ಕನ್ನಡ ಬೆಳೆಸೋಣ, ಉಳಿಸೋಣ, ಗೌರವಿಸೋಣ: ರಾಜ್ಯಪಾಲ ಥಾವರಚಂದ್ ಗೆಹಲೋತ್

ಬೆಂಗಳೂರು: 'ರಾಜ್ಯದಲ್ಲಿ ಕನ್ನಡದಲ್ಲಿಯೇ ಮಾತನಾಡೋಣ. ಆ ಮೂಲಕ, ಕನ್ನಡ ಬೆಳೆಸೋಣ, ಉಳಿಸೋಣ ಮತ್ತು ಗೌರವಿಸೋಣ' ಎಂದು 'ಕನ್ನಡ'ದಲ್ಲಿಯೇ ಹೇಳುವ ಮೂಲಕ 'ಕನ್ನಡಕ್ಕಾಗಿ ನಾನು’ ವಿಶೇಷ ಅಭಿಯಾನಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಭಾನುವಾರ ಚಾಲನೆ ನೀಡಿದರು.
66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವಿಶೇಷ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.
'ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ. ತಪ್ಪಿದ್ದರೆ ಕ್ಷಮಿಸಿ' ಎಂದು ಮಾತು ಆರಂಭಿಸಿದ ಅವರು, 'ಎಲ್ಲರಿಗೂ ಶುಭ ಸಂಜೆಯ ನಮಸ್ಕಾರಗಳು. ಕನ್ನಡ ಬೆಳೆಸಲು ಎಲ್ಲರೂ ಕೈಜೋಡಿಸೋಣ' ಎಂದೂ ಕರೆ ನೀಡಿದರು.
ಅದಕ್ಕೂ ಮೊದಲು ಅವರು 'ʻಮಾತಾಡ್ ಮಾತಾಡ್ ಕನ್ನಡʼ ಎನ್ನುವ ಘೋಷವಾಕ್ಯದ ಲಾಂಛನ ಬಿಡುಗಡೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಕಾರ್ಯದರ್ಶಿ ಮಂಜುಳಾ ಇದ್ದರು.
ಬಳಿಕ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರಂಭದಲ್ಲಿ ನವದುರ್ಗೆಯರ ನೃತ್ಯ, ಯಕ್ಷಗಾನ ಪ್ರದರ್ಶಿಸಿದರು.
31ರಂದು ಕನ್ನಡ ಗೀತೆಗಳ ಸಾಮೂಹಿಕ ಗಾಯನ: ಕನ್ನಡ ಸಂಸ್ಕೃತಿ, ಉಳಿಸಿ ಬೆಳೆಸಲು ʻಮಾತಾಡ್ ಮಾತಾಡ್ ಕನ್ನಡʼ ಎನ್ನುವ ಘೊಷವಾಕ್ಯದೊಂದಿಗೆ ಆರಂಭವಾದ ಅಭಿಯಾನದ ಅಂಗವಾಗಿ ಇದೇ 31ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದಾದ್ಯಂತ ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ವಿಶೇಷ ಪ್ರಯತ್ನ ಮಾಡಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ಲಾಲ್ ಬಾಗ್‌ನಲ್ಲಿ ಭಾನುವಾರ ಬೆಳಿಗ್ಗೆ ʻಕನ್ನಡಕ್ಕಾಗಿ ನಾವುʼ ವಿಶೇಷ ಅಭಿಯಾನಕ್ಕಾಗಿ ರಚಿಸಲಾದ ‘ಮಾತಾಡ್ ಮಾತಾಡ್ ಕನ್ನಡ’ ಎನ್ನುವ ಕಿರು ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಗುಂಪು ಗುಂಪಾಗಿ, ಕಚೇರಿಗಳ ಮುಂಭಾಗ, ಕಾರ್ಖಾನೆಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ, ಗಡಿನಾಡು, ಹೊರನಾಡುಗಳಲ್ಲಿಯೂ ಕನ್ನಡದ ಗೀತೆಗಳನ್ನು ಹಾಡಬೇಕು’ ಎಂದು ಮನವಿ ಮಾಡಿದರು.
‘ಅಭಿಯಾನದ ಅಂಗವಾಗಿ 31ರವರೆಗೆ ನಾಡಿನಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಕುರಿತ ಹೆಮ್ಮೆ ಮೂಡಿಸಬೇಕು. ಮನೆ ಮನೆಗಳಲ್ಲಿ ಹಾಗೂ ಮನ ಮನಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ವಾತಾವರಣ ನಿರ್ಮಾಣ ಆಗಬೇಕಿದೆ. ಕನ್ನಡದಲ್ಲಿ ಸಹಿ ಮಾಡುವ ರೂಢಿ ಹೆಚ್ಚಾಗಬೇಕು. ಚರವಾಣಿಗಳಲ್ಲಿ ಕನ್ನಡ ಸಂದೇಶಗಳನ್ನು ಕಳಿಸುವ ಪದ್ಧತಿ ಶುರು ಆಗಬೇಕು. ಈ ಮೂಲಕ ʻಕನ್ನಡಕ್ಕಾಗಿ ನಾವುʼ ಅಭಿಯಾನ ಯಶಸ್ವಿಯಾಗಿಸಬೇಕು’ ಎಂದರು.
ಕುವೆಂಪು ಭಾಷಾ ಭಾರತಿಯಿಂದ ಪ್ರಕಟಿಸಿರುವ ʻಕನ್ನಡೇತರರಿಗೆ ಕನ್ನಡ ಕಲಿಸುವ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಿದರು. ಲಾಲ್ ಬಾಗ್ ಮೆಟ್ರೊ ನಿಲ್ದಾಣದಲ್ಲಿ ಕನ್ನಡ ಅಭಿಯಾನದ ಸ್ವಯಂ ಭಾವಚಿತ್ರ ಕೇಂದ್ರದಲ್ಲಿ (ಸೆಲ್ಫಿ) ಸ್ವತಃ ಸಚಿವರೇ ಸ್ವಯಂ ಭಾವಚಿತ್ರ ತೆಗೆದುಕೊಂಡು ಉದ್ಘಾಟಿಸಿದರು. ನಂತರ ಮೆಟ್ರೊ ನಿಲ್ದಾಣದಲ್ಲಿ ‘ಮಾತಾಡ್ ಮಾತಾಡ್’ ಕನ್ನಡ ಘೋಷ ವಾಕ್ಯದ ಭಿತ್ತಿಪತ್ರಗಳನ್ನು ಅಂಟಿಸಿದರು.
ಅಭಿಯಾನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರಿನ ರಂಗಾಯಣ ಹಮ್ಮಿಕೊಂಡಿರುವ ಎಸ್.ಎಲ್. ಬೈರಪ್ಪ ಅವರ ಕಾದಂಬರಿ ಆಧಾರಿತ ʻಪರ್ವʼ ನಾಟಕಕ್ಕೆ ಸಚಿವರು ಚಾಲನೆ ನೀಡಿದರು. ವಿವಿಧ ವಿಡಿಯೊ ಪ್ರದರ್ಶನದ ಎಲ್‌ಇಡಿ ಪರದೆ ಹೊಂದಿರುವ ವಾಹನಕ್ಕೂ ಅವರು ಚಾಲನೆ ನೀಡಿದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.