ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಉಳಿವಿಗೆ ಕಾನೂನು ಹೋರಾಟ ಅಗತ್ಯ: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌

ದಲಿತ, ಹಿಂದುಳಿದ ಮತ್ತು ಪ್ರಗತಿಪರರ ಸಮಾಲೋಚನಾ ಸಭೆಯಲ್ಲಿ ಪ್ರೊ. ರವಿವರ್ಮ ಕುಮಾರ್‌ ಸಲಹೆ
Last Updated 14 ಮಾರ್ಚ್ 2021, 16:56 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ರೀತಿಯಿಂದಲೂ ಪ್ರಬಲವಾಗಿರುವ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗದ ಪಟ್ಟಿಯಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಿ ಜನರ ಹೋರಾಟದ ಜತೆಗೆ ಕಾನೂನು ಹೋರಾಟವನ್ನೂ ಆರಂಭಿಸಬೇಕಿದೆ ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಸಲಹೆ ನೀಡಿದರು.

‘ದಿಕ್ಕು ತಪ್ಪಿದ ಮೀಸಲಾತಿ ಹೋರಾಟ’ ಎಂಬ ವಿಷಯ ಕುರಿತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ದಲಿತ, ಹಿಂದುಳಿದ ಮತ್ತು ಪ್ರಗತಿಪರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಬಲಾಢ್ಯರು ಮೀಸಲಾತಿಗಾಗಿ ನಡೆಸುತ್ತಿ ರುವ ಹೋರಾಟಕ್ಕೆ ಪ್ರತಿಯಾಗಿ ಹೋರಾಟ ಆರಂಭಿಸಲೇಬೇಕಿದೆ’ ಎಂದರು.

ಲಿಂಗಾಯತ ಸಮುದಾಯವು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಯಲ್ಲಿ ಮೀಸಲಾತಿಗೆ ಬೇಡಿಕೆ ಇಟ್ಟಿದೆ. ಇನ್ನೂ ಕೆಲವು ಸಮುದಾಯಗಳು ಇದೇ ಮಾದರಿಯ ಬೇಡಿಕೆ ಇಟ್ಟಿವೆ. ಇದು ಕೇವಲ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳಿಗೆ ಸೀಮಿತವಾಗಿ ಪರಿಣಾಮ ಬೀರು
ವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೂ ಇದರಿಂದ ತೊಂದರೆ ಆಗಲಿದೆ ಎಂದು ಹೇಳಿದರು.

‘1962ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನೇತೃತ್ವದ ಸರ್ಕಾರ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಲು ಹಿಂದುಳಿದ ವರ್ಗಗಳ ಆಯೋಗದ ವರದಿಯ ಶಿಫಾರಸುಗಳನ್ನೇ ತಿರುಚಿತ್ತು. ಡಿ. ದೇವರಾಜ ಅರಸು ಅವರ ಸರ್ಕಾರ ಮುಖ್ಯಮಂತ್ರಿ ಹುದ್ದೆಗೇರುವವರೆಗೂ ಹಿಂದುಳಿದ ವರ್ಗಗಳ ಜನರು ಮೀಸಲಾತಿಯಿಂದ ವಂಚಿತರಾಗಿದ್ದರು. ಈಗಲೂ ಅದೇ ರೀತಿ ವಂಚಿಸುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಆದೇಶ ಮಾಡಿಸುವುದಕ್ಕೆ ಯತ್ನಿಸಲಾಗುತ್ತಿದೆ’ ಎಂದು ರವಿವರ್ಮ ಕುಮಾರ್‌ ದೂರಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ‘ಮಂಡಲ್‌ ಆಯೋಗದ ವರದಿಯನ್ನು ವಿರೋಧಿಸಿದ್ದ ಶಕ್ತಿಗಳೇ ಈಗ ಮೀಸಲಾತಿ ಬೇಡಿಕೆಯ ಹೋರಾಟದ ಹಿಂದಿವೆ. ಹಿಂದುಳಿದ ಸಮುದಾಯಗಳ ಪಟ್ಟಿಯಲ್ಲಿ ಬಲಿಷ್ಠ ಸಮುದಾಯಗಳ ಸೇರ್ಪಡೆಯನ್ನು ಒಕ್ಕೊರಲಿನಿಂದ ವಿರೋಧಿಸಬೇಕಾದ ತುರ್ತು ಇದೆ’ ಎಂದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಪ್ರೊ.ಎನ್. ನರಸಿಂಹಯ್ಯ, ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ, ಸಾಮಾಜಿಕ ಕಳಕಳಿ ವೇದಿಕೆ ಸಂಸ್ಥಾಪಕ ಡಾ. ರಾಜಾ ನಾಯ್ಕ್, ಲೇಖಕ ವಿಕಾಸ್ ಆರ್‌. ಮೌರ್ಯ ವಿಚಾರ ಮಂಡಿಸಿದರು.

ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಪ್ರಮುಖರಾದ ಮಾವಳ್ಳಿ ಶಂಕರ್‌, ವಿ. ನಾಗರಾಜ್, ಲಕ್ಷ್ಮೀನಾರಾಯಣ ನಾಗವಾರ, ಎನ್‌. ಮುನಿಸ್ವಾಮಿ, ಎನ್‌. ವೆಂಕಟೇಶ್‌, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಮೇಯರ್‌ ರಾಮಚಂದ್ರಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದಾದ್ಯಂತ ಹೋರಾಟಕ್ಕೆ ನಿರ್ಧಾರ

ಈಗ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳು ಜಂಟಿಯಾಗಿ ರಾಜ್ಯದಾದ್ಯಂತ ಐಕ್ಯ ಹೋರಾಟ ರೂಪಿಸಬೇಕೆಂಬ ನಿರ್ಣಯವನ್ನು ಭಾನುವಾರದ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಗಿದೆ.

‘ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ, ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್ ಆಯೋಗಗಳ ವರದಿಯನ್ನು ಬಿಡುಗಡೆ ಮಾಡಬೇಕು. ನ್ಯಾಯಾಂಗದಲ್ಲೂ ಉನ್ನತ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು. ಮೇಲ್ಜಾತಿಗಳಿಗೆ ನೀಡಿರುವ ಶೇಕಡ 10ರ ಮೀಸಲಾತಿಯನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸುವ ನಿರ್ಣಯಗಳನ್ನೂ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT