ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಲಘು ಭೂಕಂಪ: 4.4 ರಷ್ಟು ತೀವ್ರತೆ ದಾಖಲು

Last Updated 9 ಜುಲೈ 2022, 12:28 IST
ಅಕ್ಷರ ಗಾತ್ರ

ವಿಜಯಪುರ: ಶನಿವಾರ ಬೆಳ್ಳಂಬೆಳಿಗ್ಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೂಕಂಪನದ ಅನುಭವವಾಗಿದೆ.ಬೆಳಿಗ್ಗೆ 6.22ಕ್ಕೆ ಭೂಮಿ 10 ಸೆಕೆಂಡ್‌ಗೂ ಅಧಿಕ ಸಮಯ ಕಂಪಿಸಿದೆ. ಜೊತೆಗೆ ಭಾರೀ ಶಬ್ಧ ಭೂಮಿಯೊಳಗಿಂದ ಕೇಳಿಬಂದಿದೆ.

ವಿಜಯಪುರ ತಾಲ್ಲೂಕಿನ ಕನ್ನೂರು ಗ್ರಾಮ ಕೇಂದ್ರಿತವಾಗಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿದೆ. 10 ಕಿ.ಮೀ.ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ.

ವಿಜಯಪುರ ನಗರ ಸೇರಿದಂತೆ ತಿಕೋಟಾ, ಬಬಲೇಶ್ವರ, ಹೊರ್ತಿ, ಇಂಚಿಗೇರಿ, ನಾಗಠಾಣ, ತಾಂಬಾ, ದೇವರಹಿಪ್ಪರಗಿ, ಇಂಡಿ, ಚಡಚಣ ಸೇರಿದಂತೆ ನೆರೆಯ ಬಾಗಲಕೋಟೆ ಜಿಲ್ಲೆ ಹಾಗೂ ಮಹಾರಾಷ್ಟ್ರದ ಹಳ್ಳಿಗಳಲ್ಲೂಭೂಕಂಪನದ ಅನುಭವವಾಗಿದೆ.

ನಿದ್ರೆಯಿಂದ ಆಗ ತಾನೆ ಎದ್ದವರು, ಏಳದವರು ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದು ಆತಂಕದಿಂದ ಮನೆಯಿಂದ ಓಡಿ ಹೊರಬಂದರು.

ಸಿಸಿಟಿವಿಗಳಲ್ಲಿ ಭೂಕಂಪನದ ಶಬ್ಧ ಮತ್ತು ದೃಶ್ಯ ಸೆರೆಯಾಗಿದೆ. ಅಲ್ಲದೇ, ಕಂಪನಕ್ಕೆ ಮನೆಗಳಲ್ಲಿ ಪಾತ್ರೆಗಳು ಅಲ್ಲಾಡಿವೆ. ಶಬ್ಧಕ್ಕೆ ಅಂಜಿದ ನಾಯಿಗಳು ಬೊಗಳಿದರೆ, ಪಕ್ಷಿಗಳು ಚಿಲಿಪಿಲಿಗುಟ್ಟಿವೆ.

‘ಶನಿವಾರ ಸಂಭವಿಸಿರುವುದು ಸಾಮಾನ್ಯ ಭೂಕಂಪನವಾಗಿದ್ದು, ಜನರು ಭಯಪಡುವ ಅಗತ್ಯವಿಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರದ ನಿರ್ದೇಶಕ ಡಾ.ಮನೋಜ್ ರಾಜನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು ಭೇಟಿ: ಭೂಕಂಪನದ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಹಳ್ಳಿಗಳಿಗೆ ಭೇಟಿ ನೀಡಿ ಜನರ ಅನುಭವ ಆಲಿಸಿ, ಧೈರ್ಯ ತುಂಬಿದ್ದಾರೆ.

ವಿಜಯಪುರ ತಹಶೀಲ್ದಾರ್‌ ಸಿದ್ದರಾಯ ಬೋಸಗಿ ಅವರು ಭೂಕಂಪನದ ಕೇಂದ್ರ ಸ್ಥಾನವಾದ ಕನ್ನೂರ ಗ್ರಾಮಕ್ಕೆ ಭೇಟಿ ನೀಡಿ ಜನರಿಗಾದ ಅನುಭವದ ಬಗ್ಗೆ ವಿಚಾರಿಸಿದರು. ಜನರಲ್ಲಿ ಜಾಗೃತಿ ಮೂಡಿಸಿ, ಆತ್ಮಸ್ಥೈರ್ಯ ತುಂಬಿದರು. ಬಳಿಕ ವಿಜಯಪುರ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದರು. ಇಂಡಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಚಿಕ್ಕಬೇವನೂರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಆಗಾಗ ಭೂಕಂಪನದ ಅನುಭವ ಆಗುತ್ತಿದ್ದು, ಜನರಿಗೆ ಸಾಮಾನ್ಯ ಸಂಗತಿಯಂತಾಗಿದೆ. ಆದರೆ, ಭೂಕಂಪನವು 4.4 ರಷ್ಟು ತೀವ್ರತೆ ದಾಖಲಾಗಿರುವುದು ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT