ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಕಡೂರಿನ ಗುಣಸಾಗರ ಬಳಿ ರೈಲು ಹಳಿಯಲ್ಲಿ ಮೃತದೇಹ ಪತ್ತೆ
Last Updated 29 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಚಿಕ್ಕಮಗಳೂರು: ವಿಧಾನಪರಿಷತ್‌ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ (65) ಕಡೂರು ತಾಲ್ಲೂಕಿನ ಗುಣಸಾಗರ ಬಳಿ ಸೋಮವಾರ ರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರಪನಹಳ್ಳಿ ಬಳಿಯ ಅಯ್ಯನಕೆರೆ ಸಮೀಪದ ‘ಎವರ್‌ ಗ್ರೀನ್‌’ ತೋಟದ ಮನೆಯಿಂದ ಸೋಮವಾರ ಸಂಜೆ ಕಾರಿನಲ್ಲಿ ತೆರಳಿದ್ದ ಧರ್ಮೇಗೌಡ, ರಾತ್ರಿಯಾದರೂ ವಾಪಸಾಗಿರಲಿಲ್ಲ. ಕಳವಳಗೊಂಡ ಕುಟುಂಬದವರು ಅವರಿಗಾಗಿ ಹುಡುಕಾಡಿದ್ದಾರೆ. ಗುಣಸಾಗರ ಸಮೀಪ ರೈಲು ಹಳಿ ಮಾರ್ಗದಲ್ಲಿ ಛಿದ್ರಗೊಂಡಿದ್ದ ಸ್ಥಿತಿಯಲ್ಲಿದ್ದ ಮೃತದೇಹ ತಡರಾತ್ರಿ ಪತ್ತೆಯಾಗಿದೆ.

ಧರ್ಮೇಗೌಡ ಅವರು ತೋಟದ ಮನೆಯಿಂದ ಸಂಜೆ 4.30ರ ಹೊತ್ತಿಗೆ ಕಾರನ್ನು ಸ್ವತಃ ಚಲಾಯಿಸಿಕೊಂಡು ತೆರಳಿದ್ದಾರೆ. ಗೇಟ್‌ನಲ್ಲಿ ಚಾಲಕ ಧರ್ಮರಾಜ ಅರಸ್‌ ಅವರನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ.

ಸಖರಾಯಪಟ್ಟಣದಲ್ಲಿ ಪೆಟ್ರೋಲ್‌ ಹಾಕಿಸಿಕೊಂಡ ನಂತರ, ಅಲ್ಲಿಂದ ಧರ್ಮರಾಜ ಅವರು ಕಾರು ಚಾಲನೆ ಮಾಡಿದ್ದಾರೆ.

‘ಸಖರಾಯಪಟ್ಟಣದಿಂದ ಸೀದಾ ಗುಣಸಾಗರದ ರೈಲು ಹಳಿ ಬಳಿಗೆ ಹೋದೆವು. ಅಲ್ಲಿಂದ ಬಾಣಾವರಕ್ಕೆ ಹೋಗಿ ಕುಡಿಯುವ ನೀರಿನ ಬಾಟಲಿ ತೆಗೆದುಕೊಂಡು 6 ಗಂಟೆ ಹೊತ್ತಿಗೆ ವಾಪಸಾದೆವು. ಕಾರಿನಲ್ಲಿ ಧರ್ಮೇಗೌಡ್ರು ಯಾರಿಗೋ ಫೋನ್‌ ಮಾಡಿ ರೈಲಿನ ಸಮಯದ ಬಗ್ಗೆ ವಿಚಾರಿಸಿದರು’ ಎಂದು ಚಾಲಕ ಧರ್ಮರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧರ್ಮೇಗೌಡ ಅವರು ಕಾರಿನಿಂದ ಇಳಿದು, ಒಬ್ಬರೊಂದಿಗೆ ಮಾತನಾಡಬೇಕಿದೆ, ಮುಂದೆ ಹೋಗಿ ಕಾರು ನಿಲ್ಲಿಸಿಕೊಂಡಿರು, ಬರುತ್ತೇನೆ ಎಂದು ನನಗೆ ತಿಳಿಸಿದರು. ಕಾಯುತ್ತಾ ನಿಂತಿದ್ದೆ. ಎರಡು–ಮೂರು ರೈಲುಗಳು ಸಂಚರಿಸಿದವು. ಅಷ್ಟರಲ್ಲಿ ಫೋನ್‌ ಮಾಡಿದ ಅವರ ಪುತ್ರ ಸೋನಲ್‌ ಸ್ಥಳಕ್ಕೆ ಬಂದರು. ನಂತರ ಹುಡುಕಿದಾಗ ಶವ ಸಿಕ್ಕಿತು’ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಅರಸೀಕರೆ ರೈಲ್ವೆ ಪೊಲೀಸ್‌ ಠಾಣೆ ಎಎಸ್‌ಐ ದೇವರಾಜ್‌, ಶಾಸಕ ಸಿ.ಟಿ.ರವಿ ಅವರು ಘಟನಾ ಸ್ಥಳಕ್ಕೆ ತೆರಳಿದ್ದರು. ಸ್ಥಳದಲ್ಲಿ ‘ಡೆತ್‌ ನೋಟ್‌’ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆಯ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಮರಣೋತ್ತರ ಪರೀಕ್ಷೆ: ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಸಖರಾಯಪಟ್ಟಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸರಪನಹಳ್ಳಿ ಬಳಿಯ ತೋಟದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

‘ಪರಿಷತ್‌ ಗಲಾಟೆ ವಿಚಾರಕ್ಕೆ ಮನನೊಂದಿದ್ದ’: ‘ವಿಧಾನ ಪರಿಷತ್ತಿನಲ್ಲಿ ಈಚೆಗೆ ನಡೆದ ಗಲಾಟೆ, ಎಳೆದಾಟ ಘಟನೆಯಿಂದ ಅವಮಾನವಾಗಿದೆ ಎಂದು ನೊಂದುಕೊಂಡಿದ್ದ. ‘ಡೆತ್‌ ನೋಟ್‌’ನಲ್ಲೂ ಅದನ್ನು ಉಲ್ಲೇಖಿಸಿದ್ದಾನೆ. ವಾರದಿಂದ ಸಮಾಧಾನ ಹೇಳಿದ್ದೆ. ದುಡುಕಿ ಇಂಥ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅಂದುಕೊಂಡಿರಲಿಲ್ಲ’ ಎಂದು ಸಹೋದರ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ದುಃಖಿಸಿದರು.

ತೋಟದ ಮನೆಯಲ್ಲಿ ಮಾತನಾಡಿದ ಅವರು, ‘ಸೋಮವಾರ (ಇದೇ 28ರಂದು) ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಇಬ್ಬರೂ ಪಾಲ್ಗೊಂಡಿದ್ದೆವು. ಅಣ್ಣ ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಬೇಜಾರಾಗಿದ್ದರೆ ರಾಜೀನಾಮೆ ಬಿಸಾಡಿ ಬರೋಣ, ಮಂಗಳವಾರ (ಇದೇ 29) ಬೆಂಗಳೂರಿಗೆ ಹೋಗೋಣ ಎಂದೂ ಹೇಳಿದ್ದೆ’ ಎಂದು ಹೇಳಿಕೊಂಡು ಗಳಗಳನೆ ಅತ್ತರು.

ಜನನ: 16.12.1955 ನಿಧನ: 29.12.2020
ಧರ್ಮೇಗೌಡ ಅವರು ಮಾಜಿ ಶಾಸಕ ಎಸ್‌.ಆರ್‌.ಲಕ್ಷ್ಮಯ್ಯ ಮತ್ತು ಕೃಷ್ಣಮ್ಮ ದಂಪತಿ ಪುತ್ರ. ಅವರಿಗೆ ಪತ್ನಿ ಮಮತಾ, ಪುತ್ರ ಎಸ್‌.ಡಿ. ಸೋನಲ್‌, ಪುತ್ರಿ ಎಸ್‌.ಡಿ. ಸಲೋನಿ ಇದ್ದಾರೆ.

ಸಖರಾಯಪಟ್ಟಣದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ವಿದ್ಯಾಭ್ಯಾಸ ಮಾಡಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ.

‘ಡೆತ್‌ ನೋಟ್‌ ಪತ್ತೆ’
‘ಡೆತ್‌ ನೋಟ್‌ ಸಿಕ್ಕಿದೆ. ಅವರ ‘ಲೆಟರ್‌ ಹೆಡ್‌’ನಲ್ಲಿದೆ. ವಿಧಾನಸೌಧದ ಘಟನೆ ಬೇಸರ ತರಿಸಿದೆ ಎಂಬ ಉಲ್ಲೇಖ ಇದೆ. ಯಾವ್ಯಾವ ಬ್ಯಾಂಕಿನಲ್ಲಿ ಎಷ್ಟು ಹಣ ಇದೆ, ಪುತ್ರ, ಪುತ್ರಿಗೆ ಯಾವ್ಯಾವ ಆಸ್ತಿ ಎಂಬ ವಿಚಾರಗಳು ಅದರಲ್ಲಿವೆ. ತನ್ನನ್ನು ಕ್ಷಮಿಸುವಂತೆ ಕುಟುಂಬದವರನ್ನು ಕೋರಿದ್ದಾರೆ’ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

‘ಶತಾಬ್ದಿ’ ಸಮಯ ವಿಚಾರಿಸಿದ್ದರು
ಧರ್ಮೇಗೌಡರು ಸೋಮವಾರ ಜಿಲ್ಲಾ ಯುವಜನೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಂತರ ಬೀರೂರಿನ ಹೇಮಂತ್‌ ಎಂಬುವರಿಗೆ ಐದಾರು ಬಾರಿ ಕರೆ ಮಾಡಿ ಬೆಂಗಳೂರು ಕಡೆಗೆ ಎಷ್ಟೆಷ್ಟು ಹೊತ್ತಿಗೆ ರೈಲುಗಳಿವೆ ಎಂದು ವಿಚಾರಿಸಿದ್ದರು.

‘ಪದೇ ಪದೇ ಕರೆ ಮಾಡಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ ಎಷ್ಟೊತ್ತಿಗೆ ಬೀರೂರು ಬಿಡುತ್ತದೆ ಎಂದೂ ಕೇಳಿದ್ದರು. ಆಟೊ ಚಾಲಕರೊಬ್ಬರನ್ನು ವಿಚಾರಿಸಿ, ಆ ರೈಲು ಸಂಜೆ 6.17ಕ್ಕೆಬೀರೂರು ನಿಲ್ದಾಣ ಬಿಟ್ಟಿದೆ ಎಂದು ಧರ್ಮೇಗೌಡ ಅವರಿಗೆ ತಿಳಿಸಿದ್ದೆ’ ಎಂದು ಹೇಮಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಖಿನ್ನತೆ ಇತ್ತಾ?: ಧರ್ಮೇಗೌಡ ಅವರು ನಾಲ್ಕು ವರ್ಷಗಳ ಹಿಂದೆ ಸ್ವಲ್ಪ ಖಿನ್ನರಾಗಿದ್ದರು. ಅವರಿಗೆ ಶಿವಮೊಗ್ಗದಲ್ಲಿ ಕೌನ್ಸೆಲಿಂಗ್‌ ಮಾಡಿಸಲಾಗಿತ್ತು ಎಂದು ಆಪ್ತರೊಬ್ಬರು ತಿಳಿಸಿದ್ದಾರೆ.

ಚಿಕ್ಕಮಗಳೂರು ಕಡೂರು ತಾಲ್ಲೂಕು ಸಖರಾಯಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಎಸ್‌.ಎಲ್‌.ಧರ್ಮೇಗೌಡ ಅವರ ಪಾರ್ಥಿವ ಶರೀರದ ಮುಂದೆ ಪುತ್ರ ಸೋನಲ್‌, ಪುತ್ರಿ ಸಲೋನಿ ಮತ್ತು ಸಹೋದರ ಎಸ್‌.ಎಲ್‌.ಭೋಜೇಗೌಡ ಅವರು ರೋದಿಸಿದರು. –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT