ಮಂಗಳವಾರ, ಮೇ 24, 2022
21 °C
ಪ್ರಜಾವಾಣಿ ವರದಿ ಪರಿಣಾಮ: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ನ್ಯಾ. ವಿಶ್ವನಾಥ ಶೆಟ್ಟಿ

ಕೋವಿಡ್‌ ಸೇನಾನಿಗಳಿಗೆ ಸಿಗದ ಪರಿಹಾರ: ಲೋಕಾಯುಕ್ತ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ನಿಯಂತ್ರಣ ಕರ್ತವ್ಯದಲ್ಲಿ ಭಾಗಿಯಾಗಿ ಮೃತಪಟ್ಟ ಕೋವಿಡ್ ಸೇನಾನಿಗಳ ಕುಟುಂಬಗಳಿಗೆ ವಿಮಾ ಪರಿಹಾರ ಪಾವತಿಯಾಗದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ, ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿದ್ದಾರೆ.

‘ಸೇನಾನಿಗಳ ಕುಟುಂಬ ಅನಾಥ’ ಎಂಬ ಶೀರ್ಷಿಕೆಯಡಿ ಫೆ.11ರಂದು ‘ಪ್ರಜಾವಾಣಿ’ ಪ್ರಕಟಿಸಿದ ವರದಿ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬಿಬಿಎಂಪಿ ಆಯುಕ್ತರು ಸೇರಿ 11 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದ್ದಾರೆ.

‘ಮೃತಪಟ್ಟ ಕೋವಿಡ್ ಸೇನಾನಿ ಕುಟುಂಬದವರು ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ‘ಪ್ರಜಾವಾಣಿ’ ವರದಿ ವಿವರಿಸಿದೆ. ಅವರ ಕುಟುಂಬ ಸದಸ್ಯರ ಅಹವಾಲುಗಳನ್ನು ಆಲಿಸಬೇಕು. ಕೂಡಲೇ ಸಮಸ್ಯೆ ಸರಿಪಡಿಸಬೇಕು. ಈ ಸಂಬಂಧ ಮೂರು ವಾರದೊಳಗೆ ವರದಿ ಸಲ್ಲಿಸಬೇಕು’ ಎಂದು ಅವರು ನಿರ್ದೇಶನ ನೀಡಿದ್ದಾರೆ.

‘ಆರೋಗ್ಯ ಕಾರ್ಯಕರ್ತರು, ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳ ನೌಕರರು, ಆಶಾ ಕಾರ್ಯಕರ್ತೆ ಸೇರಿ ಕರ್ತವ್ಯ ನಿರ್ವಹಣೆ ವೇಳೆ ಕೋವಿಡ್ ತಗುಲಿ ಮೃತಪಟ್ಟರು ಎಷ್ಟು ಎಂಬ ವಿವರ ಸಲ್ಲಿಸಬೇಕು. ಎಷ್ಟು ಕುಟುಂಬಗಳಿಗೆ ₹30 ಲಕ್ಷ ವಿಮಾ ಪರಿಹಾರ ನೀಡಲಾಗಿದೆ, ಇನ್ನೂ ಎಷ್ಟು ಮಂದಿಗೆ ಪರಿಹಾರ ನೀಡುವುದು ಬಾಕಿ ಇದೆ, ಅದಕ್ಕೆ ಕಾರಣಗಳೇನು ಎಂಬುದರ ಮಾಹಿತಿ ಒದಗಿಸಬೇಕು’ ಎಂದು ಸೂಚಿಸಿದ್ದಾರೆ.

‘ಕೋವಿಡ್‌ ನಿಯಂತ್ರಣಕ್ಕೆ ಮುಂದೆ ನಿಂತು ಪ್ರಾಣ ಕಳೆದುಕೊಂಡವರ ಕುಟುಂಬದವರ ರಕ್ಷಣೆಯ ಜವಾಬ್ದಾರಿ ಸರ್ಕಾರದ್ದೆ ಆಗಿದೆ. ಅವರು ಯಾವುದೇ ಕಾರಣಕ್ಕೂ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶವೂ ಇದೆ’ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕೋವಿಡ್ ತಡೆಯಲು ಮುಂದಿನ ಸಾಲಿನಲ್ಲಿ ನಿಂತುಕೆಲಸ ಮಾಡಿರುವರ ಕುಟುಂಬಗಳನ್ನು ಅಲೆದಾಡಿಸದೆ ಕೂಡಲೇ ವಿಮಾ ಪರಿಹಾರ ಪಾವತಿಸಬೇಕು ಎಂದು ಸೂಚನೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು