ಸೋಮವಾರ, ಮಾರ್ಚ್ 27, 2023
32 °C
ವಿಜಯಪುರದ ಬಿ.ಎಂ.ಪಾಟೀಲ್‌ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ವೈದ್ಯಕೀಯ ಶಿಕ್ಷಣ

ಉಕ್ರೇನ್‌ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ಎಂ.ಬಿ.ಪಾಟೀಲ್‌ ಸಹಾಯ ಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಯುದ್ಧಪೀಡಿತ ಉಕ್ರೇನ್‌ನಿಂದ ವೈದ್ಯಕೀಯ ವಿದ್ಯಾಭ್ಯಾಸ ಮೊಟಕುಗೊಳಿಸಿ ಜಿಲ್ಲೆಗೆ ಮರಳಿರುವ ವಿದ್ಯಾರ್ಥಿಗಳ ನೆರವಿಗೆ ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮುಂದಾಗಿದೆ.

ಸರ್ಕಾರದ ಮುಂದಿನ ಆದೇಶದವರೆಗೆ ಈ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ ಅತಂತ್ರದಲ್ಲಿದ್ದ ವಿದ್ಯಾರ್ಥಿಗಳ ಪಾಲಿಗೆ ಸಹಾಯ ಹಸ್ತ ಚಾಚಿದೆ.

ಉಕ್ರೇನಿನಿಂದ ಜಿಲ್ಲೆಗೆ ಮರಳಿರುವ 17 ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ಬಿ.ಪಾಟೀಲ್‍ ಅವರನ್ನು ಭೇಟಿಯಾಗಿ ನೆರವು ಕೋರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿದ್ಯಾರ್ಥಿಗಳಿಗೆ ನೆರವು ಒದಗಿಸುವುದಾಗಿ ಹೇಳಿದ್ದರೂ ಇದುವರೆಗೆ ಸ್ಪಷ್ಟ ನೀತಿ ಜಾರಿಯಾಗಿಲ್ಲ. ವಿದ್ಯಾರ್ಥಿಗಳು ಗೊಂದಲಕ್ಕಿಡಾಗಿದ್ದು, ಶೈಕ್ಷಣಿಕವಾಗಿ ಅತಂತ್ರರಾಗಿದ್ದಾರೆ. ಮನೆಯಲ್ಲಿಯೇ ಖಾಲಿ ಕುಳಿತುಕೊಳ್ಳುವುದು ಬೇಡ. ಈ ವಿದ್ಯಾರ್ಥಿಗಳು ಇಂದಿನಿಂದಲೇ ಬಿ.ಎಂ.ಪಾಟೀಲ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಲು ಎಲ್ಲ ಏರ್ಪಾಡು ಮಾಡಲಾಗುವುದು ಎಂದು ಎಂ.ಬಿ.ಪಾಟೀಲ ಭರವಸೆ ನೀಡಿದರು.

ಕೇವಲ ಉಕ್ರೇನ್‌ನಿಂದ ಮರಳಿರುವ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೇ, ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಹಾಗೂ ಸದ್ಯ ಕೋವಿಡ್‌ ಲಾಕ್‍ಡೌನ್ ಕಾರಣದಿಂದ ಇಲ್ಲಿಯೇ ಉಳಿದಿರುವ ಐದು ವಿದ್ಯಾರ್ಥಿಗಳಿಗೂ ಕೂಡ ಪ್ರತ್ಯೇಕ ತರಗತಿ  ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಎಲ್‌ಡಿಇ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬೋಧನೆ ಮತ್ತು ತರಬೇತಿ ನೀಡುವುದರ ಜೊತೆಗೆ ಗ್ರಂಥಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಬಿಎಲ್‌ಡಿಇ ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಅವರು ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಗಮನ ಹರಿಸಲು ವಿಶೇಷ ಉಪನ್ಯಾಸಕರನ್ನು ನಿಯೋಜಿಸಿದ್ದಾರೆ.

ಉಕ್ರೇನ್‍ನಿಂದ ಆಗಮಿಸಿರುವ ವಿದ್ಯಾರ್ಥಿಗಳಲ್ಲಿ ಪ್ರಥಮ ಎಂ.ಬಿ.ಬಿ.ಎಸ್‌ನ 8, ದ್ವಿತೀಯ ಎಂ.ಬಿ.ಬಿ.ಎಸ್‌ನ 7 ಮತ್ತು ತೃತೀಯ ಎಂ.ಬಿ.ಬಿ.ಎಸ್‌ನ 2 ವಿದ್ಯಾರ್ಥಿಗಳು ಹಾಗೂ ಚೀನಾದಿಂದ ದ್ವಿತೀಯ ಎಂ.ಬಿ.ಬಿ.ಎಸ್ 3, ತೃತೀಯ ಎಂ.ಬಿ.ಬಿ.ಎಸ್ 2 ವಿದ್ಯಾರ್ಥಿಗಳು ಇದುವರೆಗೆ ಕಾಲೇಜಿನಲ್ಲಿ ಹೆಸರು ನೋಂದಾಯಿಸಿದ್ದು, ಗುರುವಾರದಿಂದಲೇ ತರಗತಿಗಳು ಆರಂಭಗೊಂಡಿವೆ.

ಆಪದ್ಬಾಂಧವ:

ಈ ಕುರಿತು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಅಮನ್‌ ಮಮದಾಪುರ ಅವರ ತಂದೆ ಧರ್ಮರಾಯ ಮಮದಾಪುರ, ಎಂ. ಬಿ. ಪಾಟೀಲ ಅವರು ನಮಗೆಲ್ಲ ಈ ಸಂಕಷ್ಟದ ಸಮಯದಲ್ಲಿ ಆಪದ್ಭಾಂಧವರಾಗಿದ್ದಾರೆ. ನಮ್ಮ ಮಕ್ಕಳು ಡಾಕ್ಟರ್ ಆಗಬೇಕೆಂಬ ಕನಸಿಗೆ ಉಂಟಾಗಿದ್ದ ಅಡ್ಡಿಯನ್ನು ಸದ್ಯಕ್ಕೆ ನಿವಾರಿಸಿದ್ದಾರೆ. ಅವರ ಸಹಾಯ ನಮ್ಮ ಮಕ್ಕಳ ಭವಿಷ್ಯಕ್ಕೆ ಬೆಳಕಾಗುವಂತೆ ಮಾಡಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ನಮ್ಮ ಮಕ್ಕಳ ಎಂ.ಬಿ.ಬಿ.ಎಸ್ ಕೋರ್ಸಿನ ಬಗ್ಗೆ ಇತರ ತಾಂತ್ರಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು