ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಗಡಿ ವಿವಾದ : ಅತ್ತ ‘ಮಹಾ’ ಸಿದ್ಧತೆ, ಇತ್ತ ಗಾಢ ನಿದ್ದೆ

ಸಮರ್ಥ ವಾದಕ್ಕೆ ಏಕನಾಥ ಶಿಂಧೆ ತಯಾರಿ, ಎಚ್ಚೆತ್ತುಕೊಳ್ಳದ ಕರ್ನಾಟಕ ಸರ್ಕಾರ
Last Updated 22 ನವೆಂಬರ್ 2022, 5:12 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಆದರೆ, ಕರ್ನಾಟಕ ಸರ್ಕಾರ ತುರ್ತು ಸಿದ್ಧತೆಗಳನ್ನೂ ಮಾಡಿಕೊಳ್ಳದಿರುವುದು ಗಡಿ ಕನ್ನಡಿಗರು ಹಾಗೂ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ.

1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ. ಗಡಿ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ ತೆಗೆದುಕೊಳ್ಳಬೇಕೇ– ಬೇಡವೇ ಎಂಬ ವಿಚಾರವಾಗಿ ನವೆಂಬರ್ 23ರಂದು ಅಂತಿಮ ವಿಚಾರಣೆ ನಡೆಯಲಿದೆ.

ಇದೇ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಸೋಮವಾರ ಉನ್ನತ ಮಟ್ಟದ ಸಮಿತಿ ಸಭೆ ಕೂಡ ನಡೆಯಿತು. ಎಲ್ಲ ಪಕ್ಷಗಳ ನಾಯಕರೂ ಸಭೆಯಲ್ಲಿ ಪಾಲ್ಗೊಂಡರು.

‘ಮಹಾರಾಷ್ಟ್ರದಿಂದ ಸಮರ್ಥವಾಗಿ ವಾದ ಮಂಡಿಸಬೇಕು, ಅದಕ್ಕೆ ತಮ್ಮ ಬೆಂಬಲವಿದೆ’ ಎಂದು ಸಹಮತವನ್ನೂ ಸಭೆಯಲ್ಲಿ ನೀಡಲಾಗಿದೆ. ಅಲ್ಲದೇ, ವಿಚಾರಣೆ ಮುಗಿದ ಬಳಿಕ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಕುರಿತೂ ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಸಿದ್ಧತೆ ಮಾಡಿಕೊಳ್ಳದ ರಾಜ್ಯ ಸರ್ಕಾರ: ‘ಕರ್ನಾಟಕ ಸರ್ಕಾರದಿಂದ ಮಾಡಿಕೊಂಡ ಸಿದ್ಧತೆಗಳು ಏನು ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಮಹಾರಾಷ್ಟ್ರದಂತೆ ಇಲ್ಲಿ ಒಂದು ಉನ್ನತ ಮಟ್ಟದ ಸಮಿತಿಯೇ ಇಲ್ಲ. 2018ರ ನಂತರ ಇಲ್ಲಿಯವರೆಗೆ ಗಡಿ ಉಸ್ತುವಾರಿ ಸಚಿವರನ್ನೂ ನೇಮಿಸಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ದೂರಿದ್ದಾರೆ.

‘ಗಡಿ ಸಂರಕ್ಷಣಾ ಆಯೋಗವೂ ನಿಷ್ಕ್ರಿಯವಾಗಿದೆ. ಅದರ ಅಧ್ಯಕ್ಷರಾಗಿದ್ದ ಮಂಜುನಾಥ ಅವರು ಹಾಗೂ ಹಿರಿಯ ಸದಸ್ಯ ಬೆಂಗೇರಿ ಅವರು ಆರು ತಿಂಗಳ ಹಿಂದೆ ನಿಧನರಾಗಿದ್ದಾರೆ. ಬಳಿಕ ಯಾರನ್ನೂ ನೇಮಕ ಮಾಡಿಲ್ಲ. ಈಗ ಬೆಳಗಾವಿಯ ಇಬ್ಬರು ಸದಸ್ಯರು ಮಾತ್ರ ಇದ್ದಾರೆ. ಸಿ.ಎಂ ಬಸವರಾಜ ಬೊಮ್ಮಾಯಿ ಅವರಿಗೆ ಗಡಿ ವಿಚಾರದಲ್ಲಿ ಸಾಕಷ್ಟು ಜ್ಞಾನವಿದೆ. ಆದರೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಅವರು ಇದೂವರೆಗೆ ಇಂಥ ಯಾವುದೇ ಹೆಜ್ಜೆ ಇಟ್ಟಿಲ್ಲ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ತಂಟೆ ಏನು?

ಭಾಷಾವಾರು ಪ್ರಾಂತ್ಯ ರಚನೆಗೆ 1953ರಲ್ಲಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆಯಾಯಿತು. ಈ ಸಮಿತಿ ನೀಡಿದ ವರದಿಯ ಪ್ರಕಾರ; ಮುಂಬೈ ಪ್ರಾಂತ್ಯದಲ್ಲಿದ್ದ 865 ಗ್ರಾಮಗಳು (ಬೆಳಗಾವಿಯೂ ಸೇರಿ) ಆಗಿನ ಮೈಸೂರು ರಾಜ್ಯಕ್ಕೆ ಸೇರಿದವು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ 1966ರಲ್ಲಿ ನ್ಯಾ.ಮೆಹರ್‌ಚಂದ್ ಮಹಾಜನ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು.

ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ ಸಮಿತಿ ಕೂಡ ವರದಿ ಸಲ್ಲಿಸಿತು.

ಈ ವರದಿಯನ್ನೂ ಒಪ್ಪದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಬೆಳಗಾವಿ, ಬೀದರ, ಬಾಲ್ಕಿ, ಕಾರವಾರ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ವಾದ. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಕೂಡ ಬೆಂಬಲವಾಗಿ ನಿಂತಿದೆ.

ಆಸ್ಥೆ ವಹಿಸಿದ ಶಿಂಧೆ

ಮಹಾರಾಷ್ಟ್ರ ಸಿ.ಎಂ ಏಕನಾಥ ಶಿಂಧೆ ಅವರು ಗಡಿ ತಂಟೆ ವಿಚಾರದಲ್ಲಿ ಅವರು ಆಸ್ಥೆ ವಹಿಸಿದ್ದಾರೆ.

ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ; ಈ ಇಬ್ಬರನ್ನೂ ಗಡಿ ಉಸ್ತುವಾರಿ ಸಚಿವರಾಗಿಯೂ ನಿಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT