ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಫಲಶ್ರುತಿ: ಭೂ ಕಬಳಿಕೆ ಪ್ರಕರಣ- 1,956 ಮಂಜೂರಾತಿ ರದ್ದು

ಹೇಮಾವತಿ ಜಲಾಶಯ ಯೋಜನೆ
Last Updated 15 ಏಪ್ರಿಲ್ 2021, 21:13 IST
ಅಕ್ಷರ ಗಾತ್ರ

ಸಕಲೇಶಪುರ (ಹಾಸನ ಜಿಲ್ಲೆ): ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಭೂಮಿ ಕಬಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ, 1,956 ಅಕ್ರಮ ಮಂಜೂರಾತಿ (7,824 ಎಕರೆ) ರದ್ದುಗೊಳಿಸಿ ಹೇಮಾವತಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಭೂ ಹಗರಣದ ಸಮಗ್ರ ತನಿಖೆ ನಡೆಸಿದ್ದ ಸಿಇಎನ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ನೀಡಿದ ವರದಿಯಂತೆ, 1970 ರಿಂದ 2014ರ ವರೆಗೆ ಹಾಗೂ ಜ.1, 2015ರಿಂದ ನ.3, 2018ರ ವರೆಗಿನ ಅಕ್ರಮ ಮಂಜೂರಾತಿಗಳನ್ನು ರದ್ದುಪಡಿಸಲಾಗಿದೆ. ‘ಪ್ರಜಾವಾಣಿ‘ ಈ ಕುರಿತು ಆಗಸ್ಟ್ 25, 2019ರಂದು ವಿಶೇಷ ವರದಿ ಪ್ರಕಟಿಸಿತ್ತು.

ಒಂದೇ ನಕಲು ಅವಾರ್ಡ್‌ ಪ್ರತಿ ಮತ್ತು ಪೇಮೆಂಟ್‌ ವೋಚರ್‌ ಬಳಿಸಿ ಇಬ್ಬರಿಗೆ, ಮೂವರಿಗೆ ಅಧಿಕೃತ ಜ್ಞಾಪನಾ ಪತ್ರ ನೀಡಿ, ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿರುವ 41 ಪ್ರಕರಣಗಳು, 1970 ರಿಂದ 2015ರ ವರೆಗೆ ಸಂತ್ರಸ್ತರ ದಾಖಲೆಗಳನ್ನು ಬಳಸಿಕೊಂಡು ಎರಡನೇ ಬಾರಿಗೆ ಜಮೀನು ಮಂಜೂರಾತಿ ಮಾಡಿಸಿಕೊಂಡಿದ್ದ 62 ಪ್ರಕರಣಗಳು, ತಹಶೀಲ್ದಾರರಿಂದ ಸಾಗುವಳಿ ಚೀಟಿ ವಿತರಿಸಿ ಪೋಡಿ ಖಾತೆ ಮಾಡಿರುವ 14 ಪ್ರಕರಣಗಳು, ಮರ ಮಾಲ್ಕಿ ನಿಗದಿಯಾಗದೆ ಸಾಗುವಳಿ ಚೀಟಿ ನೀಡಿರುವ 837 ಪ್ರಕರಣಗಳು, ವಿಶೇಷ ಭೂ ಸ್ವಾಧೀನಾಧಿಕಾರಿಗಳಾಗಿದ್ದ ಶ್ರೀನಿವಾಸಗೌಡ ಅವರು 2018–19ರಲ್ಲಿ ಮಂಜೂರು ಮಾಡಿದ್ದ 648 ಪ್ರಕರಣ ಹಾಗೂ ಬಿ.ಎ.ಜಗದೀಶ್‌ ಅವಧಿಯಲ್ಲಿನ ಅನಧಿಕೃತ 40 ಮಂಜೂರಾತಿ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ.

ಇದರೊಂದಿಗೆ, ನಕಲಿ ದಾಖಲೆ ಮೇಲೆ ಭೂಮಿ ಮಂಜೂರು ಮಾಡಿದ 32 ಪ್ರಕರಣ, ಅರಣ್ಯ ಇಲಾಖೆ ವಶದಲ್ಲಿರುವ ಮತ್ತು ಸರ್ಕಾರಿ ಗೋಮಾಳವೆಂದು ಪಹಣಿಯಲ್ಲಿ ನಮೂದಾಗಿದ್ದರೂ ಎಚ್‌ಆರ್‌ಪಿ ಯೋಜನೆ ಅಡಿಯಲ್ಲಿ ಭೂಮಿ ಪಡೆದ 226 ಪ್ರಕರಣ ಹಾಗೂ ಪೂರ್ಣ ದಾಖಲಾತಿ ಪಡೆಯದೇ ಬೇನಾಮಿಯಾಗಿ 56 ಜನರಿಗೆ ಅಧಿಕೃತ ಜ್ಞಾಪನಾ ಪತ್ರಗಳಿಗೆ ಅನಧಿಕೃತವಾಗಿ ಜಮೀನನ್ನು ಮಂಜೂರಾತಿ ಮಾಡಿರು
ವುದು ತನಿಖೆಯಿಂದ ದೃಢಪಟ್ಟಿದ್ದು, ಇವುಗಳ ಮಂಜೂರಾತಿಯನ್ನೂ ರದ್ದುಗೊಳಿಸಲಾಗಿದೆ.

‘ಸಿಇಎನ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ಅವರ ತನಿಖಾ ವರದಿ, ರಾಜ್ಯ ಪುನರ್‌ವಸತಿ ಮತ್ತು ಪುನರ್‌ ನಿರ್ಮಾಣ ಆಯುಕ್ತ ಮಹಮ್ಮದ್‌ ಮೋಸಿನ್‌‌ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಂಡಿದ್ದು, ಪ್ರತಿಯೊಬ್ಬರಿಗೂ ನೋಟಿಸ್‌ ನೀಡಲಾಗಿದೆ’ ಎಂದು ಹೇಮಾವತಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT