ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನಮನಸ್ಕರು ಒಂದಾದರೆ ಉಳಿವು: ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌

‘ಐಡಿಯಾ ಆಫ್‌ ಇಂಡಿಯಾ’ದಲ್ಲಿ ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ ಅಭಿಮತ
Last Updated 19 ಮಾರ್ಚ್ 2023, 19:02 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಚುನಾವಣೆ ಯಲ್ಲಿ ಬಿಜೆಪಿಯೇತರ ಸಮಾನ ಮನಸ್ಕ ಹಾಗೂ ಸಿದ್ಧಾಂತವುಳ್ಳ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ರಾಷ್ಟ್ರಕ್ಕೆ ಉಳಿಗಾಲ’ ಎಂದು ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಐಡಿಯಾ ಆಫ್‌ ಇಂಡಿಯಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ. ಅಸಮತೋಲನ ಹೆಚ್ಚಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ’ ಎಂದು ಎಚ್ಚರಿಸಿದರು.

‘ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಕೋಮುವಾದಿ ಶಕ್ತಿಗಳನ್ನು ಸೋಲಿಸದಿದ್ದರೆ ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ನಾಗರಿಕತೆ ನಾಶವಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಬಹುದು’ ಎಂದು ಹೇಳಿದರು.

‘ಭಾರತವು ಬಹುತ್ವ ರಾಷ್ಟ್ರ. ಇಲ್ಲಿ ಸಮಾನ ಅವಕಾಶಗಳಿವೆ. ಕೇಂದ್ರೀಕೃತ ಆಡಳಿತ ವ್ಯವಸ್ಥೆಯಾಗಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘2024 ರ ಚುನಾವಣೆ ಬಹಳ ಮಹತ್ವದ ಚುನಾವಣೆಯಾಗಿದೆ. ಸಮಾನ ಮನಸ್ಕ ಪ್ರಾದೇಶಿಕ ಪಕ್ಷಗಳು ಒಂದಾದರೆ ಕಾಂಗ್ರೆಸ್‌ ಅದರ ನೇತೃತ್ವ ವಹಿಸಲಿದೆ. ಕಾಂಗ್ರೆಸ್‌ ಎಂದೂ ದಬ್ಬಾಳಿಕೆ ನಡೆಸುವುದಿಲ್ಲ’ ಎಂದು ಹೇಳಿದರು.

‘ಪ್ರಾದೇಶಿಕ ಪಕ್ಷಗಳಿಗೆ ಆಯಾ ರಾಜ್ಯದಲ್ಲಿ ಪ್ರಾಧಾನ್ಯ ಇರುತ್ತದೆ. ಅದು ಕಡಿಮೆ ಆಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಅದರ ಮಿತ್ರ ಪಕ್ಷಗಳು ಶೇ 33 ರಷ್ಟು ಮತ ಗಳಿಸಿವೆ. ಸಮಾನ ಸಿದ್ಧಾಂತ ಪಕ್ಷಗಳ ನಡುವೆ ಶೇ 67ರಷ್ಟು ಮತ ವಿಭಜನೆಯಾಗಿದೆ. ಇವು ಕ್ರೋಡೀಕರಣವಾದರೆ ಕೋಮುವಾದಿಗಳನ್ನು ದೂರವಿಡಲು ಸಾಧ್ಯವಾಗಲಿದೆ’ ಎಂದರು.

‘ಸಮಾಜವು ನ್ಯಾಯಸಮ್ಮತವಾಗಿ ನಡೆಯಬೇಕಿದ್ದರೆ ಅಲ್ಪಸಂಖ್ಯಾತರಿಗೆ ಒಳಿತು ಬಯಸಬೇಕು. ದಬ್ಬಾಳಿಕೆಯನ್ನು ಪ್ರಶ್ನಿಸಬೇಕಿದೆ’ ಎಂದು ಸೋಷಿಯಲಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಥಂಪನ್‌ ಥಾಮಸ್ ಹೇಳಿದರು.

ಕಾಂಗ್ರೆಸ್‌ ವಕ್ತಾರ ರಾಜೀವ್‌ಗೌಡ ಮಾತನಾಡಿ, ‘ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಒಳಗೊಳ್ಳುವಿಕೆ ಸಿದ್ಧಾಂತ ದೂರವಾಗಿದೆ. ದ್ವೇಷದ ರಾಜಕಾರಣ ಮುನ್ನೆಲೆಗೆ ಬಂದಿದೆ’ ಎಂದು ಬೇಸರ
ವ್ಯಕ್ತಪಡಿಸಿದರು.

‘ಸುಳ್ಳನ್ನೇ ಬಿಜೆಪಿ ಸತ್ಯವೆಂದು ಪ್ರತಿಪಾದಿಸುತ್ತಿದೆ. ಈಗ ಟಿಪ್ಪು ವಿಚಾರ ಮತ್ತೆ ಕೈಗೆತ್ತಿಕೊಂಡಿದೆ. ಉರಿಗೌಡ–ನಂಜೇಗೌಡ ಅವರು ಕಾಲ್ಪನಿಕ ವ್ಯಕ್ತಿಗಳು. ಆ ಹೆಸರು ಬಳಸಿಕೊಂಡು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪ್ರಾಬಲ್ಯ ವಿರುವ ಮಂಡ್ಯದಲ್ಲಿ ಒಕ್ಕಲಿಗ ಮತ ಗಳಿಸಬಹುದೆಂದು ಭಾವಿಸಿದೆ’ ಎಂದು ಹೇಳಿದರು.

ಮಾಜಿ ಸಂಸದ ದೇಬಪ್ರಸಾದ್‌ ರಾಯ್‌, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌, ಎಂ.ಜಿ.ದೇವಸಹಾಯಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT