ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ ಬಿಡಿ: ಕನ್ನಡ ಪುಸ್ತಕ ಕೊಡಿ

ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಸರ್ಕಾರಿ ಆದೇಶ
Last Updated 10 ಆಗಸ್ಟ್ 2021, 17:50 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆಗಳನ್ನು ನೀಡಬಾರದು. ಅದರ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ಈ ನಿರ್ದೇಶನವನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದರು. ‘ಇದು ಅನಗತ್ಯ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಈ ಸಂಪ್ರದಾಯ ಬೇಡ’ ಎಂದು ಹೇಳಿದರು. ಅದರ ಬೆನ್ನಲ್ಲೇ ಮುಖ್ಯಕಾರ್ಯದರ್ಶಿಯವರು ಆದೇಶ ಹೊರಡಿಸಿ, ಕಾಣಿಕೆಗಳ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸರ್ಕಾರ ರಚನೆ ಆದ ಬಳಿಕ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಪುಸ್ತಕ ಕೊಡುಗೆ ಅಭಿಯಾನಕ್ಕೆ ಮೇಲ್ಪಂಕ್ತಿ ಹಾಕಿದ್ದರು. ತಮ್ಮನ್ನು ಭೇಟಿಯಾಗಲು ಮತ್ತು ಅಭಿನಂದಿಸಲು ಬರುವವರು ಹಾರ, ತುರಾಯಿ ಮತ್ತು ನೆನಪಿನ ಕಾಣಿಕೆ ತರುವುದು ಬೇಡ. ಏನಾದರೂ ಕೊಡಲೇಬೇಕು ಎಂದಿದ್ದರೆ ಒಂದು ಕನ್ನಡ ಪುಸ್ತಕವನ್ನು ಖರೀದಿಸಿ ತಂದು ಕೊಡಿ ಎಂದು ಮನವಿ ಮಾಡಿದ್ದರು.

ಈ ಮನವಿಯ ಬಳಿಕ ಸುಮಾರು ಎರಡು ಸಾವಿರ ಅತ್ಯುತ್ತಮ ಪುಸ್ತಕಗಳು ಬಂದಿವೆ. ಅವುಗಳನ್ನು ಕಾರ್ಕಳ ಗ್ರಂಥಾಲಯ, ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಶಾಲಾ ಗ್ರಂಥಾಲಯಗಳಿಗೆ ವಿತರಿಸಲು ವ್ಯವಸ್ಥೆ ಮಾಡಲಾಗುವುದು. ಇದರಿಂದ ಜ್ಞಾನ ದಾಹಿಗಳಿಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT