ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ವೇತನಕ್ಕೆ ಆಗ್ರಹಿಸಿ ಗುತ್ತಿಗೆ ನೌಕರರ ಪ್ರತಿಭಟನೆ

Last Updated 22 ಸೆಪ್ಟೆಂಬರ್ 2021, 3:09 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆ ಪದ್ಧತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೌಕರರು, ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ನೀರಗಂಟಿ, ಡೆಟಾ ಎಂಟ್ರಿ ಆಪರೇಟರ್, ಯುಜಿಡಿ ಕಾರ್ಮಿಕರು ಮತ್ತು ಸಹಾಯಕರಿಗೆ ಸಕಾಲಕ್ಕೆ ಕನಿಷ್ಠ ವೇತನ ಸಿಗುತ್ತಿಲ್ಲ. ಹೊರ ಗುತ್ತಿಗೆ ಹೆಸರಿನಲ್ಲಿ ಸರ್ಕಾರಿ ಜೀತಕ್ಕೆ ಕಾರ್ಮಿಕರನ್ನು ಸಿಲುಕಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ವಿಶೇಷ ನೇಮಕಾತಿ ಯೋಜನೆಯಡಿ 2017ರಲ್ಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಯಿತು. ಆದರೆ, ಅವರೊಟ್ಟಿಗೆ ಕೆಲಸ ಮಾಡುವ ಈ ನೌಕರರನ್ನು ಗಮನಿಸಲಿಲ್ಲ. ಸಕಾಲಕ್ಕೆ ಕನಿಷ್ಠ ವೇತನ ಮತ್ತು ಭವಿಷ್ಯ ನಿಧಿ ನೀಡದೆ ಗುತ್ತಿಗೆ ಏಜೆನ್ಸಿಗಳು ವಂಚಿಸುವುದು ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸುವ ನೌಕರರಿಗೆ ಇನ್ನಿಲ್ಲದ ಕಿರುಕುಳ ನೀಡಿ ಕೆಲಸದಿಂದ ಕೈಬಿಡಲಾಗುತ್ತಿದೆ’ ಎಂದು ದೂರಿದರು.

‘ಈ ನೌಕರರಿಗೆ ನ್ಯಾಯ ಸಿಗಬೇಕೆಂದರೆ ನೇರ ವೇತನ ಜಾರಿಗೊಳಿಸುವುದು ಅಗತ್ಯ. ತಲಾ 500 ಜನಸಂಖ್ಯೆಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನಿಯೋಜಿಸಿ ಬಾಕಿ ಉಳಿಯುವ ಪೌರ ಕಾರ್ಮಿಕರ ಹುದ್ದೆಗಳಿಗೆ ಎರಡನೇ ಹಂತದ ನೇರ ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಹೊರ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ ಒತ್ತಾಯಿಸಿದರು.

‘ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ನೌಕರರಿಗೂ ಗೃಹಭಾಗ್ಯ ಮಾದರಿಯ ವಸತಿ ಯೋಜನೆ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT