ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಅಕ್ರಮ: ತನಿಖೆಗೆ ವಿಧಾನಮಂಡಲದ ಜಂಟಿ ಸದನ ಸಮಿತಿ ಶಿಫಾರಸು

ಟೆಂಡರ್‌ ಇಲ್ಲದೇ ಅನುಷ್ಠಾನ lಒಂದು ಘಟಕಕ್ಕೆ ₹45 ಲಕ್ಷದವರೆಗೆ ವೆಚ್ಚ
Last Updated 20 ಫೆಬ್ರುವರಿ 2023, 23:12 IST
ಅಕ್ಷರ ಗಾತ್ರ

ಬೆಂಗಳೂರು: 2013–14ರಿಂದ 2020–21ರ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಮೂಲಕ ನಡೆದಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿನ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುವಂತೆ ವಿಧಾನಮಂಡಲದ ಜಂಟಿ ಸದನ ಸಮಿತಿ ಶಿಫಾರಸು ಮಾಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ಘಟಕಗಳ ಸ್ಥಾಪನೆಗೆ ₹ 5 ಲಕ್ಷದಷ್ಟು ವೆಚ್ಚ ಮಾಡಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 30 ಲಕ್ಷದಷ್ಟು ವೆಚ್ಚ ಮಾಡಲಾಗಿದೆ. ಸರಾಸರಿ ವೆಚ್ಚ ₹ 7.48 ಲಕ್ಷದಷ್ಟಿದ್ದರೆ ಗರಿಷ್ಠ 45 ಲಕ್ಷದವರೆಗೂ ವೆಚ್ಚ ಮಾಡಲಾಗಿದೆ. 12,601 ಘಟಕಗಳ ಅಳವಡಿಕೆಯಲ್ಲಿ ಸರಾಸರಿಗಿಂತಲೂ ಹೆಚ್ಚಿನ ವೆಚ್ಚ ಮಾಡಲಾಗಿದೆ. ಇದನ್ನು ಗಮನಿಸಿದರೆ ಅವ್ಯವಹಾರ ನಡೆದಿರುವಂತೆ ಕಂಡುಬರುತ್ತಿದೆ ಎಂಬ ಉಲ್ಲೇಖ ವರದಿಯಲ್ಲಿದೆ.

ಅಭಯ ಪಾಟೀಲ್‌ ನೇತೃತ್ವದ ಜಂಟಿ ಸದನ ಸಮಿತಿಯ ವರದಿಯನ್ನು ಸೋಮವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾ
ಯಿತು. ಟೆಂಡರ್‌ ಪ್ರಕ್ರಿಯೆ
ಯಲ್ಲಿ ಅವ್ಯವಹಾರ, ಹೆಚ್ಚುವರಿ ವೆಚ್ಚ ಮಾಡಿರುವುದು, ನೀರಿನ ಗುಣಮಟ್ಟದ ಕುರಿತು ಪ್ರಯೋಗಾಲಯದ ವರದಿ ಪಡೆಯದೇ ಘಟಕಗಳನ್ನು ಅಳವಡಿಸಿರುವುದು, ಹಲವೆಡೆ ಘಟಕಗಳನ್ನು ಸ್ಥಾಪಿಸಿದ ಬಳಿಕ ನಿರ್ವಹಣೆಗೆ ಕ್ರಮ ಕೈಗೊಳ್ಳದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಯೋಜನಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ, ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌) ಹಾಗೂ ರಾಜ್ಯ ಖನಿಜ ನಿಗಮಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಒಟ್ಟು 26,569 ಘಟಕಗಳನ್ನು ಅಳವಡಿಸಲಾಗಿತ್ತು.

ಅವುಗಳಲ್ಲಿ 24,650 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 569 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಂಶ ವರದಿಯಲ್ಲಿದೆ.

25,219 ಘಟಕಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಮಾತ್ರ ವಿವಿಧ ಇಲಾಖೆಗಳು ಸಮಿತಿಯ ಜತೆ ಹಂಚಿಕೊಂಡಿವೆ. ಹಲವು ಪ್ರಕರಣಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸದೇ, ಯಾವುದೇ ನಿರ್ದಿಷ್ಟ ಮಾನದಂಡ ಅನುಸರಿಸದೇ ಹಾಗೂ ಪ್ರಯೋಗಾಲಯದ ವರದಿ
ಪಡೆಯದೇ ಘಟಕಗಳನ್ನು ಅಳವಡಿಸಿರುವುದು ಕಂಡುಬಂದಿದೆ ಎಂದು ಸಮಿತಿ ಹೇಳಿದೆ.

7,893 ಘಟಕಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾನದಂಡಗಳ ಉಲ್ಲಂಘನೆ ಪತ್ತೆಯಾಗಿದೆ. ಅವುಗಳಲ್ಲಿ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯ 2,722 ಘಟಕಗಳು ಮತ್ತು ಯೋಜನಾ ಇಲಾಖೆ ವ್ಯಾಪ್ತಿಯ 2,458 ಘಟಕಗಳು ಇವೆ ಎಂದು ಸಮಿತಿ ತಿಳಿಸಿದೆ.

‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ (ಕೆಆರ್‌ಐಡಿಎಲ್‌) ನಿಗಮವು ಬೇರೆ ಬೇರೆಯವರಿಂದ ಬಿಡಿ ಭಾಗಗಳನ್ನು ಖರೀದಿಸಿ ಘಟಕಗಳನ್ನು ಅಳವಡಿಸಿತ್ತು. ನಂತರದಲ್ಲಿ ನಿರ್ವಹಣೆಗೆ ಗಮನಹರಿಸಿರಲಿಲ್ಲ. ವಿದ್ಯುನ್ಮಾನ ಸೇವೆಗಳನ್ನು ಒದಗಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್‌ 4–ಜಿ ಅಡಿಯಲ್ಲಿ ರಾಜ್ಯ ಸರ್ಕಾರದ ನೀಡಿದ್ದ ವಿನಾಯಿತಿಯನ್ನು ಕಿಯೋನಿಕ್ಸ್‌ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ದುರ್ಬಳಕೆ ಮಾಡಿಕೊಂಡಿದೆ’ ಎಂಬುದು ಸದನ ಸಮಿತಿ ತನಿಖೆಯಲ್ಲಿ ಪತ್ತೆಯಾಗಿದೆ.

11 ಘಟಕ ಕೆಡವಿದರು!

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿದ್ದ 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಂತರದಲ್ಲಿ ರಸ್ತೆ ವಿಸ್ತರಣೆಗಾಗಿ ಕೆಡವಿ ಹಾಕಿರುವುದನ್ನು ಜಂಟಿ ಸದನ ಸಮಿತಿ ಪತ್ತೆಮಾಡಿದೆ.

ತೆರಿಗೆದಾರರ ಹಣ ವ್ಯರ್ಥವಾಗಲು ಕಾರಣರಾದವರ ವಿರುದ್ಧ ಕ್ರಮ ಜರುಗಿಸಿ, ಅವರಿಂದಲೇ ನಷ್ಟ ವಸೂಲಿ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT