ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಯುನಿಂದ ‘ನಮ್ಮ ಮತಗಳು ಮಾರಾಟಕ್ಕಿಲ್ಲ’ ಆಂದೋಲನ ಅ.1ರಿಂದ

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್‌ ಹೇಳಿಕೆ
Last Updated 26 ಆಗಸ್ಟ್ 2022, 14:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ಜನ್ಮದಿನವಾದ ಅ.1ರಿಂದ ‘ನಮ್ಮ ಮತಗಳು ಮಾರಾಟಕ್ಕಿಲ್ಲ’ ಎಂಬ ಆಂದೋಲನವನ್ನು ಆರಂಭಿಸಲಾಗುತ್ತಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್‌ ಮಾಹಿತಿ ನೀಡಿದರು.

‘ಈ ಆಂದೋಲನವನ್ನು ಕಾರಣಾಂತರಗಳಿಂದ ಕೆಲ ವರ್ಷ ನಡೆಸಲು ಸಾಧ್ಯವಾಗಿರಲಿಲ್ಲ. ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆಂದೋಲನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ಬಳಿಕ ರಾಜ್ಯದ ಎಲ್ಲೆಡೆಗೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಸಜ್ಜಾಗುತ್ತಿದೆ. ಸಮಾನ ಆಶಯಗಳನ್ನು ಹೊಂದಿದ ರಾಜಕೀಯ ಪಕ್ಷ ಹಾಗೂ ಸಂಘಟನೆಗಳೊಂದಿಗೆ ಚರ್ಚಿಸಲು ಉತ್ಸುಕವಾಗಿದೆ. ಕನ್ನಡಪರ ಸಂಘಟನೆ, ರೈತ ಸಂಘ ಹಾಗೂ ಆಮ್‌ ಆದ್ಮಿ ಪಕ್ಷದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 1983ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಮಾನ ಆಶಯ ಹೊಂದಿದ ಸಂಘ–ಸಂಸ್ಥೆಗಳ ಕೊಡುಗೆ ಅಪಾರ’ ಎಂದರು.

‘ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಖರಿ ಮತದಾರರಲ್ಲಿ ಬೇಸರ ಮೂಡಿಸಿದೆ. ಇಡೀ ದೇಶ ಪರ್ಯಾಯ ರಾಜಕಾರಣದತ್ತ ನೋಡುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಭರವಸೆಯ ಹೆಜ್ಜೆ ಇಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಪರ್ಯಾಯ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆ ನಿಶ್ಚಳವಾಗಿದೆ. ಈ ಬಗ್ಗೆ ದೇಶದ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ’ ಎಂದು ಹೇಳಿದರು.

‘ಪ್ರತಿಪಕ್ಷದ ನಾಯಕರು ಒಗ್ಗೂಡಲು ಇಂದಿರಾಗಾಂಧಿ 1975ರಲ್ಲಿ ಕಾರಣರದಾರು. ಆಗ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸೇತರ ಸರ್ಕಾರ ದೇಶದಲ್ಲಿ ರಚನೆಯಾಯಿತು. ಇಂತಹದೇ ಪರಿಸ್ಥಿತಿ ದೇಶದಲ್ಲಿ ಸೃಷ್ಟಿಯಾಗಿದೆ. ಪರ್ಯಾಯ ರಾಜಕೀಯ ಶಕ್ತಿ ಹೊರಹೊಮ್ಮಲು ಬಿಜೆಪಿ ಕಾರಣವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಜನಾದೇಶ ಹೊಂದಿದ ರಾಜ್ಯ ಸರ್ಕಾರಗಳನ್ನು ಮುಗಿಸಿಹಾಕಲು ಬಿಜೆಪಿ ಹವಣಿಸುತ್ತಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸಫಲವಾದ ಬಿಜೆಪಿಗೆ ಬಿಹಾರದಲ್ಲಿ ಸಾಧ್ಯವಾಗಲಿಲ್ಲ. ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ (ಐಟಿ) ಹಾಗೂ ಸಿಬಿಐಗಳನ್ನು ವಿರೋಧ ಪಕ್ಷಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಕೆಜಿಎಲ್ ರವಿಪ್ರಕಾಶ್, ಶಿವರಾಂ, ಕಾರ್ತಿಕ್, ರಮೇಶ್, ಶಿವಮೂರ್ತಿ ಇದ್ದರು.

***

ವಿರೋಧ ಪಕ್ಷದ ನಾಯಕರ ಮನೆ ಮೇಲೆ ಮಾತ್ರ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಿವೆ. ಹಾಗಿದ್ದರೆ ಆಡಳಿತ ಪಕ್ಷದ ಎಲ್ಲರೂ ಸರಿಯಾಗಿ ಇದ್ದಾರೆಯೇ?
–ಮಹಿಮಾ ಪಟೇಲ್‌,ಜೆಡಿಯು ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT