ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ಗಾಂಧಿ ಬಿಡುಗಡೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

Last Updated 6 ಅಕ್ಟೋಬರ್ 2021, 7:59 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸಚಿವರ ವಾಹನ ಹರಿದು ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಸರ್ಕಾರ ಅಕ್ರಮ ಬಂಧನದಲ್ಲಿರಿಸಿದ್ದು, ತಕ್ಷಣ ಬಿಡುಗಡೆ ಮಾಡಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಲು ಹೊರಟಿದ್ದ ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶ ಸರ್ಕಾರ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ. ಇದು ಕಾನೂನುಬಾಹಿರ ನಡೆ. ಪ್ರಿಯಾಂಕಾ ಅವರ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ' ಎಂದರು.

‘ಪ್ರಿಯಾಂಕಾ ಅವರ ಬಂಧನ ಅಕ್ರಮ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೇಳಿದ್ದಾರೆ. ಆದರೆ,ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಮೌನ‌ ಮುರಿದಿಲ್ಲ. ತಮ್ಮ ಸಂಪುಟದ ಸದಸ್ಯರೇ ವಾಹನ ಹರಿಸಿ ರೈತರನ್ನು ಹತ್ಯೆ ಮಾಡಿದ್ದರೂ ಪ್ರಧಾನಿ ತುಟಿ ಬಿಚ್ಚಿಲ್ಲ' ಎಂದು ಹೇಳಿದರು.

ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ. ಸಂತ್ರಸ್ತರಿಗೆ ಸಾಂತ್ವನ ಹೇಳಲು ಮುಂದಾಗಿದೆ. ರಾಜಕೀಯ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದರು.

ರೈತರ ಮೇಲೆ ದಾಳಿಗೆ ಬಿಜೆಪಿ ಮೊದಲೇ ಸಂಚು ರೂಪಿಸಿತ್ತು. ದಾಳಿಯ ಕುರಿತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮಗ ಮೊದಲೇ ಎಚ್ಚರಿಕೆ ನೀಡಿದ್ದ. ಈಗ ಆತನ ನೇತೃತ್ವದಲ್ಲೇ ದಾಳಿ ನಡೆಸಲಾಗಿದೆ. ಅಜಯ್ ಮಿಶ್ರಾ ಕೂಡ ದಾಳಿಯ ವೇಳೆ ಇದ್ದರು. ಈ ಎಲ್ಲವನ್ನೂ ಸ್ಥಳದಲ್ಲಿದ್ದ ರೈತರು ಹೇಳಿದ್ದಾರೆ. ಆದರೂ, ಅಜಯ್ ಮಿಶ್ರಾ ಬಂಧನ ಏಕೆ ಆಗಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.

ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನಾನಿರತ ರೈತರ ಮೇಲೆ ದಾಳಿ ನಡೆಸುವಂತೆ ಹರ್ಯಾಣ ಮುಖ್ಯಮಂತ್ರಿ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಇದಕ್ಕಾಗಿ 7,000 ಕಾರ್ಯಕರ್ತರನ್ನು ತಯಾರಿ ಮಾಡಲು ಸೂಚಿಸಿರುವುದು ಬಹಿರಂಗವಾಗಿದೆ. ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಕುಮ್ಮಕ್ಕು ನೀಡಿ ರೈತರ ಮೇಲೆ ದಾಳಿ ಮಾಡಿಸುತ್ತಿದೆ ಎಂದು ಆರೋಪಿಸಿದರು.

ಘಟನೆಯ ಕುರಿತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಅಕ್ರಮವಾಗಿ ಬಂಧನದಲ್ಲಿ ಇರಿಸಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತ ರೈತ ಕುಟುಂಬಗಳ ಭೇಟಿಗೆ ಕೆಲವು ಪಕ್ಷಗಳ ಮುಖಂಡರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಕಾಂಗ್ರೆಸ್ ಮಾತ್ರ ಏಕೆ ಅವಕಾಶ ನೀಡುತ್ತಿಲ್ಲ? ಕಾಂಗ್ರೆಸ್ ಪಕ್ಷದ ವಿರುದ್ಧ ಸಂಚು ನಡೆಸಲಾಗುತ್ತಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT