ಶುಕ್ರವಾರ, ಅಕ್ಟೋಬರ್ 23, 2020
23 °C
ಅ. 15ರ ಒಳಗೆ ಎಲ್ಲ ಅರ್ಜಿಗಳ ವಿಲೇವಾರಿ

ಸಾಲ ಮನ್ನಾ: ಗೊಂದಲದಲ್ಲಿ 1.70 ಲಕ್ಷ ರೈತರ ‘ಅರ್ಹತೆ’

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರ ಸಂಘಗಳಿಂದ ₹ 1 ಲಕ್ಷದವರೆಗೆ ಪಡೆದ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ಸಮರ್ಪಕ ದಾಖಲೆಗಳನ್ನು ನೀಡದ ಕಾರಣಕ್ಕೆ 1,70,489 ರೈತರ ‘ಅರ್ಹತೆ’ ಗುರುತಿಸಲು ಇನ್ನೂ ಸಾಧ್ಯ ಆಗಿಲ್ಲ. ಈ ಪಟ್ಟಿಯಲ್ಲಿರುವವರ ಅರ್ಹತೆಯನ್ನು ಪರಿಶೀಲಿಸಿ ಅ. 15ರ ಒಳಗೆ ವಿಲೇವಾರಿ ಮಾಡಲು ಸಹಕಾರ ಇಲಾಖೆ ನಿರ್ಧರಿಸಿದೆ.

ಈ ಯೋಜನೆಯಲ್ಲಿ ಈಗಾಗಲೇ 16.41 ಲಕ್ಷ ರೈತರನ್ನು ಅರ್ಹರೆಂದು ಗುರುತಿಸಿ ₹ 7,637.29 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಸರ್ಕಾರ 2018–19ರಲ್ಲಿ ₹ 2,600 ಕೋಟಿ, 2019–20ರಲ್ಲಿ ₹ 5,092.32 ಕೋಟಿ ಬಿಡುಗಡೆ ಮಾಡಿದೆ.

ಸಾಲ ಮನ್ನಾಕ್ಕೆ ಅರ್ಹತೆ ಪಡೆಯದವರ ಪೈಕಿ, 1,67,851 ರೈತರನ್ನು ಯಾವ ಕಾರಣಕ್ಕೆ ಪರಿಗಣಿಸಿಲ್ಲ ಎಂದು ಪಟ್ಟಿ ಸಿದ್ಧಪಡಿಸಲಾಗಿದೆ. ಇನ್ನೂ 2,638 ರೈತರ ಮಾಹಿತಿ ಸಹಕಾರ ಇಲಾಖೆಗೆ ಸಿಕ್ಕಿಲ್ಲ.

ಏನು ಗೊಂದಲ: 45,137 ರೈತರ ದಾಖಲೆಗಳು ಸರಿ ಇದ್ದರೂ, ಈ ಪೈಕಿ, 23,528 ರೈತರು ಒಂದೇ ಆಧಾರ್‌ ಸಂಖ್ಯೆಯಲ್ಲಿ ಎರಡಕ್ಕಿಂತ ಹೆಚ್ಚಿನ ಸಾಲದ ಖಾತೆ ಹೊಂದಿದ್ದಾರೆ. ಒಬ್ಬರಿಗೆ ಎರಡು ಸಹಕಾರ ಸಂಘಗಳಿಂದ ಸಾಲ ಪಡೆಯಲು ಅವಕಾಶ ಇಲ್ಲ. ಹೀಗಾಗಿ, ಮೊದಲು ಗಡುವು ಬರುವ ಸಾಲದವನ್ನು ಮನ್ನಾ ಮಾಡಲು ಸೂಚಿಸಲಾಗಿದೆ. ಜಿಪಿಎದಾರರಿಗೆ ಯೋಜನೆಯ ಸೌಲಭ್ಯ ಇಲ್ಲ. ಅಂಥವರನ್ನು ಗುರುತಿಸಿ ತಿರಸ್ಕರಿಸಲು ಸೂಚಿಸಲಾಗಿದೆ. ಉಳಿದ 21,609 ರೈತ ಕುಟುಂಬ ಒಂದು ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದಿದ್ದು, ಅಂಥವರೂ ಯೋಜನೆಗೆ ಅರ್ಹರಾಗುವುದಿಲ್ಲ.

23,361 ರೈತರ ಆಧಾರ್‌, ರೇಷನ್‌ ಕಾರ್ಡ್ ಮತ್ತು ಆರ್‌ಟಿಸಿ ದಾಖಲೆಗಳು ದೃಢೀಕರಣ ಆಗಿಲ್ಲ. 4,331 ರೈತರ ಸ್ವಯಂ ದೃಢೀಕರಣ ಪತ್ರ ಸ್ಕ್ಯಾನ್‌ ಮತ್ತು ಅಪ್‌ಲೋಡ್‌ ಆಗಿಲ್ಲ. ‌5,504 ರೈತರ ಮಾಹಿತಿಯನ್ನು ಡಿಸಿಸಿ ಬ್ಯಾಂಕಿನ ಶಾಖಾಧಿಕಾರಿಗಳು, ಸಹಕಾರ ಸಂಘಗಳ ಅಧಿಕಾರಿಗಳು ಪರಿಶೀಲಿಸಲು ಬಾಕಿ ಇದೆ. ಅರ್ಹವಲ್ಲದ ಅಥವಾ ದಾಖಲೆಗಳನ್ನು ನೀಡದ ರೈತರ ಖಾತೆಗಳನ್ನು ತಿರಸ್ಕರಿಸಲು ಸೂಚಿಸಲಾಗಿದೆ. 7,311 ಖಾತೆಗಳಲ್ಲಿ ರೈತರು ಅಸಲು ಮತ್ತು ಬಡ್ಡಿ ಪಾವತಿಸಿಲ್ಲ. ಅಂಥವರು ಕೂಡಾ ಸಾಲ ಮನ್ನಾಗೆ ಅರ್ಹರಲ್ಲ.

ಸಾಲ ಮನ್ನಾಕ್ಕೆಂದೇ ಪಡಿತರಚೀಟಿ?: 68,032 ಖಾತೆಗಳಲ್ಲಿ ರೈತರು ಹೊಸತಾಗಿ ಒಂದೇ ಸದಸ್ಯರಿರುವ ಪಡಿತರ ಚೀಟಿ ಪಡೆದಿದ್ದಾರೆ. 2020ರ ಜುಲೈ 20ರ ನಂತರ ಹೊಸತಾಗಿ ಪಡಿತರ ಚೀಟಿ ಪಡೆದು ಹಳೆಯ ಪಡಿತರ ಚೀಟಿಯಲ್ಲಿ ಹೆಸರು ಇದ್ದರೆ (ಈಗಾಗಲೇ ಅರ್ಹರಾಗಿದ್ದರೆ) ಅಂಥವರನ್ನು ಸಾಲ ಮನ್ನಾ ಯೋಜನೆಯಿಂದ ಪ್ರತ್ಯೇಕವಾಗಿ ಪರಿಶೀಲಿಸಬೇಕು. ಉಳಿದವರ ಖಾತೆಗಳನ್ನು ತಾಲ್ಲೂಕು ಸಮಿತಿ ಪರಿಶೀಲಿಸಬೇಕು. ರೈತರ ಮನೆಗಳಿಗೆ ಭೇಟಿ ನೀಡಿ, ಒಂದೇ ಕುಟುಂಬದಲ್ಲಿರುವ ರೈತರು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದರೆ, ಮೊದಲು ಗಡುವು ಬರುವ ಸಾಲ ಮನ್ನಾ ಮಾಡಿ ಉಳಿದ ಖಾತೆಗಳನ್ನು ಅ. 15ರ ಒಳಗೆ ತಿರಸ್ಕರಿಸಬೇಕು.

6,893 ರೈತರ ಖಾತೆಗಳು ದಾಖಲೆ ಅಪ್‌ಲೋಡ್‌ ಮಾಡದ ಕಾರಣಕ್ಕೆ ಹಾಗೂ 9,920 ಖಾತೆಗಳ ರೈತರು ವೇತನ, ಪಿಂಚಣಿ, ಆದಾಯ ತೆರಿಗೆ ಪಾವತಿದಾರರು ಅಥವಾ ಇತರ ಷರತ್ತು ಪಾಲಿಸದ ಕಾರಣಕ್ಕೆ ಈಗಾಗಲೇ
ತಿರಸ್ಕೃತಗೊಂಡಿವೆ.

ಸಮರ್ಪಕ ದಾಖಲೆಗಳನ್ನು ಸಲ್ಲಿಸದ ರೈತರ ಬಗ್ಗೆ ಸಹಕಾರ ಸಂಘಗಳು ಅ. 12ರ ಒಳಗೆ ಮತ್ತೊಮ್ಮೆ ಪರಿಶೀಲಿಸಿ ಡಿಸಿಸಿ ಬ್ಯಾಂಕುಗಳಿಗೆ ನೀಡಬೇಕು. ಡಿಸಿಸಿ ಬ್ಯಾಂಕುಗಳು ಅ. 15 ಒಳಗೆ ಸಹಕಾರ ಇಲಾಖೆಗೆ ಸಲ್ಲಿಸುವಂತೆ ಸಹಕಾರ ಸಂಘಗಳ ನಿಬಂಧಕ ಎಸ್‌. ಜಿಯಾಉಲ್ಲಾ ಸೂಚಿಸಿದ್ದಾರೆ.

ಜೆಡಿಎಸ್‌– ಕಾಂಗ್ರೆಸ್‌ ‘ಮೈತ್ರಿ’ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ರೈತ ಕುಟುಂಬಕ್ಕೆ ಗರಿಷ್ಠ ₹ 1 ಲಕ್ಷವರೆಗಿನ ಬೆಳೆ ಸಾಲ ಮನ್ನಾ ಮಾಡಿದ್ದರು. 2018ರ ಜುಲೈ 10ಕ್ಕೆ ಹೊರಬಾಕಿ ಹೊಂದಿದ್ದ ರೈತರ ಸಂಖ್ಯೆ 19.14 ಲಕ್ಷ. ಸಾಲದ ಮೊತ್ತ ₹ 11,032 ಕೋಟಿ ಆಗಿತ್ತು. ಅದರಲ್ಲಿ ₹ 1 ಲಕ್ಷವರೆಗಿನ ಸಾಲದ ಮೊತ್ತ ₹ 8,480 ಕೋಟಿಯಾಗಿತ್ತು.

ಸಾಲ ಮನ್ನಾ ಯೋಜನೆಗೆ ಅರ್ಹರಾಗುವ ರೈತರನ್ನು ಗುರುತಿಸಲು ಅವಕಾಶ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು ಈ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರತಿಕ್ರಿಯಿಸಿದರು.

***

ಸಾಲ ಮನ್ನಾ ಯೋಜನೆಗೆ ಅರ್ಹರಾಗುವ ರೈತರನ್ನು ಗುರುತಿಸಲು ಅವಕಾಶ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು ಈ ಕಾರ್ಯನಿರ್ವಹಿಸಲಿದ್ದಾರೆ.
–ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ
        

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು