ಸೋಮವಾರ, ಅಕ್ಟೋಬರ್ 26, 2020
24 °C
ಭದ್ರಾ ಜಲಾಶಯದಿಂದ ನೀರು ಹೊರಕ್ಕೆ * ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದ ಸಂತ್ರಸ್ತರು

ಉಡುಪಿ: ನೆರೆ ಇಳಿದರೂ ದೂರವಾಗದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾಮಳೆಗೆ ತತ್ತರಿಸಿದ್ದ ಉಡುಪಿ ನಿಧಾನವಾಗಿ ಚೇತರಿಸಿಕೊಳ್ಳು ತ್ತಿದೆ. ಮಳೆಯ ಪ್ರಮಾಣ ಕೊಂಚ ತಗ್ಗಿದ್ದು, ನೆರೆಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಆದರೆ, ಜನರಲ್ಲಿ ಆತಂಕ ಇನ್ನೂ ದೂರವಾಗಿಲ್ಲ.

ಕೃಷ್ಣಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂಬಿದ್ದ ಮಳೆ ನೀರು ಕಡಿಮೆಯಾಗಿದೆ.

ಉಡುಪಿ ತಾಲ್ಲೂಕಿನ ಬೈಲಕೆರೆ, ಮಠದಬೆಟ್ಟು, ಕಲ್ಸಂಕ, ಬನ್ನಂಜೆ, ಮೂಡನಿಡಂಬೂರು, ಅಲೆವೂರು, ಕೊರಂಗ್ರಪಾಡಿ, ಉದ್ಯಾವರ, ಮಣಿಪುರ ಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.

ಕಾಳಜಿ ಕೇಂದ್ರ: ಜಿಲ್ಲಾಡಳಿತ 7 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, 137 ಜನರಿಗೆ ವಸತಿ, ಊಟದ ವ್ಯವಸ್ಥೆ ಮಾಡಿದೆ. ಸುಮಾರು 2,000ಕ್ಕೂ ಹೆಚ್ಚು ಸಂತ್ರಸ್ತರು ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕೃಷ್ಣಮಠದಿಂದ ಸೋಮವಾರ ಮಠದ ಸುತ್ತಲಿನ ಪರಿಸರದ 400 ಜನರಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದೇ 22ರಂದು ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್‌ ಅಲರ್ಟ್‌ ಘೋಷಿಸಿರುವುದರಿಂದ ನಾಗರಿಕರು ಪ್ರವಾಹ ಭೀತಿಯಲ್ಲಿದ್ದಾರೆ. ಸಮುದ್ರ ಪ್ರಕ್ಷುಬ್ಧ ಗೊಂಡಿದ್ದು, 45ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ನದಿ ಹರಿವು ಬದಲು: ಕಾಪು ಬೀಚ್‌ನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್‌ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ನೀರಿನ ಸಂಗಮ ಪ್ರದೇಶವಿದೆ.

ಭಾರೀ ಮಳೆಯಿಂದ ಭಾನುವಾರ ನದಿ ಹರಿವು ಬದಲಾಗಿರುವುದರಿಂದ ಪ್ರವಾಸಿಗರು ಅಲ್ಲಿಗೆ ತೆರಳಲು ಆಗುತ್ತಿಲ್ಲ.

38 ವರ್ಷಗಳ ನಂತರ ಮಹಾ ಮಳೆ: 1982ರಲ್ಲಿ ಉಡುಪಿಯಲ್ಲಿ ಮಹಾಮಳೆ ಸುರಿದಿತ್ತು. ಮಳೆ ಅನಾಹುತದಿಂದ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 200ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದವು. 38 ವರ್ಷಗಳ ಬಳಿಕ ಮತ್ತೆ ಮಹಾಮಳೆ ಸುರಿದಿದೆ. ಮಳೆಯ ಮುನ್ಸೂಚನೆ ಅರಿತು ತಗ್ಗು ಪ್ರದೇಶದಲ್ಲಿದ್ದವರು ಮನೆ ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದರಿಂದ ಹೆಚ್ಚಿನ ಅನಾಹುತಗಳು ಆಗಿಲ್ಲ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಸು ತಗ್ಗಿದೆ. ಜಿಲ್ಲೆಯ ವಿವಿಧೆಡೆ ಕಾಳಜಿ ಕೇಂದ್ರಗಳನ್ನು ತೆರೆಯ ಲಾಗಿದ್ದು, 50 ಮಂದಿಗೆ ಆಶ್ರಯ ನೀಡ ಲಾಗಿದೆ. ಮೂಲ್ಕಿ, ಹಳೆಯಂಗಡಿಯಲ್ಲಿ ನೆರೆ ಕಡಿಮೆಯಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಇಬ್ಬರು ಮೃತ ಪಟ್ಟಿದ್ದು, 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 20ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನೀರು ತುಂಬಿದ್ದ ಹೊಂಡದಲ್ಲಿ ಬಿದ್ದು ಮಧೂರು ಚೇನಕ್ಕೋಡಿನಲ್ಲಿ ಚಂದ್ರಶೇಖರ(37) ಹಾಗೂ ಚೆರ್ವತ್ತೂರು ಮಯ್ಯಚ್ಚಿಯಲ್ಲಿ ಸುಧಾಕರನ್‌(57) ಮೃತಪಟ್ಟಿದ್ದಾರೆ.

ಭದ್ರಾ ಜಲಾಶಯದಿಂದ ನೀರು ಹೊರಕ್ಕೆ: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಿಂದ ನೀರು ಹೊರ ಬಿಡಲಾಗಿದೆ. ಮುಂಜಾಗ್ರತೆಯಾಗಿ ಅಣೆಕಟ್ಟೆ ತಪ್ಪಲಿನ ಸೋಂಪುರದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು