ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಮಾನತು ವಾಪಸ್‌

Last Updated 11 ಮೇ 2022, 16:52 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರ ಅಮಾನತು ಆದೇಶವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ವಾಪಸ್‌ ಪಡೆದಿದೆ.
ಈ ಮೂಲಕ ಅವರಿಗೆ ನೀಡಬೇಕಾದ ವೇತನ ಬಾಕಿ, ನಿವೃತ್ತಿ ವೇತನ ಮತ್ತಿತರ ಸೌಲಭ್ಯಗಳನ್ನು ಕಾನೂನು ಪ್ರಕಾರ ನೀಡುವುದಾಗಿ ಆದೇಶ ಹೊರಡಿಸಿದೆ.

ಅಕಾಡೆಮಿ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರನ್ನು ಪಕ್ಷಪಾತ ಮತ್ತು ದುರುಪಯೋಗದ ಆಪಾದನೆಗಳನ್ನು ಹೊರಿಸಿ 2012ರ ಆಗಸ್ಟ್‌ 31ರಂದು ಅಕಾಡೆಮಿ ಅಮಾನತುಗೊಳಿಸಿತ್ತು. ತಮ್ಮ ಮೇಲಿನ ಆರೋಪಗಳು ಮತ್ತು ಅಮಾನತು ಆದೇಶವನ್ನು ರಾಜ್ಯ ಹೈಕೋರ್ಟ್‌ನಲ್ಲಿ ಅಗ್ರಹಾರ ಅವರು ಪ್ರಶ್ನಿಸಿದ್ದರು.

2013ರ ಜನವರಿ 31ಕ್ಕೆ ನಿವೃತ್ತಿಯಾಗುವವರಿದ್ದರು. ನಿವೃತ್ತಿಗೆ ಮುನ್ನ ಅಮಾನತುಗೊಳಿಸಿದ್ದರಿಂದ ಅವರ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯಲಾಗಿತ್ತು. ಕೃಷ್ಣಮೂರ್ತಿ ಅವರ ವಿರುದ್ಧ ಹೊರಿಸಿದ್ದ ಎಲ್ಲ ಆರೋಪಗಳು ನಿರಾಧಾರ ಎಂದು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಆರು ವರ್ಷಗಳ ಹಿಂದೆಯೇ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಅಕಾಡೆಮಿಯು ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು 2022 ರ ಜನವರಿ 19ರಂದು ತಳ್ಳಿ ಹಾಕಿದ್ದ ನ್ಯಾಯಪೀಠವು, ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಎತ್ತಿಹಿಡಿದಿತ್ತು. ಹೀಗಾಗಿ, ಮಾರ್ಚ್ 10ರಂದು ನಡೆದ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಅಗ್ರಹಾರ ಕೃಷ್ಣಮೂರ್ತಿ ಅವರ ಅಮಾನತು ಆದೇಶವನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿತ್ತು.

ಆರೋಪಿಸಿದವರಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರಮುಖರು

‘30 ವರ್ಷಗಳ ಕಾಲ ಸಂಸ್ಥೆಗೆ ದುಡಿದಿದ್ದೆ. ಚೆನ್ನೈನಲ್ಲಿದ್ದ ಪ್ರಾದೇಶಿಕ ಕಚೇರಿಯನ್ನು ಹೋರಾಟ ಮಾಡಿ ಬೆಂಗಳೂರಿಗೆ ತಂದಿದ್ದೆ. ನನ್ನ ವಿರುದ್ಧ ಆರೋಪ ಮಾಡಿದ 3–4 ಮಂದಿಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರೇ ಪ್ರಮುಖರು. ಕನ್ನಡಿಗನ ವಿರುದ್ಧ ಕನ್ನಡಿಗರೇ ಆರೋಪ ಮಾಡಿದರು. ಆರೋಪ ಮಾಡಿದವರೇ ವಿಚಾರಣಾ ಸಮಿತಿ ಸದಸ್ಯರಾದರು. ಇದು ಅಸಂವಿಧಾನಿಕವಾಗಿತ್ತು. ನನ್ನನ್ನು ತಪ್ಪಿತಸ್ಥರನ್ನಾಗಿ ಮಾಡುವ ಹುನ್ನಾರ ಮಾಡಿದರು’ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದರು.

‘ಏಕಪಕ್ಷೀಯವಾಗಿ ಮನಬಂದಂತೆ ಅಕಾಡೆಮಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಣಕಾಸು ದುರುಪಯೋಗ ಮತ್ತು ಕನ್ನಡಿಗರ ಪರ ಕಾರ್ಯನಿರ್ವಹಿಸಿದ್ದೇನೆ ಎಂದು ಆರೋಪಿಸಲಾಗಿತ್ತು. ನನ್ನ ಜ್ಯೂನಿಯರ್‌ಗಳ ಮುಂದೆ ವಿಚಾರಣೆ ಮಾಡಿ ಅವಮಾನ ಮಾಡಿದರು. ವಿಚಾರಣೆ ಆರಂಭಿಸುವ ಮೊದಲು ನನಗೆ ನೋಟಿಸ್‌ ನೀಡಲಿಲ್ಲ. ಸಮರ್ಥಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ. ಕಾರ್ಯದರ್ಶಿಯಾಗಿದ್ದಾಗ ಅರ್ಹ ಕನ್ನಡ ಸಾಹಿತಿಗಳ ಹೆಸರುಗಳ ಪಟ್ಟಿಯನ್ನು ಪದ್ಮಶ್ರೀಗೆ ಶಿಫಾರಸ್ಸು ಮಾಡಿದ್ದೆ. ಪ್ರಶಸ್ತಿಗೆ ಅರ್ಹರಾಗಿದ್ದರಿಂದ ಪದೇ ಪದೇ ಅಕಾಡೆಮಿ ಮೂಲಕ ಶಿಫಾರಸು ಮಾಡಲಾಗಿತ್ತು. ಈಗ ಅಕಾಡೆಮಿ ಅಧ್ಯಕ್ಷರಾಗಿರುವ ಚಂದ್ರಶೇಖರ ಕಂಬಾರರು ನನ್ನ ವಿದ್ಯಾಗುರುಗಳು. ನನ್ನ ಮೇಷ್ಟ್ರು’ ಎಂದು ವಿವರಿಸಿದರು.

'ವಿಚಾರಣೆಗಾಗಿ ನಾನು ಬೆಂಗಳೂರಿನಿಂದ ದೆಹಲಿಗೆ ಪದೇ ಪದೇ ಹೋಗಬೇಕಾಗಿತ್ತು. ನನ್ನ ಪ್ರಕರಣದ ಸಂಬಂಧ ಅಕಾಡೆಮಿ ಸಾಕಷ್ಟು ಹಣ ವ್ಯಯಿಸಿದೆ. ಇದು ಸಾರ್ವಜನಿಕರ ತೆರಿಗೆ ಹಣ ಎನ್ನುವುದನ್ನು ಗಮನಹರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT