ಶುಕ್ರವಾರ, ಸೆಪ್ಟೆಂಬರ್ 17, 2021
21 °C

ಜೆಡಿಎಸ್‌ಗೆ ಹೋದಾಗ ಯತ್ನಾಳ್ ಹಿಂದುತ್ವ ಎಲ್ಲಿತ್ತು?: ಶಾಸಕ ಎಂ.ಪಿ. ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿರುವ ಬಸನಗೌಡ ಪಾಟೀಲ ಯತ್ನಾಳ್ ಈ ಹಿಂದೆ ಜೆಡಿಎಸ್‍ಗೆ ಹೋಗಿದ್ದಾಗ ಅವರು ಸಿದ್ಧಾಂತ ಎಲ್ಲಿ ಹೋಗಿತ್ತು’ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದರು.

‘ಹಿಂದುತ್ವದ ಬಗ್ಗೆ ಯತ್ನಾಳ್ ಮಾತನಾಡುತ್ತಾರೆ. ಈಗ ಅವರಿಗೆ ಜ್ಞಾನೋದಯವಾಗಿರಬೇಕು. ಯಡಿಯೂರಪ್ಪನವರು ಬಿಜೆಪಿ ಕಟ್ಟಿ ಬೆಳೆಸಿದವರು. ಅವರ ರೀತಿಯ ಪಕ್ಷಾಂತರಿಯಲ್ಲ. ಜೆಡಿಎಸ್‍ಗೆ ಹೋದಾಗ ಹಿಂದುತ್ವ ನೆನಪಿರಲಿಲ್ಲವೇ’ ಎಂದು ಕುಟುಕಿದರು.

ಯಡಿಯೂರಪ್ಪನವರ ನಾಯಕತ್ವದಲ್ಲಿ ಹಲವಾರು ಶಾಸಕರು ಇದ್ದಾರೆ. ರಾಷ್ಟ್ರೀಯ ನಾಯಕರ ಮಾತಿಗೆ ಬೆಲೆ ಕೊಟ್ಟ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ನಿಮ್ಮ ವರ್ಚಸ್ಸು ಹಾಳಾಗುತ್ತದೆ ಎಂದು ಯತ್ನಾಳ್‍ ಅವರನ್ನು ಉದ್ದೇಶಿಸಿ ರೇಣುಕಾಚಾರ್ಯ ಹೇಳಿದರು.

‘ಸಚಿವ ಸ್ಥಾನಕ್ಕಾಗಿ ವರಿಷ್ಠರ ಮೇಲೆ ಒತ್ತಡ ತರುವುದಿಲ್ಲ. ಅದಕ್ಕಾಗಿ ದೆಹಲಿಗೂ ಹೋಗುವುದಿಲ್ಲ. ಒತ್ತಡ ಹೇರಿ ಸ್ಥಾನ ಪಡೆಯುವುದು ನನ್ನ ಜಾಯಮಾನವಲ್ಲ. ಉನ್ನತ ಸ್ಥಾನ ಸಿಗುವುದಿದ್ದರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದರು.

ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದು ಮುಖ್ಯಮಂತ್ರಿ ಪರಮಾಧಿಕಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ವರಿಷ್ಠರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದೂ ಅವರು ಹೇಳಿದರು.

‘ಈಶ್ವರಪ್ಪರನ್ನು ಡಿಸಿಎಂ ಮಾಡಿ’

‘ಬಿ.ಎಸ್.ಯಡಿಯೂರಪ್ಪ ಅವರಂತೆಯೇ ಕೆ.ಎಸ್.ಈಶ್ವರಪ್ಪ ಅವರೂ ರಾಜ್ಯದಲ್ಲಿ ಬಿಜೆಪಿಯನ್ನು ಬೇರುಮಟ್ಟದಿಂದ ಸಂಘಟಿಸಿದ್ದಾರೆ. ಮೂರು ದಶಕದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕು’ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ವೀರೇಶ್‌ ಉಂಡೋಡಿ ಒತ್ತಾಯಿಸಿದ್ದಾರೆ.

‘ಪಕ್ಷದ ಸಂಘಟನೆಗೆ ಈಶ್ವರಪ್ಪ ಪಟ್ಟಿರುವ ಶ್ರಮವನ್ನು, ಯಡಿಯೂರಪ್ಪನವರೇ ವಿದಾಯ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಶೇ 55ರಷ್ಟಿರುವ ಹಿಂದುಳಿದ ವರ್ಗಗಳ ನಾಯಕರಾಗಿರುವ ಅವರಿಗೆ ಬಿಜೆಪಿಯು ಸೂಕ್ತ ಸ್ಥಾನ–ಮಾನ ನೀಡಬೇಕು’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಈಶ್ವರಪ್ಪನವರ ಅರ್ಹತೆಗೆ ಸಿ.ಎಂ ಸ್ಥಾನ ನೀಡಬೇಕಾಗಿತ್ತು. ಆದರೆ, ಲಿಂಗಾಯತ ಸಮುದಾಯದವರಿಗೆ ನೀಡಲಾಯಿತು. ಇದನ್ನು ಸ್ವಾಗತಿಸುತ್ತೇವೆ. ಈಗ ಡಿಸಿಎಂ ಮಾಡಿ ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು’ ಎಂದಿದ್ದಾರೆ.

‘ಪಾಲು ಕೇಳುವವರಿಗೆ ಸಚಿವ ಸ್ಥಾನ ಬೇಡ’

ಯೋಜನಾ ವೆಚ್ಚದ ಶೇಕಡ 45ರಿಂದ 50ರಷ್ಟು ಲಂಚ ಕೇಳುವವರು ಮತ್ತು ಯೋಜನೆಗಳಲ್ಲಿ ಪಾಲುದಾರರನ್ನಾಗಿ ಮಾಡುವಂತೆ ಬೇಡಿಕೆ ಇಡುವವರಿಗೆ ರಾಜ್ಯದ ಹೊಸ ಸಂಪುಟ ರಚನೆ ವೇಳೆ ಸ್ಥಾನ ನೀಡಬಾರದು ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಆರ್‌ಎಸ್ಎಸ್‌ ಮುಖಂಡರನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ‘ಏನೋ ಒಂದು ಒಳ್ಳೆಯದಾಗಿದೆ. ಇನ್ನು ನಿಮ್ಮದೇ ಮೂಲಗಳಿಂದ ಮಾಹಿತಿ ಪಡೆದು ಪರಿಶೀಲಿಸಿ. ಯೋಜನಾ ವೆಚ್ಚದಲ್ಲಿ ಶೇ 45ರಿಂದ 50ರಷ್ಟು ಕೇಳುವವರು ಮತ್ತು ಅದೇ ಯೋಜನೆಗಳಲ್ಲಿ ತಮ್ಮನ್ನೂ ಪಾಲುದಾರರನ್ನಾಗಿ ಮಾಡುವಂತೆ ಬೇಡಿಕೆ ಇಡುವವರನ್ನು ಸಂಪುಟಕ್ಕೆ ಸೇರಿಸಬೇಡಿ. ಅದು ನೀವು ಕರ್ನಾಟಕದ ಒಳಿತಿಗಾಗಿ ಮಾಡುವ ಕೆಲಸವಾಗುತ್ತದೆ’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು