿಸರ ‍ಪ್ರಿಯರ ಸ್ವರ್ಗ. ಮೂರೂ ಬೆಟ್ಟಗಳು ಸಾಹಸಿ ಚಾರಣಿಗರಿಗೂ ಹೇಳಿ ಮಾಡಿಸಿದಂತಿವೆ. ಆದರೆ ಈ ವರ್ಷ ವಿಪರೀತ ಮಳೆಯಿಂದಾಗಿ ಈ ಬೆಟ್ಟಗಳಲ್ಲಿ ಸಂಭವಿಸಿದ ಭೂ ಕುಸಿತವು ಅವುಗಳ ‘ಮೋಹಕ’, ‘ಧಾರ್ಮಿಕ’ ಮುಖವನ್ನು ಪಕ್ಕಕ್ಕೆ ಸರಿಸಿ, ‘ಅನಾಹುತಕಾರಿ’ ಮುಖವನ್ನು ಅನಾವರಣ ಮಾಡಿದೆ.

ಆಗಸ್ಟ್‌ ಕೊನೇ ವಾರದಲ್ಲಿ ಭಾರಿಮಳೆಯಿಂದ, ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತವಾಗಿ, ಮುಖ್ಯ ರಸ್ತೆಹತ್ತು ಅಡಿ ಆಳಕ್ಕೆ ಕುಸಿದಿತ್ತು. ಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡು, ರಸ್ತೆಗೆ ಅಡ್ಡಲಾಗಿ ಮಣ್ಣು, ಬೃಹತ್ ಬಂಡೆಗಳು,ಮರ ಗಿಡಗಳು ಉರುಳಿದ್ದವು. ರಸ್ತೆ ಬಂದ್ ಆಗಿದ್ದರಿಂದ, ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರನ್ನು ವಾಪಸ್ ಕಳುಹಿಸುವುದೂ ಸವಾಲಾಗಿತ್ತು. ವಿದ್ಯುತ್ ಕಂಬಗಳೂ ಬಿದ್ದು ನಂದಿ ಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದುರಸ್ತಿ ಮಾಡಿ ಡಿಸೆಂಬರ್‌ 1ರಿಂದ ಮತ್ತೆ ಸಂಚಾರಕ್ಕೆ ಅನುವು ಮಾಡಲಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್‌ ಕೊನೆ ವಾರದಲ್ಲಿ ಸುರಿದ ಭಾರಿ ಮಳೆಯಿಂದ, ಬೃಹತ್ ನಂದಿ ವಿಗ್ರಹಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತವಾಗಿತ್ತು. ನಂತರದ ಒಂದು ವಾರದೊಳಗೆ ಅದೇ ಸ್ಥಳದ ಸಮೀಪ ಮೂರು ಕಡೆ ಮತ್ತೆ ಕುಸಿದಿತ್ತು. ರಸ್ತೆಗಳು ಬಿರುಕು ಬಿಟ್ಟಿದ್ದವು. ಮಳೆ ಮುಂದುವರಿದರೆ ಮತ್ತಷ್ಟು ಕುಸಿಯುವ ಸಾಧ್ಯತೆಯೂ ಇರುವುದರಿಂದ ಸದ್ಯ ಅಲ್ಲಿ ದುರಸ್ತಿ ಕಾರ್ಯವೂ ನಡೆಯುವಂತಿಲ್ಲ. ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ.

2005ರಲ್ಲಿ ಬೆಟ್ಟದ ಜ್ವಾಲಾಮುಖಿ ಗುಡಿಗೆ ತೆರಳುವ ಎರಡು ರಸ್ತೆಗಳ ಮೇಲೆ ಬಂಡೆಗಳು ಕುಸಿದಿದ್ದವು. ಅದಾದ ಬಳಿಕ 2017, 2019ರಲ್ಲೂ ಕುಸಿತವಾಗಿತ್ತು. ಹೆಚ್ಚು ಕಡಿಮೆ ದಸರಾ ಉತ್ಸವದ ಆಸುಪಾಸಿನಲ್ಲೇ ಕುಸಿತಗಳಾಗಿರುವುದು ಗಮನಿಸಬೇಕಾದ ಅಂಶ. ಈ ನಡುವೆ, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಬೆಟ್ಟಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಮೈಸೂರಿನ ಎಂಜಿನಿಯರುಗಳ ಸಂಸ್ಥೆಯ ಎಂಜಿನಿಯರುಗಳು ಜಿಲ್ಲಾಧಿಕಾರಿಗೆವರದಿಯನ್ನೂ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ, ತೀರ್ಥಕ್ಷೇತ್ರಗಳ ಪುನಶ್ಚೇತನ, ಆಧ್ಯಾತ್ಮ, ಪಾರಂಪರಿಕ ವರ್ಧನೆ (ಪ್ರಸಾದ) ಯೋಜನೆ ಅಡಿ ಬೆಟ್ಟವನ್ನು ಅಭಿವೃದ್ಧಿಪಡಿಸಿದ್ದೂ ಅದಕ್ಕೆ ಕಾರಣವೇ ಎಂಬುದೂ ಈಗ ಚರ್ಚೆಯ ಕೇಂದ್ರ. ಇಂಥ ಸನ್ನಿವೇಶದಲ್ಲೇ, ಅದೇ ಯೋಜನೆ ಅಡಿ, ಬೆಟ್ಟವನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಇನ್ನಷ್ಟು ಅಭಿವೃದ್ಧಿಪಡಿಸಲು ಎರಡನೇ ಪ್ರಸ್ತಾವವನ್ನೂ ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿದೆ.

ಇದು ಕೂಡ ಪರಿಸರಪ್ರಿಯರಲ್ಲಿ ತೀವ್ರ ಅಸಮಾಧಾನವನ್ನು ಮೂಡಿಸಿದೆ. ಆದರೆ, ಹಂಪಿ ಮಾದರಿಯಲ್ಲಿ ಬೆಟ್ಟವನ್ನು ಅಭಿವೃದ್ಧಿಗೊಳಿಸುವುದಾಗಿ ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಹೇಳಿಕೆ ನೀಡಿದ್ದಾರೆ. ಆದರೆ ಹಂಪಿಯಲ್ಲಿ ಯಾವ ಅಭಿವೃದ್ಧಿ ಮಾದರಿಯೂ ಇಲ್ಲ!

ಏಳು ಸುತ್ತಿನ ಬೆಟ್ಟ ತಿರುಮಲ ತಿರುಪತಿಯದ್ದೂ ಅಭಿವೃದ್ಧಿ ವಾಯುವೇಗದ ಕಥನವೇ. ಮೆಟ್ಟಿಲುಗಳ ಮೂಲಕ ಹತ್ತಿ ದರ್ಶನ ಪಡೆಯುವವರ ಸಂಖ್ಯೆ ಕಡಿಮೆಯಾಗಿ, ವಾಹನಗಳಲ್ಲಿ ತೆರಳುವವರ ಅನುಕೂಲ ಕೇಂದ್ರಿತ ಅಭಿವೃದ್ಧಿ ಮಾದರಿಯಿಂದ ತಿರುಪತಿಯ ಮೇಲೂ ಭಾರ ಹೆಚ್ಚಾಗಿಯೇ ಕುಸಿತ ಉಂಟಾಗಿದೆ.

ವೆಂಕಟೇಶ್ವರ ದೇಗುಲಕ್ಕೆ ಹೋಗುವ ಎರಡನೇ ಘಾಟ್‌ ರಸ್ತೆಯಲ್ಲೂ ಡಿ.1ರಂದು ಮಳೆಯಿಂದ ಭೂಕುಸಿತವಾಗಿದೆ. ರಸ್ತೆಯ ಒಂದು ಬದಿ ಕುಸಿದು, ಇನ್ನೊಂದು ಬದಿಯಲ್ಲಿ ಬೃಹತ್‌ ಬಂಡೆ ಕಲ್ಲುಗಳು ಬಿದ್ದಿವೆ. ಅಲ್ಲಿ ಅನಿರ್ದಿಷ್ಟಾವಧಿವರೆಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕುಸಿತವಾದ ಸಂದರ್ಭದಲ್ಲಿ 20 ಭಕ್ತರಿದ್ದ ಬಸ್‌ ಬೆಟ್ಟವೇರುತ್ತಿತ್ತು. ರಸ್ತೆಯಲ್ಲಿ ಭಾರಿ ಗಾತ್ರದ ಬಂಡೆಗಳು ಉರುಳುವುದನ್ನು ಕಂಡ ಕೂಡಲೇ ಬಸ್‌ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್‌ ನಿಲ್ಲಿಸಿದ್ದರಿಂದ ಭಕ್ತರು ಬದುಕುಳಿದಿದ್ದಾರೆ. ಸುಮಾರು 20 ಕಿ.ಮೀ ಉದ್ದದ ಸುರುಳಿಯಾಕಾರ ರಸ್ತೆಯಲ್ಲಿ 1000 ಅಡಿ ಮತ್ತು 800 ಅಡಿ ಎತ್ತರದಲ್ಲಿ ತಡೆಗೋಡೆಗಳಿಗೂ ಹಾನಿಯಾಗಿದೆ. ದೆಹಲಿಯ ಐಐಟಿ ತಜ್ಞರ ತಂಡವು ಶೀಘ್ರದಲ್ಲೇ ಕುಸಿತದ ಸ್ಥಳಕ್ಕೆ ಭೇಟಿ ನೀಡಲಿದೆ.

ಕಾರಣವೇನು?

ಈ ಬೆಟ್ಟಗಳಲ್ಲಿ ಕುಸಿತ ಉಂಟಾಗಲು ಕಾರಣವೇನು ಎಂಬುದಕ್ಕೆ ಉತ್ತರ ಸರಳ ಮತ್ತು ಸುಲಭ: ಇಲ್ಲಿ ಅಭಿವೃದ್ಧಿಯ ಭಾರ ಹೆಚ್ಚಾಗಿದೆ!

ಕನಿಷ್ಠ ಒಂದು ದಶಕದ ಹಿಂದೆ ಈ ಬೆಟ್ಟಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಮತ್ತು ಈಗ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ, ವಾಹನಗಳ ಓಡಾಟ, ಕಟ್ಟಡಗಳ ನಿರ್ಮಾಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇದು ಸ್ಪಷ್ಟವಾಗುತ್ತದೆ. ಜನರಲ್ಲಿ ಭಕ್ತಿ ಹೆಚ್ಚಾಗಿದೆ. ಸರ್ಕಾರಗಳ ಮೇಲೆ ಪ್ರವಾಸಿ ಕೇಂದ್ರಿತ ಅಭಿವೃದ್ಧಿ ಒತ್ತಡವೂ ಹೆಚ್ಚಾಗಿದೆ! ಪರಿಸರ ಕೇಂದ್ರಿತ ಚಿಂತನೆಗೆ ಜಾಗ ಇಲ್ಲವೇ ಇಲ್ಲ.

‘ಜಲಮಟ್ಟ’ವನ್ನು ಕಾಪಾಡುವಲ್ಲಿ, ಜಲಾನಯನ ವ್ಯವಸ್ಥೆಗೆ ಬಲ ತುಂಬುವಲ್ಲಿ ಈ ಬೆಟ್ಟಗಳಿಗಿದ್ದ ಸಹಜ ನಿಲುವು ಈಗ ಇಲ್ಲ. ಬೆಟ್ಟದಲ್ಲಿದ್ದ ಕಾಡು ಕ್ಷೀಣಿಸಿದೆ. ಕಾಡು ಪ್ರಾಣಿಗಳನ್ನು, ಜಾನುವಾರುಗಳನ್ನು ಓಡಿಸಲಾಗಿದೆ. ರೈತರಿಗೆ ಸಹಜವಾಗಿ ಕಾಡಿನ ಉತ್ಪನ್ನಗಳೂ ಇಲ್ಲವಾಗಿವೆ.

90ರ ದಶಕದಲ್ಲಿ ನಾರ್ವೆ ದೇಶದ ನೆರವಿನೊಂದಿಗೆ ಅರಣ್ಯ ಇಲಾಖೆಯು ಚಾಮುಂಡಿ ಬೆಟ್ಟವನ್ನು ಜೀವವೈವಿಧ್ಯ ತಾಣವನ್ನಾಗಿಸುವ ಉದ್ದೇಶದಿಂದ ಸ್ಥಳೀಯರನ್ನು ಹೊರಗಿಟ್ಟು ಬೇಲಿ ಹಾಕಿತು. ಆದರೆ ಎರಡು ದಶಕಗಳ ಬಳಿಕ ಕಾಣುತ್ತಿರುವುದು ಬೇರೆಯೇ ದೃಶ್ಯ. ಅತಿಯಾದ ಕಾಂಕ್ರಿಟೀಕರಣ. ಅಭಿವೃದ್ಧಿಗೆ ಬೇಕೆಂದವರಿಗೆಲ್ಲರಿಗೂ ಅರಣ್ಯ ಭೂಮಿಯನ್ನು ಬಿಟ್ಟುಕೊಡುವ ಔದಾರ್ಯ. ಪರಿಣಾಮ ಸ್ಪಷ್ಟ: ಅಮೂಲ್ಯ ಜೀವವೈವಿಧ್ಯ ನಾಶ. ಬೆಟ್ಟದ ಮೂಲ ನಿವಾಸಿಯಾದ ಚಿರತೆ, ಜಿಂಕೆ, ಅಪರೂಪದ ಪಕ್ಷಿ, ಸಸ್ಯ ಸಂತತಿ, ಝರಿಗಳು ನೆಲೆ ಕಳೆದುಕೊಂಡಿವೆ. ಜನವಸತಿ ಹೆಚ್ಚಾಗಿದೆ.

‘ಭಕ್ತರು ಮತ್ತು ಪ್ರವಾಸಿಗರ ಅನುಕೂಲ’ದ ದೃಷ್ಟಿಯಿಂದ ಬೆಟ್ಟಗಳ ಸಹಜ ಸ್ವರೂಪಕ್ಕೆ ಧಕ್ಕೆ ತಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇ ಕುಸಿತಗಳಿಗೆ ಕಾರಣ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಅದಕ್ಕೆ ಪರ್ಯಾಯವೇನು ಎಂದರೆ ಮೌನವಾಗುತ್ತಾರೆ.

ಮುಂದೇನು?

ಸ್ವರೂಪದ ದೃಷ್ಟಿಯಿಂದ ವಿಶ್ವವಿಖ್ಯಾತ ವಾದ ಈ ಬೆಟ್ಟಗಳನ್ನು ಉಳಿಸಿಕೊಳ್ಳಬೇಕೆ ಅಥವಾ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಬೇಕೆ ಎಂಬ ಗಂಭೀರ ಪ್ರಶ್ನೆಗಳನ್ನೂ ಪರಿಸರಪ್ರಿಯರು ಈಗ ಮುಂದಿಟ್ಟಿದ್ದಾರೆ. ಬೆಟ್ಟದ ಮೇಲಿನ ಅಭಿವೃದ್ಧಿ ಮಾದರಿಗಳನ್ನೂ ಕಟು ಮಾತುಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಕುಸಿತವಾದ ಸ್ಥಳವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಹೇಗೆ ಎಂಬುದು ಸದ್ಯ ದೊಡ್ಡ ಸವಾಲಿನಂತೆ ಸರ್ಕಾರಗಳಿಗೆ ಕಾಣಿಸುತ್ತಿದೆಯೇ ಹೊರತು, ಬೆಟ್ಟಗಳ ಮೇಲೆ ಹೊರಿಸಿದ ಅಭಿವೃದ್ಧಿಯ ಭಾರವನ್ನು ಕಡಿಮೆ ಮಾಡುವುದು ಹೇಗೆ ಎಂಬುದರತ್ತ ಯಾರೂ ಗಮನ ಹರಿಸಿಲ್ಲ.

ಕುಸಿದ ರಸ್ತೆಗಳನ್ನು ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡುವುದು ಸದ್ಯ ಸರ್ಕಾರಗಳ ಆದ್ಯತೆ. ಆದರೆ ಪರಿಸರಪ್ರಿಯರು ಮತ್ತು ತಜ್ಞರ ಪ್ರಕಾರ, ಇದು ಭೂಕುಸಿತವನ್ನು ಸಂಪೂರ್ಣವಾಗಿ ನಿಯಂತ್ರಿಸುವುದಿಲ್ಲ. ಚಾಮುಂಡಿಬೆಟ್ಟದ ರಸ್ತೆ ಮರುನಿರ್ಮಾಣಕ್ಕೆ ಕೆಳ ಭಾಗದಿಂದ 800 ಮೀಟರ್‌ ಉದ್ದ ರಸ್ತೆಯ ಭಾರವನ್ನು ಹೊರಬಲ್ಲ ಗೋಡೆಯನ್ನು ನಿರ್ಮಿಸಬೇಕು. ಆದರೆ ಗೋಡೆ ನಿರ್ಮಿಸಿದ ಮಾತ್ರಕ್ಕೆ ಮತ್ತೆ ಕುಸಿಯುವುದಿಲ್ಲ ಎಂಬ ಖಾತರಿಯೂ ಇಲ್ಲ. ಈ ನಡುವೆ ದುರಸ್ತಿಗೆಂದೇ ₹9.5 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಹೋರಾಟದ ದಾರಿ: ಸದ್ಯ ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ವಿರುದ್ಧ ಜನಚಳವಳಿ ನಡೆಸಲು ಸಿದ್ಧತೆಗಳು ಭರದಿಂದ ನಡೆದಿವೆ. ಸಹಿ ಸಂಗ್ರಹವೂ ನಡೆದಿದೆ. ಪರಿಸರ ಪ್ರಿಯ ಸಂಘಟನೆಗಳು ಹಲವು ಸುತ್ತಿನ ಸಭೆ ನಡೆಸಿವೆ. ಬೃಹತ್‌ ಹೋರಾಟಕ್ಕೆ ವೇದಿಕೆ ರೂಪುಗೊಳ್ಳುತ್ತಿದೆ.

ವಿಜ್ಞಾನ ಸಂಸ್ಥೆಗಳು ಶಿಫಾರಸು ಮಾಡುವ ದುರಸ್ತಿ ಮತ್ತು ಅಭಿವೃದ್ಧಿ ಮಾದರಿಗಳು ಹಾಗೂ ಪರಿಸರ ತಜ್ಞರು, ಪರಿಸರ ಕಾರ್ಯಕರ್ತರ ಅನುಭವ ಆಧಾರಿತ ಪ್ರತಿಪಾದನೆಗಳು ಮೇಳೈಸಿದರೆ ಮಾತ್ರ ‘ಬೆಟ್ಟದ ಜೀವ’ ಉಳಿಯಬಲ್ಲದು.

ಅಭಿವೃದ್ಧಿ ನಿಯಂತ್ರಣ ಮುಖ್ಯ

ಅಭಿವೃದ್ಧಿ ಹೆಸರಲ್ಲಿ ರಸ್ತೆಗಳನ್ನು ನಿರ್ಮಿಸುತ್ತಾ, ಬೆಟ್ಟಗಳ ಮೇಲೆ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಾ ಹೋದರೆ ಅವು ಶಾಶ್ವತವಾಗಿ ರಿಯಲ್‌ ಎಸ್ಟೇಟ್‌ ತಾಣಗಳಾಗುವುದರಲ್ಲಿ ಅನುಮಾನವೇ ಇಲ್ಲ. ಹಸಿರಿನ ನಡುವೆ ಮನೆ ಕಟ್ಟುವವರಿಗೆ ಬೆಟ್ಟಗಳು ನಿವೇಶನಗಳಾಗಿಬಿಡಬಹುದು.ಹೀಗಾಗಿ ಬೆಟ್ಟಗಳಲ್ಲಿ ಅರಣ್ಯ ಇಲಾಖೆಯ ಚೆಕ್ಕುಬಂದಿಗಳನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಇತರೆ ಎಲ್ಲ ಅರಣ್ಯಗಳಿಗೂ ಅನ್ವಯಿಸುವ ಸಂರಕ್ಷಣಾ ನಿಯಮಗಳನ್ನು ಇಲ್ಲಿಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬೆಟ್ಟಗಳಲ್ಲಿ ಸಂಚರಿಸುವ ಚಾರಣಿಗರನ್ನು ನಿಯಂತ್ರಿಸುವುದಕ್ಕಿಂತಲೂ, ನಿಜವಾದ ರಿಯಲ್‌ ಎಸ್ಟೇಟ್‌ ತಿಮಿಂಗಿಲಗಳನ್ನು ಹಿಡಿಯುವುದೇ ಮುಖ್ಯ. ಅಭಿವೃದ್ಧಿಗಿಂತಲೂ ಅದನ್ನು ನಿಯಂತ್ರಿಸುವುದೇ ಸದ್ಯ ಬೆಟ್ಟದ ಪರಿಸರವನ್ನು ಉಳಿಸುವ ಸಹಜ ದಾರಿ.

-ಕೆ.ಮನು,ಪಕ್ಷಿ ತಜ್ಞ, ಮೈಸೂರು

ಬೆಟ್ಟದ ಧಾರಣ ಸಾಮರ್ಥ್ಯ ಅರಿಯಬೇಕು

ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮುನ್ನ, ಬೆಟ್ಟಗಳ ಧಾರಣ ಸಾಮರ್ಥ್ಯವನ್ನು ಪರಿಗಣಿಸುವುದು ಬಹಳ ಮುಖ್ಯ. ಆದರೆ ಈ ಅಂಶವನ್ನೇ ಎಲ್ಲೆಡೆ ಕಡೆಗಣಿಸಲಾಗಿದೆ.ಬೆಂಗಳೂರಿಗೆ ಹತ್ತಿರವೆಂಬ ಕಾರಣಕ್ಕೆ ಬಹಳ ಮಂದಿ ನಂದಿ ಬೆಟ್ಟಕ್ಕೆ ಬರುತ್ತಾರೆಂದು ಅಭಿವೃದ್ಧಿ ಪಡಿಸುವುದು ಸರಿಯಲ್ಲ. ಆದರೆ ಹೀಗೆ ಮಾಡಿರುವುದರಿಂದಲೇ ಬೆಟ್ಟದ ಜೀವವೈವಿಧ್ಯ ನಾಶವಾಗಿದೆ.ಅಕ್ರಮ ಒತ್ತುವರಿ, ಕಟ್ಟಡ ನಿರ್ಮಾಣಗಳಿಂದ ತಪ್ಪಲಿನ ಗಟ್ಟಿತನವೂ ಕಡಿಮೆಯಾಗಿ, ಭಾರ ಹೊರುವ ಸಾಮರ್ಥ್ಯವೂ ಕುಗ್ಗುತ್ತದೆ. ಹೀಗಾಗಿ ಬೆಟ್ಟಗಳ ವಿಷಯದಲ್ಲಿ ಸುಸ್ಥಿರ ಪ್ರವಾಸೋದ್ಯಮದ ಮಾದರಿಗಳನ್ನೇ ಗಂಭೀರವಾಗಿ ಅನುಸರಿಸಬೇಕು.

ಲೋಹಿತ್‌,ವೈ.ಟಿ. ಹಿರಿಯ ಯೋಜನಾಧಿಕಾರಿ, ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌ ಸಂಸ್ಥೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT