ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ್‌ ‘ಕೋಮಾ’ಕ್ಕೆ: ಮದ್ಯದಂಗಡಿ ಖಾಲಿ

ನಾಲ್ಕು ದಿನಗಳಿಂದ ವೆಬ್ ಇಂಡೆಂಟ್ ಸಲ್ಲಿಕೆ ಸ್ಥಗಿತ: ಮದ್ಯದ ವ್ಯಾಪಾರಿಗಳ ಪರದಾಟ
Last Updated 4 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೆಬ್–ಇಂಡೆಂಟ್ ಮೂಲಕ ಮಾತ್ರ ಮದ್ಯ ಖರೀದಿಸುವ ವ್ಯವಸ್ಥೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಅಭಿವೃದ್ಧಿ ಪಡಿಸಿರುವ ಪೋರ್ಟಲ್ ಕಳೆದ ನಾಲ್ಕು ದಿನಗಳಿಂದ ಆಮೆವೇಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮದ್ಯ ಖರೀದಿ ಮಾಡಲಾಗದೆ ವ್ಯಾಪಾರಿಗಳು ಪರದಾಡುತ್ತಿದ್ದು, ಮಳಿಗೆಗಳಲ್ಲಿ ಮದ್ಯ ಖಾಲಿಯಾಗಿದೆ.

ಎಲ್ಲ ಜಿಲ್ಲೆಗಳಲ್ಲೂ ಇರುವ ಪಾನೀಯ ನಿಗಮದ ಡಿಪೋಗಳಿಗೆ ಸನ್ನದುದಾರರು ಮದ್ಯದ ಬೇಡಿಕೆ ಪಟ್ಟಿಯೊಂದಿಗೆ ಹೋಗಿ ಅಲ್ಲೇ ಹಣ ಪಾವತಿಸಿ ಖರೀದಿ ಮಾಡುವ ವ್ಯವಸ್ಥೆ ಹಲವು ವರ್ಷಗಳಿಂದ ಜಾರಿಯಲ್ಲಿತ್ತು. ಕುಳಿತಲ್ಲೇ ಮದ್ಯ ಖರೀದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೆಬ್‌–ಇಂಡೆಂಟಿಂಗ್ ವ್ಯವಸ್ಥೆಯನ್ನು ಕೆಎಸ್‌ಬಿಸಿಎಲ್ ಏಪ್ರಿಲ್‌ನಿಂದ ಜಾರಿಗೆ ತಂದಿದೆ.

ಈ ತಂತ್ರಾಂಶದಲ್ಲಿ ಪ್ರತಿ ಸನ್ನದುದಾರರಿಗೆ ಪ್ರತ್ಯೇಕ ಖಾತೆಗಳನ್ನು ಹೊಂದಲು ಅವಕಾಶ ಇದೆ. ಆ ಖಾತೆಯಲ್ಲಿ ಮೊದಲೇ ಹಣ ಜಮಾವಣೆ ಮಾಡಿಟ್ಟುಕೊಂಡಿರಬೇಕು. ಆ ಖಾತೆಯಲ್ಲಿ ಇರುವಷ್ಟು ಮೊತ್ತಕ್ಕಷ್ಟೇ ಮದ್ಯ ಖರೀದಿ ಮಾಡಲು ಅವಕಾಶ ಇದೆ.

‘ತಿಣುಕಾಟದ ಮಧ್ಯೆಯೇ ಹೊಸ ವ್ಯವಸ್ಥೆಗೆ ಹೊಂದಿಕೊಂಡು ವೆಬ್‌–ಇಂಡೆಂಟ್‌ ಮೂಲಕ ಮದ್ಯ ಖರೀದಿ ಮಾಡುತ್ತಿದ್ದೆವು. ಈಗ ನಾಲ್ಕು ದಿನಗಳಿಂದ ವೆಬ್‌ ಇಂಡೆಂಟ್‌ ಸಲ್ಲಿಸಲು ಸಾಧ್ಯವೇ ಆಗುತ್ತಿಲ್ಲ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಇಂಡೆಂಟ್ ಸಲ್ಲಿಸಲು ಪ್ರಯತ್ನಿಸಲಾಗುತ್ತಿದೆ. ಆದರೂ, ಸಾಧ್ಯವಾಗಿಲ್ಲ’ ಎಂದು ಮದ್ಯ ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಒಂದು ವಾರಕ್ಕೆ ಬೇಕಾ ಗುವಷ್ಟು ಮದ್ಯ ಖರೀದಿಸಿ ದಾಸ್ತಾನಿಟ್ಟುಕೊಳ್ಳುವ ಶಕ್ತಿ ಈಗ ಮದ್ಯದ ವ್ಯಾಪಾರಿಗಳಲ್ಲಿ ಉಳಿದಿಲ್ಲ. ಎಂಆರ್‌ಪಿ ದರಕ್ಕಿಂತ ಶೇ 20ರಷ್ಟು ಕಡಿಮೆ ದರದಲ್ಲಿ ನಮಗೆ ಮದ್ಯ ಸಿಗುತ್ತಿತ್ತು. 2009ರಿಂದ ಈ ಪ್ರಮಾಣವನ್ನು ಶೇ 10ರಷ್ಟಕ್ಕೆ ಇಳಿಸಲಾಗಿದೆ. ಲಾಭಾಂಶ ಕಡಿಮೆ ಆಗಿರುವುದರಿಂದ ಹೆಚ್ಚು ಮದ್ಯ ಖರೀದಿ ಮಾಡಿ ದಾಸ್ತಾನಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಬೆಂಗಳೂರು ನಗರ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಹೇಳಿದರು.

‘ಮದ್ಯವೇ ದಾಸ್ತಾನಿಲ್ಲದೆ ಅಂಗಡಿ ಬಾಗಿಲು ತೆರೆಯುವು ದರಿಂದ ಬಾಗಿಲು ಹಾಕಿ ಮನೆಗೆ ಹೋಗಿ ಎಂದು ಗ್ರಾಹಕರು ನಿಂದಿ ಸುತ್ತಿದ್ದಾರೆ. ಈ ರೀತಿ ಅವ್ಯವಸ್ಥೆ ಯನ್ನು ಪಾನೀಯ ನಿಗಮ ತಂದೊಡ್ಡಿದೆ. ಅಧಿಕಾರಿಗಳ ಬೇಜವಾಬ್ದಾರಿಯೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT