ಮಂಗಳವಾರ, ಮೇ 24, 2022
27 °C

ಪ್ರಜಾವಾಣಿ ಸಂವಾದ: ತಂತ್ರಜ್ಞಾನದ ಕೇಂದ್ರಗಳಾಗಿ ಪ್ರಮುಖ ನಗರಗಳು, ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳನ್ನು ತಂತ್ರಜ್ಞಾನದ ಕೇಂದ್ರಗಳನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲಿದ್ದು, ‘ಬೆಂಗಳೂರು ತಂತ್ರಜ್ಞಾನ ಶೃಂಗ’ ಇದಕ್ಕೆ ನೆರವಾಗಲಿದೆ ಎಂದು ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ಉದ್ದೇಶ ದಿಂದ ಬೆಂಗಳೂರು ಬಿಟ್ಟು ರಾಜ್ಯದ ಇತರ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸುವವರಿಗೆ ವಿವಿಧ ರೀತಿಯ ರಿಯಾಯ್ತಿಗಳನ್ನು ನೀಡಲಾಗುತ್ತಿದೆ ಎಂದರು.

‘ಬೆಂಗಳೂರಿನಿಂದಾಚೆ ಉದ್ಯಮ ಬೆಳೆಸುವ ನಮ್ಮ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ವಿಶೇಷವಾಗಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಬಿಗ್‌ ಡೇಟಾ, ಸೆಮಿಕಂಡಕ್ಟರ್‌, ಸೈಬರ್‌ ಸೆಕ್ಯುರಿಟಿ ಮುಂತಾದವು ಹಲವು ನಗರಗಳಲ್ಲಿ ನೆಲೆ ನಿಲ್ಲುತ್ತಿವೆ. ಸೆಮಿಕಂಡಕ್ಟರ್‌ ವಿನ್ಯಾಸ ಮತ್ತು ತಯಾರಿಕೆ ಕ್ಷೇತ್ರದ ಮೇಲೆ ಹೂಡಿಕೆ ಮಾಡುವವರಿಗೆ ಭೂಮಿ, ಹೂಡಿಕೆ ಪ್ರಮಾಣದ ಮೇಲಿರುವ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗುವುದು. ದೇವನಹಳ್ಳಿ ಸಮೀಪದಲ್ಲಿ ಸೆಮಿಕಂಡಕ್ಟರ್‌ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದರು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನ, ವೈಮಾನಿಕ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿಯೂ ಬೆಂಗಳೂರು ರೂಪುಗೊಂಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಅವಕಾಶಗಳು ಸೃಷ್ಟಿಯಾಗಲಿವೆ. ಒಟ್ಟಾರೆ ತಂತ್ರಜ್ಞಾನ ಕ್ಷೇತ್ರದಿಂದ ಮುಂಬರುವ ವರ್ಷಗಳಲ್ಲಿ 2 ಲಕ್ಷದಿಂದ 3 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೌಶಲ್ಯ ಅಭಿವೃದ್ಧಿಗೆ ಒತ್ತು: ರಾಜ್ಯದಲ್ಲಿ ಸ್ಥಾಪನೆಯಾಗುವ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಮತ್ತು ಉದ್ಯಮಗಳಿಗೆ ಪೂರಕವಾಗಿ ಸರ್ಕಾರಿ ತಂತ್ರಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಹಲವು ಉದ್ಯಮಗಳ ಜತೆಯಲ್ಲಿ ಒಪ್ಪಂದವನ್ನೂ ಮಾಡಿ ಕೊಳ್ಳಲಾಗಿದೆ. ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ ಅವಧಿಯನ್ನು 30 ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಸೂಪರ್‌ 30 ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕಾಲೇಜು ಮತ್ತು ಕಂಪನಿಗಳ ಜಂಟಿ ಪಾಲುದಾರಿಕೆ ಇದೆ. ಉದ್ಯಮ ಮತ್ತು ಕಾಲೇಜುಗಳನ್ನು ಹತ್ತಿರಕ್ಕೆ ತಂದಿದ್ದೇವೆ ಎಂದರು.

l ಬೆಂಗಳೂರು ತಂತ್ರಜ್ಞಾನ ಶೃಂಗ ನ.17 ರಿಂದ 19 ರವರೆಗೆ ನಡೆಯಲಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದಾರೆ.

l ಈ ಬಾರಿ 75 ಕ್ಕೂ ಹೆಚ್ಚು ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು, 300 ಕ್ಕೂ ಹೆಚ್ಚು ಪ್ರಮುಖ ಕಂಪನಿಗಗಳು ಭಾಗವಹಿಸಲಿವೆ. 20 ಸಾವಿರಕ್ಕೂ ಹೆಚ್ಚು ವಾಣಿಜ್ಯ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. 5 ರಿಂದ 10 ಲಕ್ಷ ಜನ ವರ್ಚ್ಯುವಲ್‌ ಆಗಿ ಭಾಗವಹಿಸುವ ನಿರೀಕ್ಷೆ ಇದೆ.

ಉನ್ನತ ಶಿಕ್ಷಣ: ಪ್ರತಿ ವರ್ಷವೂ ಬೋಧಕರ ನೇಮಕ

ಉನ್ನತ ಶಿಕ್ಷಣದಲ್ಲಿ ಬೋಧಕರ ಕೊರತೆಯನ್ನು ನೀಗಿಸಲು ಪ್ರತಿ ವರ್ಷವೂ ಬೋಧಕರ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ನೇಮಕಾತಿ ತಡ ಮಾಡುವುದರಿಂದ ಪ್ರತಿಭಾವಂತರು ಬೇರೆ ಉದ್ಯೋಗಗಳಿಗೆ ಹೋಗುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

ವಿವಿಧ ವಿಶ್ವವಿದ್ಯಾಲಯಗಳು ಸೇರಿ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪ್ರತಿಭಾವಂತ ಬೋಧಕರ ನೇಮಕ ಅತ್ಯಗತ್ಯ. 300 ಬೋಧಕರ ಹುದ್ದೆಗಳನ್ನು ಬಿಟ್ಟು ಉಳಿದ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿ ಮಾಡಿಲ್ಲ. ಬೋಧಕರಿಗೆ ಸಾಕಷ್ಟು ತರಬೇತಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ಕನ್ನಡದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಆರಂಭಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಬೋಧಕರನ್ನು ಇದಕ್ಕಾಗಿ ಅಣಿಗೊಳಿಸಲಾಗುತ್ತಿದೆ. ಹಿಂದೆ ಯಾರೂ ಈ ನಿಟ್ಟಿನಲ್ಲಿ ಯೋಚಿಸಿರಲಿಲ್ಲ. ಇದರಿಂದ ಕನ್ನಡದ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.