ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಹಿಂಪಡೆದು ಎಸ್‌ಸಿ ಮೀಸಲಾತಿ ನೀಡಿ: ಮಡಿವಾಳ ಸ್ವಾಮೀಜಿ

ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಕೋರಿಕೆ
Last Updated 5 ಜನವರಿ 2023, 10:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಡಿವಾಳ ಸಮುದಾಯ ಹಾಗೂ ಮಠಕ್ಕೆ ನೀಡಿದ ಎಲ್ಲ ಅನುದಾನವನ್ನು ಸರ್ಕಾರ ಹಿಂಪಡೆದು ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ. ಇದು ಸಮುದಾಯದ ವಿನಮ್ರ ಮನವಿಯೇ ವಿನಾ ಆಗ್ರಹವಲ್ಲ ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದರು.

ಇಲ್ಲಿನ ಮಡಿವಾಳ ಗುರುಪೀಠದಲ್ಲಿ ಸ್ವಾಮೀಜಿ ಅವರ 5 ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾಯಕ ಜನೋತ್ಸವದಲ್ಲಿ ಅವರು ಮಾತನಾಡಿದರು.

‘ಮಠಕ್ಕೆ ₹ 3 ಕೋಟಿ ಅನುದಾನ ನೀಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಆದರೆ, ಸಮುದಾಯದ ಪ್ರಮುಖ ಬೇಡಿಕೆಯಾದ ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯವನ್ನು ಈಡೇರಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಡಾ.ಅನ್ನಪೂರ್ಣಮ್ಮ ಅವರ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಸರ್ಕಾರ ಈಗಲಾದರೂ ಪರಿಗಣಿಸಲಿ’ ಎಂದರು.

‘ಮಡಿವಾಳ ಸಮುದಾಯದ ಶೇ 98ರಷ್ಟು ಜನರು ಇನ್ನೂ ಕುಲಕಸುಬು ನಂಬಿ ಬದುಕು ಸಾಗಿಸುತ್ತಿದ್ದಾರೆ. ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ ಕನಿಷ್ಠ ₹ 500 ಕೋಟಿ ಅನುದಾನ ನೀಡಬೇಕು. ಸಹೋದರ ಸಮುದಾಯಕ್ಕೆ ನೀಡಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಮಡಿವಾಳ ಸಮುದಾಯಕ್ಕೂ ಕಲ್ಪಿಸಬೇಕು’ ಎಂದರು.

ವರದಿ ಪರಿಶೀಲಿಸುವೆ: ಸಿಎಂ

ಡಾ.ಅನ್ನಪೂರ್ಣಮ್ಮ ವರದಿಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡುತ್ತೇವೆ. ಸಂವಿಧಾನದ ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

‘ಕುಲಶಾಸ್ತ್ರೀಯ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಎಂಟು ವರ್ಷ ಕಳೆದಿದೆ. ಈವರೆಗೆ ಅಧಿಕಾರ ನಡೆಸಿದ ಯಾವ ಸರ್ಕಾರವೂ ವರದಿಯ ಪುಟ ತಿರುಗಿಸಿ ನೋಡಿಲ್ಲ. ಸಮುದಾಯಕ್ಕೆ ಒಳ್ಳೆಯ ದಿನಗಳು ಬಂದಿವೆ. ಮತ್ತೊಬ್ಬರಿಗೆ ಅನ್ಯಾಯ ಆಗದ ರೀತಿಯಲ್ಲಿ ನ್ಯಾಯ ಒದಗಿಸುತ್ತೇವೆ’ ಎಂದರು.

‘ಸಣ್ಣ ಸಮುದಾಯ ಪರಿಗಣಿಸಿ’

‘ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು. ಇದು ಹಿಂದುಳಿದ ಮತ್ತು ದಲಿತ ಮಠಾಧೀಶರ ಕೋರಿಕೆ’ ಎಂದು ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ತಿಳಿಸಿದರು.

‘ಮಡಿವಾಳ, ಹಡಪದ, ಕುಂಬಾರ, ಹೆಳವ, ತಿಗಳ ಸೇರಿ 33 ಸಮುದಾಯದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಸಣ್ಣ ಸಮುದಾಯಗಳನ್ನು ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡಿಕೊಂಡು ಬಂದಿವೆ. ನಾವು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದು ಕಷ್ಟ. ಈ ಸಮುದಾಯಗಳಿಗೆ ಮೀಸಲಾತಿ ನೀಡುವುದು ಅತ್ಯಂತ ಅವಶ್ಯಕ’ ಎಂದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರಿಗೆ ‘ಮಾಚಿದೇವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

***

ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಯಾಗುವ ಅರ್ಹತೆಯನ್ನು ಮಡಿವಾಳ ಸಮುದಾಯ ಹೊಂದಿದೆ. ಸರ್ಕಾರ ಈ ಬೇಡಿಕೆ ಪರಿಗಣಿಸಬೇಕು. ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು.

ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT