ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಸಚಿವ ಹಾಲಪ್ಪ ಆಚಾರ್ ಮಾಹಿತಿ

ಪ್ರಾಯೋಗಿಕವಾಗಿ ವಿಜಯಪುರ, ಮೈಸೂರು ಜಿಲ್ಲೆಗಳಲ್ಲಿ ಜಾರಿ
Last Updated 3 ಮಾರ್ಚ್ 2023, 9:59 IST
ಅಕ್ಷರ ಗಾತ್ರ

ಕೊಪ್ಪಳ: ‘ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದಾಗಿ ಮಾ. 10ರಿಂದ ಏ. 24ರ ವರೆಗೆ ಪ್ರಾಯೋಗಿಕವಾಗಿ ವಿಜಯಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ (ಬೇಸ್‌ ಲೈನ್‌) ಸಮೀಕ್ಷೆ ನಡೆಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್

‘ಬೆಂಗಳೂರಿನ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ಸಮೀಕ್ಷೆ ನಡೆಸಲಿದೆ. 2011ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 34,283 ಲಿಂಗತ್ವ ಅಲ್ಪಸಂಖ್ಯಾತರಿದ್ದು, ಬಹಳಷ್ಟು ಜನರನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಆದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸಲಾಗುವುದು’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೂಲಹಂತದ ಸಮೀಕ್ಷೆಯಲ್ಲಿ ವ್ಯಕ್ತಿಗತ ವಿವರಗಳು, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಸಮೀಕ್ಷೆಗಾಗಿ ₹70 ಲಕ್ಷ ಅನುದಾನ ಮೀಸಲಿಡಲಾಗಿದ್ದು, ಎರಡು ಜಿಲ್ಲೆಗಳಲ್ಲಿ ಪೂರ್ಣಗೊಂಡ ಬಳಿಕ ಸಮೀಕ್ಷೆಯನ್ನು ಉಳಿದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು’ ಎಂದರು.

‘ಹಿಂದಿನ ಸಮೀಕ್ಷೆಯಲ್ಲಿನ ವರದಿ ನಿಖರವಾಗಿಲ್ಲ. ಆಗಿನ ಅಂಕಿಅಂಶಕ್ಕೂ ಈಗಿರುವ ಅವರ ಜನಸಂಖ್ಯೆಗೂ ಬಹಳಷ್ಟು ವ್ಯತ್ಯಾಸವಿದೆ. ಸಮೀಕ್ಷೆ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳಲು ನಿರ್ವಹಣೆ, ಮೇಲುಸ್ತುವಾರಿ, ಮೌಲ್ಯಮಾಪನ, ಹಣಕಾಸು ನಿರ್ವಹಣೆ, ಸಂವಹನ ಮತ್ತು ತರಬೇತಿ ಸಮಿತಿಗಳನ್ನು ರಚಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಹೆಸರು ನೋಂದಾಯಿಸಬೇಕು. ಆಗ ಮಾತ್ರ ಎಲ್ಲ ಅರ್ಹರಿಗೂ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT