ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹ: ಜೆಡಿಎಸ್‌, ಬಿಜೆಪಿ ಸದಸ್ಯರಿಂದ ಬೇಡಿಕೆ

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌, ಬಿಜೆಪಿ ಸದಸ್ಯರಿಂದ ಬೇಡಿಕೆ
Last Updated 5 ಮಾರ್ಚ್ 2021, 16:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ನೌಕರರಿಗೂ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಪುನಃ ಜಾರಿಗೆ ತರಬೇಕು ಎಂದು ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರು ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಬಿಜೆಪಿಯ ಪುಟ್ಟಣ್ಣ ಮತ್ತು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಮಂಡಿಸಿದ ಗಮನ ಸಳೆಯುವ ಸೂಚನೆ ಕುರಿತು ಮಾತನಾಡಿದ ಎರಡೂ ಪಕ್ಷಗಳ ಸದಸ್ಯರು, 2006ರಿಂದ ಈಚೆಗೆ ನೇಮಕಗೊಂಡಿರುವ ಸರ್ಕಾರಿ ನೌಕರರನ್ನು ಒಪಿಎಸ್‌ನಿಂದ ಹೊರಗಿಟ್ಟು ಹೊಸ ಪಿಂಚಣಿ ಯೋಜನೆಯಡಿ (ಎನ್‌ಪಿಎಸ್‌) ತಂದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶ್ರೀಕಂಠೇಗೌಡ ಮಾತನಾಡಿ, ‘ಎನ್‌ಪಿಎಸ್‌ ಜಾರಿಯಾದ ಬಳಿಕ ಇಡೀ ಪಿಂಚಣಿ ವ್ಯವಸ್ಥೆಯೇ ಗೊಂದಲಮಯವಾಗಿದೆ. ಸರ್ಕಾರಿ ನೌಕರರು ನಿವೃತ್ತಿಯಾದಾಗ ಪಿಂಚಣಿ ಭದ್ರತೆಯನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದಾರೆ. ಅನುದಾನಿತ ಮತ್ತು ಅರೆ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಯಾವುದೇ ವಿಧದ ಪಿಂಚಣಿ ದೊರಕುತ್ತಿಲ್ಲ’ ಎಂದರು.

ಅವರು ಮನುಷ್ಯರಲ್ಲವೆ?: ‘2006ರ ನಂತರ ನೇಮಕಾತಿ ಹೊಂದಿದ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ಕಡ್ಡಾಯ ಮಾಡಲಾಗಿದೆ. 2006ರ ನಂತರ ಆಯ್ಕೆಯಾದ ಶಾಸಕರು, ಸಂಸದರು, ಸಚಿವರಿಗೆ ಒಪಿಎಸ್‌ ನೀಡಲಾಗುತ್ತಿದೆ. ಸರ್ಕಾರಿ ನೌಕರರು ಮನುಷ್ಯರಲ್ಲವೆ? ಎನ್‌ಪಿಎಸ್‌ ಒಳ್ಳೆಯ ಯೋಜನೆಯೇ ಆಗಿದ್ದರೆ ಶಾಸಕರು, ಸಂಸದರು, ಸಚಿವರಿಗೂ ಅದನ್ನೇ ನೀಡಬೇಕು’ ಎಂದು ಬಿಜೆಪಿಯ ಆಯನೂರು ಮಂಜುನಾಥ್‌ ಆಗ್ರಹಿಸಿದರು.

ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ‘ಎನ್‌ಪಿಎಸ್‌ ಎಂದರೆ ‘ನೋ ಪೆನ್ಷನ್‌ ಸ್ಕೀಂ’ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ತಿಂಗಳಿಗೆ ₹ 84,000 ವೇತನ ಪಡೆಯುತ್ತಿದ್ದ ನೌಕರರೊಬ್ಬರು ಎನ್‌ಪಿಎಸ್ ಆಯ್ದುಕೊಂಡಿದ್ದರು. ನಿವೃತ್ತರಾದ ಬಳಿಕ ಸರಿಯಾಗಿ ಪಿಂಚಣಿಯೇ ಬರುತ್ತಿಲ್ಲ. ತಿಂಗಳಿಗೆ ₹ 10,000 ವೇತನ ಇರುವ ಕೆಲಸ ಕೊಡಿಸುವಂತೆ ನನ್ನ ಬಳಿ ಬಂದಿದ್ದರು’ ಎಂದು ಹೇಳಿದರು.

ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ, ಬಿಜೆಪಿಯ ಪ್ರೊ. ಎಸ್‌.ವಿ. ಸಂಕನೂರ, ತಳವಾರ ಸಾಬಣ್ಣ, ಹಣಮಂತ ನಿರಾಣಿ, ಶಶೀಲ್‌ ಜಿ. ನಮೋಶಿ ಎನ್‌ಪಿಎಸ್‌ ವಿರೋಧಿಸಿದರು. ಎಲ್ಲ ಸರ್ಕಾರಿ ನೌಕರರಿಗೂ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಉತ್ತರ ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂಬ ಬೇಡಿಕೆ ಕುರಿತು ಪರಿಶೀಲನೆಗೆ 2018ರಲ್ಲೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ನೇಮಿಸಲಾಗಿತ್ತು. ಈವರೆಗೂ ವರದಿ ಬಂದಿಲ್ಲ. ಈಗ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಿಗದಿಗೊಳಿಸಲು ಪ್ರಯತ್ನಿಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT