ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ದಲಿತ ಸಮಾವೇಶ: ಮಲ್ಲಿಕಾರ್ಜುನ ಖರ್ಗೆ ಭಾಗಿ- ಪರಮೇಶ್ವರ

Last Updated 7 ಡಿಸೆಂಬರ್ 2022, 9:21 IST
ಅಕ್ಷರ ಗಾತ್ರ

ಬೆಂಗಳೂರು: 'ಎಲ್ಲ ದಲಿತರನ್ನು ಒಂದು ವೇದಿಕೆಯಲ್ಲಿ ತರಬೇಕೆಂಬ ಉದ್ದೇಶದಿಂದ ಚಿತ್ರದುರ್ಗದಲ್ಲಿ ಜ. 8ರಂದು ದಲಿತ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲಿದ್ದಾರೆ' ಎಂದು ಕಾಂಗ್ರೆಸ್ ಶಾಸಕ ಜಿ. ಪರಮೇಶ್ವರ ಹೇಳಿದರು‌.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 'ಕಾರ್ಯಕ್ರಮದಲ್ಲಿ ಖರ್ಗೆ ಅವರನ್ನು ಸನ್ಮಾನಿಸಲಾಗುವುದು.‌ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಲ್ಲವೇ ಸೋನಿಯಾ ಗಾಂಧಿ ಪೈಕಿ ಯಾರಾದರೊಬ್ಬರು ಭಾಗವಹಿಸುವ ನಿರೀಕ್ಷೆಯಿದೆ. ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಎಂ.ಬಿ. ಪಾಟೀಲ ಭಾಗವಹಿಸಲಿದ್ದಾರೆ ಎಂದರು.

'ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ನಮ್ಮನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿದೆ. ಎಸ್‌ಟಿಯಲ್ಲಿ 51 ಜಾತಿ, ಎಸ್‌ಸಿಯಲ್ಲಿ 101ಪಂಗಡಗಳು ಇವೆ.‌ರಾಜ್ಯದಲ್ಲಿ ಶೇ 24.1 ನಮ್ಮ ಜನಸಂಖ್ಯೆ ಇದೆ' ಎಂದರು.

'ಶೋಷಿತ ಸಮುದಾಯಗಳು ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟುಕೊಂಡೇ ಬಂದಿವೆ.‌ಕಾಂಗ್ರೆಸ್ ಕೂಡ ದಲಿತರ ಕ್ಷೇಮಾಭಿವೃದ್ಧಿಗೆ ಅನೇಕ ಕಾನೂನು ತರಲಾಗಿದೆ. ರಾಜ್ಯದಲ್ಲಿ ಬಡತನ ರೇಖೆಯಿಂದ ಹೊರಗೆ ತರಲು ಕಾನೂನಾತ್ಮಕವಾಗಿ ಮಾಡಿಕೊಂಡೇ ಬಂದಿದ್ದೇವೆ.‌ ಬೇರೆ ಬೇರೆ ಪಕ್ಷಗಳು ಅವರ ಮನವೊಲಿಕೆಗೆ ಯತ್ನಿಸುತ್ತಿವೆ. ಅವರ ಯೋಗಕ್ಷೇ‌ಮಕ್ಕೆ ಬೇರೆ ಪಕ್ಷಗಳು ಕೆಲಸ ಮಾಡಲಿಲ್ಲ.‌ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿಕೊಂಡಿಲ್ಲ. ಇಂದು ಅಂತಹ ಪಕ್ಷಗಳ ನಾಯಕರು ಇದ್ದಕಿದ್ದಂತೆ ಅವರ ಮನೆಯಲ್ಲಿ ಮಲಗೋದಕ್ಕೆ ಹೋಗುತ್ತಿದ್ದಾರೆ.‌ಹೊಟೇಲ್ ನಿಂದ ಊಟ ತರಿಸಿಕೊಂಡು ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ. ದಲಿತ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗುತ್ತಿದೆ' ಎಂದರು.

'ದಲಿತರ ಮನೆಗೆ ಹೋಗಿ ದಳದವರು ಮಲಗುತ್ತಾರೆ. ಬಿಜೆಪಿಯವರು ಹೋಗಿ ಮಲಗುತ್ತಾರೆ. ಎಷ್ಟು ದಿನ ಈ ನಾಟಕ ನಡೆಯಲಿದೆ. ಯಾರೂ ಈ ನಾಟಕಕ್ಕೆ ಬಲಿಯಾಗಬೇಡಿ. ನಾವು ಇದ್ದೇವೇ ಎಂದು ಸಂದೇಶ ಕೊಡಲು ಸಮಾವೇಶ ಮಾಡುತ್ತಿದ್ದೇವೆ' ಎಂದರು.

'ಮೀಸಲಾತಿ‌ ಭಿಕ್ಷೆ ಅಲ್ಲ ಅದು ನಮ್ಮ ಹಕ್ಕು./ಇತ್ತೀಚೆಗೆ ಅನೇಕ ಟೀಕೆ ಟಿಪ್ಪಣಿ ಕೇಳಿ ಬರುತ್ತಿದೆ. ಆದರೆ ಅಸ್ಪೃಶ್ಯತೆ ಇರುವವರೆಗೆ ಮೀಸಲಾತಿ ಇರಲಿದೆ. ಮೀಸಲಾತಿ ಪರ, ವಿರೋಧದ ಚರ್ಚೆ ನಡೆಯುತ್ತಿದೆ.‌ಸಿದ್ದರಾಮಯ್ಯ ಅವಧಿಯಲ್ಲಿ ಎಸ್‌ಸಿ‌, ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಕಾನೂನು ಮಾಡಲಾಗಿತ್ತು . ಬಜೆಟ್ ಗೆ ಅನುಗುಣವಾಗಿ ಎಸ್ಇಪಿಟಿಎಸ್‌ಪಿ 30 ಸಾವಿರ ಕೋಟಿ ಹಣ ಇಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಾನೂನನ್ನಹ ಗಾಳಿಗೆ ತೂರಿದೆ. ಎಂದು ದೂರಿದರು.

ದಲಿತರ ದೇಗುಲ ಪ್ರವೇಶಕ್ಕೆ ದೌರ್ಜನ್ಯ ನಡೆದಿದೆ.‌ನಾವು ಅಸ್ಪೃಶ್ಯತೆ ಕಾಯ್ದೆಯನ್ನ ಜಾರಿಗೆ ತಂದಿದ್ದೇವೆ. ಕಾನೂನು ಸಮರ್ಪಕವಾಗಿ ಅನುಷ್ಠಾನವಾಗಬೇಕು. ನಾವು ಸುಮ್ಮನೆ ಕುಳಿತಿಲ್ಲ. ದೌರ್ಜನ್ಯ ನಡೆದಾಗ ಅಲ್ಲಿಗೆ ಭೇಟಿ ಕೊಟ್ಟಿದ್ದೇವೆ. ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದೇವೆ ಎಂದರು.

ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ನಮ್ಮಲ್ಲಿ ಹೈಕಮಾಂಡ್ ಇದೆ. ಪಕ್ಷದ ಚೌಕಟ್ಟಿನಲ್ಲಿ ನಾವು ಚರ್ಚೆ ಮಾಡ್ತೇವೆ.‌ಆ ಸಂದರ್ಭ ಬಂದಾಗ ನಾವು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾವು ಮುಖ್ಯವಾಹಿನಿಗೆ ಬರೋಕೆ ಪಕ್ಷ ನೆರವು ಮಾಡಿದೆ ಎಂದರು.

'ವೈಯುಕ್ತಿಕವಾಗಿ ಇಲ್ಲಿ ಪ್ರಶ್ನೆ ಉದ್ಭವಿಸುವುದಿಲ್ಲ.‌ ನಾವೆಲ್ಲ ಒಟ್ಟಿಗೆ ಇದ್ದರೆ ಶಕ್ತಿ ಬರಲಿದೆ.‌ ಪಕ್ಷವನ್ನು ಸದೃಢ ಮಾಡಲು ಹೊರಟಿದ್ದೇವೆ. ಮುಖ್ಯಮಂತ್ರಿ ಯಾರು ಅನ್ನೋದು ಪಕ್ಷ ನಿರ್ಧರಿಸಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT