ಗುರುವಾರ , ಮಾರ್ಚ್ 23, 2023
28 °C

ಹೋರಾಟದ ಬಳಿಕವೇ ಮಹದಾಯಿ ಡಿಪಿಆರ್'ಗೆ ಒಪ್ಪಿಗೆ ಸಿಕ್ಕಿದ್ದು: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಯ ಡಿಪಿಆರ್ ಸಿದ್ಧಪಡಿಸಿದ್ದು. ಯೋಜನೆ ಅನುಷ್ಠಾನಕ್ಕಾಗಿ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

'ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಹದಾಯಿ ಯೋಜನೆ ಅನುಷ್ಠಾನ ಮಾಡಲು ಅನುಮತಿ ನೀಡಿದರೆ ಕಾನೂನು‌ ಹೋರಾಟ ಮಾಡುತ್ತೇವೆ' ಎಂಬ ಗೋವಾ ಸಚಿವರ ಹೇಳಿಕೆಗೆ ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದರು. 'ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ, ಕಾನೂನು ಹೋರಾಟದ ಬಳಿಕವೇ ನಮಗೆ ಕೇಂದ್ರ ಸರ್ಕಾರದಿಂದ ಡಿಪಿಆರ್'ಗೆ ಅನುಮತಿ ಸಿಕ್ಕಿದ್ದು' ಎಂದರು.

'ಪ್ರಧಾನಿ ನರೇಂದ್ರ ಮೋದಿ ಅವರು ಫೆ. 6ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಇಂಡಿಯಾ ಎನರ್ಜಿ ವೀಕ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದೇರಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಎಚ್‌ಎಎಲ್‌ನ ಹೆಲಿಕಾಪ್ಟರ್‌ ಉತ್ಪಾದನಾ ಕಾರ್ಖಾನೆಗೆ ಚಾಲನೆ ನೀಡಲಿದ್ದಾರೆ' ಎಂದು ಹೇಳಿದರು.

'ಹಾಲಿ,‌ಮಾಜಿ‌ ಸಿಎಂಗಳು ಗಲ್ಲಿ ರೌಡಿಗಳ ಹಾಗೆ ಮಾತನಾಡುತ್ತಾರೆ' ಎನ್ನುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಅವರ ಹೇಳಿಕೆಗೆ ಸಿಎಂ ಬೊಮ್ಮಾಯಿ, 'ಅವರ ಆರೋಪಕ್ಕೆ, ಹೇಳಿಕೆಗೆ ನಾನ್ಯಾವತ್ತೂ ಪ್ರತಿಕ್ರಿಯಿಸಿಲ್ಲ. ಅವರು ಪದೇಪದೇ ಆರೋಪ ಮಾಡುತ್ತಲೇ ಇರುತ್ತಾರೆ. ಆ ಕುರಿತು ಹೆಚ್ಚು ಮಾತನಾಡುವ ಅವಶ್ಯಕತೆಯಿಲ್ಲ' ಎಂದು ಪ್ರತಿಕ್ರಿಯಿಸಿದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು