ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಬೆಸ್ತರ ಬಲೆಯಲ್ಲಿ ಅಳಿವಿನಂಚಿನ ಮಹಶೀರ್ ಮೀನು

Last Updated 26 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಸಿದ್ದಾಪುರ (ಕೊಡಗು ಜಿಲ್ಲೆ): ಅಳಿವಿನಂಚಿನ ಮಹಶೀರ್ ಮೀನು ಬೆಸ್ತರ ಬಲೆ ಸೇರುತ್ತಿದ್ದು, ನೂರಾರು ಮೀನುಗಳ ಮಾರಾಟ ನಿರಂತರವಾಗಿ ನಡೆಯುತ್ತಿದೆ.

ಸಿದ್ದಾಪುರದ ಅರೆಕಾಡು ಗ್ರಾಮದ ಮಧುರಕೂಪು ಎಂಬಲ್ಲಿ ಹದಿನೈದು ದಿನಗಳಿಂದ ಸುಮಾರು 30 ಬೆಸ್ತರು ಠಿಕಾಣಿ ಹೂಡಿ ಕಾವೇರಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದು, ನೆಲ್ಯಹುದಿಕೇರಿ, ಸಿದ್ದಾಪುರ ಭಾಗದಲ್ಲಿ ಮಾರುತ್ತಿದ್ದಾರೆ ಎಂದು ಮೀನು ಪ್ರೇಮಿಗಳಾದ ಎಚ್.ರಶೀರ್ ಕವಿರಾಜ್, ಎನ್.ಬಿ.ಪವಿನ್ ದೂರಿದ್ದಾರೆ. ಮಹಶೀರ್ ಹಿಡಿಯುವುದನ್ನು ಸರ್ಕಾರ ಅಪರಾಧ ಎಂದು ಘೋಷಿಸಿದೆ.

ಸಂಪೂರ್ಣ ಬೆಳೆದ ಮೀನು ಸುಮಾರು 60 ಕೆ.ಜಿ ತೂಕ ಇರುತ್ತದೆ. ದೇಶದ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು. ದಕ್ಷಿಣದಲ್ಲಿ ವಿರಳ. ಪ್ರವಾಹದ ಸಂದರ್ಭ ವಿರುದ್ಧ ದಿಕ್ಕಿನಲ್ಲಿ ಈಜುವ ಸಾಮರ್ಥ್ಯ ಹೊಂದಿದೆ.

ರಾಜ್ಯದ ಏಕೈಕ ಮಹಶೀರ್ ಮೀನು ತಳಿ ಉತ್ಪಾದನಾ ಕೇಂದ್ರ ಹಾರಂಗಿಯಲ್ಲಿದ್ದು, ಉತ್ಪಾದಿಸಲಾದ ಮರಿಗಳನ್ನು ಪ್ರತಿವರ್ಷ ಕಾವೇರಿ ನದಿ ಭಾಗದಲ್ಲಿ ಬಿಡಲಾಗುತ್ತಿದೆ. ಕೇಂದ್ರದಲ್ಲಿ ಪ್ರತಿ ವರ್ಷವೂ 30-35 ಸಾವಿರ ಮೀನು ಉತ್ಪಾದನೆಯಾಗುತ್ತಿದ್ದು, ಕಾವೇರಿ ನದಿ, ರೈತರ ಕೆರೆ ಹಾಗೂ ಹೊರ ರಾಜ್ಯಕ್ಕೂ ಒದಗಿಸಲಾಗುತ್ತಿದೆ. ಸದ್ಯ, ಹಾರಂಗಿ ಕೇಂದ್ರದ ಅಧಿಕಾರಿ ಮಹದೇವ್ ಸ್ಥಳಕ್ಕೆ ಭೇಟಿ ನೀಡಿ ಬೆಸ್ತರಿಗೆ ಎಚ್ಚರಿಕೆ ನೀಡಿದ್ದಾರೆ.

‘ಮೀನು ಸಿಕ್ಕಿದ ಕೂಡಲೇ ನದಿಗೆ ಬಿಡುತ್ತಿದ್ದೇವೆ’
ಸರ್ಕಾರ ಮಹಶೀರ್ ತಳಿಯ ಉತ್ಪಾದನೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಬೆಸ್ತರು ಕಳೆದ 15 ದಿನಗಳಿಂದ ನೂರಾರು ಮಹಶೀರ್ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದು, ಮೀನಿನ ಮಹತ್ವದ ಬಗ್ಗೆ ಮಾಹಿತಿ ನೀಡಿದ್ದೇವೆ. ಬಳಿಕ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ನಾವು ಗಾಣ ಹಾಕುವ ಸಂದರ್ಭ ಮಹಶೀರ್ ಸಿಕ್ಕಿದ ಕೂಡಲೇ ನದಿಗೆ ಬಿಡುತ್ತಿದ್ದೇವೆ.
–ಕವಿರಾಜ್,ಮೀನು ಪ್ರೇಮಿ, ಸಿದ್ದಾಪುರ.

**
‘ಮೀನಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ’
ನದಿ ಹಾಗೂ ಮಹಶೀರ್ ಮೀನು ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಗೆ ಸಿದ್ದಾಪುರದಿಂದ ಶಿರಂಗಾಲದವರೆಗೆ ಸುಮಾರು 35 ಕಿ.ಮೀ ಗುತ್ತಿಗೆ ನೀಡಿದೆ. ಈ ಭಾಗದಲ್ಲಿ ಮೂವರು ಕಾವಲುಗಾರರು ಇದ್ದು, ನಿತ್ಯ ಮೀನುಗಾರಿಕೆ ನಡೆಯದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಮಹಶೀರ್ ಮೀನಿನ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಜನರು ಕೈಜೋಡಿಸಬೇಕು.
–ಸಿ.ಪಿ.ಅಯ್ಯಪ್ಪ,ಅಧ್ಯಕ್ಷ, ಮೀನಿನ ಉಪಸಮಿತಿ, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ, ಕೊಡಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT