ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ; ವಿಪಕ್ಷಗಳ ನಾಯಕರನ್ನೂ ಸೇರಿಸಿ ಸಲಹಾ ಸಮಿತಿ ರಚಿಸಬೇಕು: ಸಿದ್ದರಾಮಯ್ಯ

Last Updated 23 ನವೆಂಬರ್ 2022, 8:09 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು ತಕ್ಷಣ ಸಲಹಾ ಸಮಿತಿ ರಚಿಸಬೇಕು‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ರಾಜ್ಯದ ವಕೀಲರ ತಂಡವನ್ನು ಇನ್ನಷ್ಟು ಸನ್ನದ್ದಗೊಳಿಸಬೇಕು. ಗಡಿ ವ್ಯಾಜ್ಯದ ಮೇಲುಸ್ತುವಾರಿಯನ್ನು ಹಿರಿಯ ಸಚಿವರಿಗೆ ಒಪ್ಪಿಸಬೇಕು. ಅಲ್ಲದೆ, ನಿಷ್ಕ್ರೀಯಗೊಂಡಿರುವ ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್‌ ರಚಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಅತೀವ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ, ಕರ್ನಾಟಕ ಸರ್ಕಾರ ಕೂಡಾ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ರಾಜ್ಯದ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದರು.

‘ಮಹಾರಾಷ್ಟ್ರ ಸರ್ಕಾರ ಗಡಿ ವಿವಾದದ ಬಗ್ಗೆ ಸತತವಾಗಿ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಾ ಬಂದಿದೆ. ಕಳೆದ ಒಂದು ತಿಂಗಳಿನಿಂದ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ಎದುರಿಸಲು ವಿರೋಧ ಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು 16 ಸದಸ್ಯರ ಸಲಹಾ ಸಮಿತಿಯನ್ನೂ ಕೂಡಾ ರಚಿಸಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಈ ಸಮಿತಿ ನ್ಯಾಯಾಂಗದ ಹೋರಾಟಕ್ಕೆ ಕಾರ್ಯತಂತ್ರಗಳನ್ನು ರೂಪಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಗಡಿ ವ್ಯಾಜ್ಯ ವಿಚಾರಣೆಯ ಮೇಲುಸ್ತುವಾರಿಗಾಗಿ ಇಬ್ಬರು ಸಚಿವರ ಸಮಿತಿಯನ್ನು ಕೂಡಾ ಮಹಾರಾಷ್ಟ್ರ ಸರ್ಕಾರ ರಚಿಸಿದೆ. ಆದರೆ, ಕರ್ನಾಟಕ ಸರ್ಕಾರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರದಷ್ಟೇ ಮುತುವರ್ಜಿ ವಹಿಸಿಲ್ಲ ಎನ್ನುವುದು ವಿಷಾದನೀಯವಾದರೂ ವಾಸ್ತವವಾಗಿದೆ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

‘ನಾನು ಮುಖ್ಯಮಂತ್ರಿ ಆಗಿದ್ದಾಗ 2015ರಲ್ಲಿ ಎಚ್.ಕೆ. ಪಾಟೀಲ ಅವರನ್ನು ಗಡಿಭಾಗದ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ್ದೆ. ಆದರೆ, ಈಗಿನ ಸರ್ಕಾರದಲ್ಲಿ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸದೆ ನಿರ್ಲಕ್ಷ್ಯ ತೋರಿದೆ. ಇಷ್ಟು ಮಾತ್ರವಲ್ಲ ಗಡಿ ಸಂರಕ್ಷಣಾ ಸಮಿತಿ ಕೂಡಾ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಭೆ ನಡೆಸದೆ ನಿಷ್ಕ್ರೀಯವಾಗಿದೆ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರು ಸೇರಿದಂತೆ ಸಮಿತಿಯ ಇಬ್ಬರು ಸದಸ್ಯರು ಮೃತರಾಗಿದ್ದಾರೆ. ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್ರಚಿಸುವ ಜೊತೆಯಲ್ಲಿ ಉನ್ನತಾಧಿಕಾರದ ಸಮಿತಿಯನ್ನು ರಚಿಸುವಂತೆ ಕನ್ನಡ ಸಂಘಟನೆಗಳ ಬೇಡಿಕೆಯನ್ನೂ ಕೂಡಾ ರಾಜ್ಯ ಸರ್ಕಾರ ಈಡೇರಿಸಿಲ್ಲ’

‘ಕೇಂದ್ರ ಸರ್ಕಾರವೇ ನೇಮಿಸಿರುವ ಮಹಾಜನ ಆಯೋಗದ ವರದಿಯೇ ಅಂತಿಮ, ಆಯೋಗದ ಶಿಫಾರಸಿಗೆ ಕರ್ನಾಟಕ ಬದ್ದವಾಗಿದ್ದು ಅದಕ್ಕಿಂತ ಹೊರತಾದ ಯಾವುದೇ ಬದಲಾವಣೆಯನ್ನು ಕರ್ನಾಟಕ ಒಪ್ಪುವುದಿಲ್ಲ ಎನ್ನುವುದು ಈವರೆಗಿನ ಎಲ್ಲ ರಾಜ್ಯ ಸರ್ಕಾರಗಳ ನಿಲುವು. ಗಡಿ ವಿವಾದವನ್ನು ತೀರ್ಮಾನಿಸಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ನ್ಯಾಯಾಲಯ ಅಲ್ಲ ಎನ್ನುವುದು ಕರ್ನಾಟಕ ಸರ್ಕಾರದ ನಿಲುವು. ಕರ್ನಾಟಕಕ್ಕೆ ಸೇರಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಗೆ ಮೊರೆ ಹೋದ ದಿನದಿಂದ ಇದು ನಮ್ಮ ನಿಲುವಾಗಿದೆ. ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಇದೇ ನಿಲುವನ್ನು ವ್ಯಕ್ತಪಡಿಸುತ್ತಾ ಬಂದಿದೆ’

‘ಬೆಳಗಾವಿ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ದಾವೆ ಪುರಸ್ಕಾರ ಯೋಗ್ಯ ಅಲ್ಲ ಎಂದು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥವಾಗುವವರೆಗೆ ಸಾಕ್ಷಿದಾರರ ಪಾಟಿ ಸವಾಲು ದಾಖಲಾತಿ ನಡೆಸದಂತೆ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿಯನ್ನೂ ಕೂಡಾ ಹಿಂದೆ ರಾಜ್ಯ ಸರ್ಕಾರ ಸಲ್ಲಿಸಿತ್ತು. ಈ ನಿಲುವಿಗೆ ರಾಜ್ಯ ಸರ್ಕಾರ ಬದ್ದವಾಗಿರಬೇಕು‘ ಎಂದೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ನೆಲ-ಜಲ-ಭಾಷೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ನ್ಯಾಯಬದ್ದವಾದ ಎಲ್ಲ ಕ್ರಮಗಳನ್ನು ನಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನ್ಯಾಯಬದ್ದವಾಗಿ ಕರ್ನಾಟಕಕ್ಕೆ ಸೇರಿರುವ ಒಂದಿಂಚು ಭೂಮಿ, ಒಂದು ಹನಿ ನೀರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ನಮ್ಮ ನಿಲುವಾಗಬೇಕು. ನಾನು ನನ್ನ ರಾಜಕೀಯ ಜೀವನದ ಆರಂಭದ ದಿನಗಳಲ್ಲಿಯೇ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾದವನು. ಮುಖ್ಯಮಂತ್ರಿಯಾಗಿಯೂ ಸಮಸ್ತ ಕರ್ನಾಟಕದ ಹಿತಾಸಕ್ತಿಯ ಕಾವಲುಗಾರನ ಕೆಲಸ ಮಾಡಿದ್ದೇನೆ. ಬೆಳಗಾವಿ ಗಡಿ ವಿವಾದದ ನ್ಯಾಯಾಂಗ ಹೋರಾಟವನ್ನು ಈಗಿನ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದು ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳ ಆರೋಪವೂ ಆಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT